ADVERTISEMENT

ಕಾಡಾನೆ ಹಾವಳಿ; ಲಿಂಗನಪುರ ಗ್ರಾಮಸ್ಥರ ಪ್ರತಿಭಟನೆ

ಜಮೀನುಗಳಿಗೆ ನುಗ್ಗಿದ ಕಾಡಾನೆಗಳು ಹಿಂಡು, ಬೆಳೆ ನಾಶ, ಡಿಸಿ ಭೇಟಿ, ಆನೆ ಕಾರ್ಯ ಪಡೆ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 16:03 IST
Last Updated 23 ಜನವರಿ 2023, 16:03 IST
ಕಾಡಾನೆಗಳ ಹಾವಳಿ ತಪ್ಪಿಸುವಂತೆ ಆಗ್ರಹಿಸಿ ಚಾಮರಾಜನಗರ ತಾಲ್ಲೂಕಿನ ಲಿಂಗನಪುರದಲ್ಲಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು
ಕಾಡಾನೆಗಳ ಹಾವಳಿ ತಪ್ಪಿಸುವಂತೆ ಆಗ್ರಹಿಸಿ ಚಾಮರಾಜನಗರ ತಾಲ್ಲೂಕಿನ ಲಿಂಗನಪುರದಲ್ಲಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ತಮಿಳುನಾಡಿನ ಸತ್ಯಮಂಗಲ ಅರಣ್ಯದಿಂದ ಬರುವ ಕಾಡಾನೆಗಳ ಹಿಂಡು ಭಾನುವಾರ ರಾತ್ರಿ ತಾಲ್ಲೂಕಿನ ಲಿಂಗನಪುರ ಗ್ರಾಮದ ಹಲವು ಗ್ರಾಮಗಳ ಕೃಷಿ ಜಮೀನುಗಳಿಗೆ ನುಗ್ಗಿ ಬಾಳೆ, ಹೂಕೋಸು, ತೆಂಗಿನ ಗಿಡಗಳನ್ನು ನಾಶ ಮಾಡಿವೆ.

ಕಾಡಾನೆಗಳ ಹಾವಳಿಯಿಂದ ಬೇಸತ್ತ ಲಿಂಗನಪುರ ಗ್ರಾಮಸ್ಥರು, ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿ ಸೋಮವಾರ ಗ್ರಾಮದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಅರಣ್ಯ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಆನೆಗಳು ಜಮೀನಿಗೆ ನುಗ್ಗದಂತೆ ಮಾಡಲು ಕಂದಕ, ಸೌರ ಬೇಲಿ ನಿರ್ಮಾಣ ಮಾಡಬೇಕು. ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದರು.

ADVERTISEMENT

ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಅವರು ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು.

‘ತಮಿಳುನಾಡಿನ ಅರಣ್ಯ ಭಾಗದಿಂದ ಬರುತ್ತಿರುವುದರಿಂದ ಅಲ್ಲಿನ ಅರಣ್ಯ ಅಧಿಕಾರಿಗಳೊಂದಿಗೆ ಮಾತನಾಡಿ ಆನೆಗಳು ಕರ್ನಾಟಕದತ್ತ ಬರದಂತೆ ಕ್ರಮವಹಿಸಲು ತಿಳಿಸಲಾಗುವುದು. ಸೌರಬೇಲಿ ನಿರ್ಮಾಣ ಮಾಡಲು ಕ್ರಮವಹಿಸಲಾಗುವುದು. ಬೆಳೆ ನಷ್ಟ ಅನುಭವಿಸಿದ ರೈತರಿಗೆ ಶೀಘ್ರ ಪರಿಹಾರ ನೀಡಲಾಗುವುದು‘ ಎಂದು ಭರವಸೆ ನೀಡಿದರು. ಆ ಬಳಿಕ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು.

ಬೆಳೆಹಾನಿ: ಭಾನುವಾರ ರಾತ್ರಿ ಕಾಡಾನೆಗಳ ಹಿಂಡು ನಡೆಸಿದ್ದರಿಂದ ಗ್ರಾಮದ ಮಹದೇವಪ್ಪ, ಪ್ರಭುಸ್ವಾಮಿ, ಗುರುಮಲ್ಲಪ್ಪ, ರೇವೆಗೌಡ ಅವರ ಜಮೀನುಗಳಲ್ಲಿ ಬಾಳೆ, ಹೂಕೋಸು, ತೆಂಗಿನ ಗಿಡಗಳು ನಾಶವಾಗಿವೆ.

ಅರಕಲವಾಡಿ ಗ್ರಾಮದ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ 10 ದಿನಗಳಿಂದ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಜನರು ತೊಂದರೆ ಅನುಭವಿಸುತ್ತಿದ್ದಾರೆ.

‘ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಹಾಗೂ ಸಿಬ್ಬಂದಿ ಆನೆಗಳನ್ನು ಕಾಡಿಗೆ ಅಟ್ಟಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಇಲ್ಲಿಂದ ಓಡಿಸದ ಕೂಡಲೇ ತಮಿಳುನಾಡಿನ ರೈತರು ಹಾಗೂ ಅರಣ್ಯ ಇಲಾಖೆಯವರು ವಾಪಸ್‌ ಇತ್ತ ಅಟ್ಟುತ್ತಿದ್ದಾರೆ. ಇದರಿಂದ ಪದೇ ಪದೇ ಇಲ್ಲಿನ ಗ್ರಾಮಗಳ ಜಮೀನುಗಳಿಗೆ ನುಗ್ಗುತ್ತಿವೆ. 100ಕ್ಕೂ ಹೆಚ್ಚು ಆನೆಗಳಿದ್ದು, ಎರಡು ಮೂರು ತಂಡಗಳಾಗಿ ನಮ್ಮ ಜಮೀನುಗಳಿಗೆ ಬರುತ್ತಿವೆ. ಏಳು ವರ್ಷಗಳ ಹಿಂದೆ ಇದೇ ರೀತಿ ಆಗಿತ್ತು. ಆಗ ಇಲ್ಲಿನ ಅರಣ್ಯ ಅಧಿಕಾರಿಗಳು ಹಾಗೂ ಅಲ್ಲಿನ ಅಧಿಕಾರಿಗಳು ಪರಸ್ಪರ ಸಮನ್ವಯ ನಡೆಸಿ ಕಾರ್ಯಾಚರಣೆ ಮಾಡಿ ಓಡಿಸಿದ್ದರು. ಅದೇ ರೀತಿ ಮಾಡಿದರೆ ಮಾತ್ರ ಸಮಸ್ಯೆ ಬಗೆಹರಿಯಲಿದೆ’ ಎಂದು ಅರಕಲವಾಡಿ ಗ್ರಾಮದ ಮುಖಂಡ ಮಹೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾರ್ಯಪಡೆ ಸಿಬ್ಬಂದಿ ನಿಯೋಜನೆ: ಈ ಮಧ್ಯೆ, ಆನೆಗಳನ್ನು ಕಾಡಿಗೆ ಓಡಿಸಲು ಹುಣಸೂರಿನಿಂದ ಆನೆ ಕಾರ್ಯಪಡೆಯ ಸಿಬ್ಬಂದಿ ಬಂದಿದ್ದು, ಕಾರ್ಯಾಚರಣೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.