ಸಂತೇಮರಹಳ್ಳಿ: ಕುದೇರು ಚಾಮುಲ್ ರಾಜ್ಯದಲ್ಲೇ ಮಾದರಿ ಒಕ್ಕೂಟ ಮಾಡಲು ಪ್ರತಿಯೊಬ್ಬ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಹಕಾರ ಅಗತ್ಯವಾಗಿದೆ ಎಂದು ಶಾಸಕ ಎ.ಆರ್.ಕೃಷ್ಟಮೂರ್ತಿ ಅಭಿಪ್ರಾಯಪಟ್ಟರು.
ಸಮೀಪದ ಕುದೇರು ಚಾಮುಲ್‌ಗೆ ಶನಿವಾರ ಭೇಟಿ ನೀಡಿ ಘಟಕದಲ್ಲಿ ತಯಾರಾಗುವ ಉತ್ಪನ್ನಗಳನ್ನು ಪರಿಶೀಲಿಸಿ ಅವರು ಮಾತನಾಡಿದರು. ಜಿಲ್ಲೆಯ ಹಿರಿಯ ರಾಜಕಾರಣಿ ದಿವಂಗತ ಬಿ.ರಾಚಯ್ಯನವರು ರೇಷ್ಮೆ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲೆಯ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕುದೇರು ಗ್ರಾಮದಲ್ಲಿ 20 ಎಕರೆ ಪ್ರದೇಶದಲ್ಲಿ ರೇಷ್ಮೆ ತರಬೇತಿಗಾಗಿ ಜಾಗ ಮೀಸಲಿಟ್ಟಿದ್ದರು. ಹಿಂದೆ ಮೈಸೂರು ಹಾಗೂ ಚಾಮರಾಜನಗರ ಸೇರಿ ಒಕ್ಕೂಟವಾಗಿತು. ದಿವಗಂತ ಎಚ್.ಎಸ್.ಮಹದೇವಪ್ರಸಾದ್ ಅವರು ಸಹಕಾರ ಮಂತ್ರಿಯಾಗಿದ್ದ ಸಂಧರ್ಭದಲ್ಲಿ ಜಿಲ್ಲೆಗೆ ಪ್ರತ್ಯೇಕ ಚಾಮುಲ್ ಘಟಕ ಸ್ಥಾಪನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಚಾಮುಲ್‌ನಲ್ಲಿ ಸಾವಿರಾರು ಮಂದಿಗೆ ಉದ್ಯೋಗ ದೊರಕುವಂತಾಗಿದೆ. ಅವರನ್ನು ಜಿಲ್ಲೆಯ ಜನತೆ ಸ್ಮರಿಸಬೇಕಾಗಿದೆ ಎಂದು ತಿಳಿಸಿದರು.
ಚಾಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ರಾಜಕುಮಾರ್ ಮಾತನಾಡಿ, ಜಿಲ್ಲೆಯ ವ್ಯಾಪ್ತಿಯಿಂದ ಚಾಮುಲ್‌ಗೆ ಪ್ರತಿನಿತ್ಯ 2.5 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಇದರಲ್ಲಿ ಮೊಸರು, ಬೆಣ್ಣೆ, ತುಪ್ಪಗಳನ್ನು ತಯಾರು ಮಾಡಲಾಗುತ್ತಿದೆ. 1.5 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಇನ್ನುಳಿದ 1 ಲಕ್ಷ ಲೀಟರ್ ಹಾಲಿನಿಂದ ಗುಡ್‌ಲೈಫ್ ತಯಾರು ಮಾಡಲಾಗುತ್ತಿದೆ. ಜಿಲ್ಲೆ ವ್ಯಾಪ್ತಿಯಲ್ಲಿ 46 ಪಾರ್ಲರ್‌ಗಳನ್ನು ಸ್ಥಾಪನೆ ಮಾಡಲಾಗಿದೆ. ಜತೆಗೆ ಹೆಚ್ಚಿನ ಪಾರ್ಲರ್‌ಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಹೊರ ರಾಜ್ಯಗಳಾದ ಕೇರಳ, ತಮಿಳುನಾಡಿಗೆ ಪ್ರತಿನಿತ್ಯ 20 ಸಾವಿರ ಲೀಟರ್ ಹಾಲು ಹಾಗೂ ತಿರುಪತಿಗೆ ಪ್ರತಿನಿತ್ಯ ತುಪ್ಪ ಕಳುಹಿಸಲಾಗುತ್ತಿದೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ಐಸ್‌ಕ್ರೀಂ ಘಟಕ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಚಾಮುಲ್‌ಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಬೇಕಿದೆ. ಶಾಸಕರು ಕ್ರಮ ವಹಿಸಬೇಕೆಂದು ಮನವಿ ಮಾಡಿದರು.
ಚಾಮುಲ್ ನಿರ್ದೇಶಕರಾದ ಕಮರವಾಡಿ ರೇವಣ್ಣ, ನಂಜುಂಡಸ್ವಾಮಿ, ಆಡಳಿತ ವ್ಯವಸ್ಥಾಪಕ ಶ್ರೀಕಾಂತ್, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಗುತ್ತಿಗಾರರಾದ ಸಂತೇಮರಹಳ್ಳಿ ಪಶಿ, ಉಮ್ಮತ್ತೂರು ಶಿವಣ್ಣ, ಗಣಗನೂರು ನಾಗಯ್ಯ, ಕೆಇಬಿ ಗುತ್ತಿಗೆದಾರ ಮಹೇಶ್, ಮುಖಂಡರಾದ ತೋಟೇಶ್, ಕಂದಹಳ್ಳಿ ನಂಜುಂಡಸ್ವಾಮಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.