ADVERTISEMENT

ಮದ್ಯ ಮಾರಾಟ: ಕರಗಿದ ಜನಸಂದಣಿ

ಕೆಲವು ಮಳಿಗೆಗಳಲ್ಲಿ ಮುಗಿದ ದಾಸ್ತಾನು, ಕೆಎಸ್‌ಬಿಸಿಎಲ್‌ನಿಂದ ಪೂರೈಕೆ

ಸೂರ್ಯನಾರಾಯಣ ವಿ
Published 6 ಮೇ 2020, 4:34 IST
Last Updated 6 ಮೇ 2020, 4:34 IST
ಚಾಮರಾಜನಗರದ ಎಂಎಸ್‌ಐಎಲ್‌ ಮಳಿಗೆಯೊಂದರಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಮದ್ಯ ಪ್ರಿಯರ ಸಂಖ್ಯೆ ಮಂಗಳವಾರ ಕಡಿಮೆ ಇತ್ತು
ಚಾಮರಾಜನಗರದ ಎಂಎಸ್‌ಐಎಲ್‌ ಮಳಿಗೆಯೊಂದರಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಮದ್ಯ ಪ್ರಿಯರ ಸಂಖ್ಯೆ ಮಂಗಳವಾರ ಕಡಿಮೆ ಇತ್ತು   

ಚಾಮರಾಜನಗರ: ಲಾಕ್‌ಡೌನ್‌ ಸಡಿಲಿಕೆ ಆದ ನಂತರ ಮದ್ಯದ ಅಂಗಡಿಗಳು ತೆರೆದ ಮೊದಲ ದಿನ ಜಿಲ್ಲೆಯಾದ್ಯಂತ ಮದ್ಯದ ಅಂಗಡಿಗಳಲ್ಲಿ ಕಂಡು ಬಂದ ಜನ ಸಂದಣಿ ಎರಡನೇ ದಿನವಾದ ಮಂಗಳವಾರ ಕಂಡು ಬರಲಿಲ್ಲ.

ಬಹುತೇಕ ಅಂಗಡಿಗಳ ಮುಂದೆ ಗ್ರಾಹಕರ ಸಂಚಾರ ವಿರಳವಾಗಿತ್ತು. ಎಂಎಸ್‌ಐಎಲ್‌ ಅಂಗಡಿಗಳಲ್ಲಿ ಮಾತ್ರ ಸ್ವಲ್ಪ ಗ್ರಾಹಕರು ಕಂಡು ಬಂದರು. ಶೇ 50ರಷ್ಟು ಜನಸಂದಣಿ ಕಡಿಮೆ ಇತ್ತು ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಮಾದೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮದ್ಯ ಪ್ರಿಯರು ಕಡಿಮೆ ಇದ್ದುದರಿಂದ ಎಲ್ಲ ಕಡೆಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವಿಕೆ ನಿಯಮ ಪಾಲನೆಯಾಯಿತು. ಮುಖಗವಸುಗಳನ್ನೂ ಧರಿಸಿದ್ದರು.

ADVERTISEMENT

ಲಾಕ್‌ಡೌನ್‌ ಪಾಲನೆಯ ನಿಯಮದ ಪಾಲನೆಯ ಮೇಲೆ ನಿಗಾ ಇಡುವುದಕ್ಕಾಗಿ ಜಿಲ್ಲಾಡಳಿತ ನೇಮಿಸಿರುವ ಫ್ಲೈಯಿಂಗ್‌ ಸ್ಕ್ವಾಡ್‌ನ ಅಧಿಕಾರಿಗಳು ವಿವಿಧ ಮದ್ಯದ ಅಂಗಡಿಗಳಿಗೆ ಭೇಟಿ ನೀಡಿ ಅಂತರ ಕಾಯುವುದು, ಮುಖಗವಸು ಧರಿಸುವುದು ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಗ್ರಾಹಕರಲ್ಲಿ ಹಾಗೂ ಅಂಗಡಿಗಳ ಮಾಲೀಕರು ಹಾಗೂ ಸಿಬ್ಬಂದಿಯಲ್ಲಿ ಜಾಗೃತಿ ಮೂಡಿಸುತ್ತಿದ್ದುದು ಕಂಡು ಬಂತು.ಅಂಗಡಿಗಳ ಮಾಲೀಕರು ಕೂಡ ಗ್ರಾಹಕರಿಗೆ ಸ್ಯಾನಿಟೈಸರ್‌ ನೀಡುವ ವ್ಯವಸ್ಥೆ ಮಾಡಿದ್ದರು.

ಹನೂರು ತಾಲ್ಲೂಕಿನ ಬೆಳತ್ತೂರು ಗ್ರಾಮಕ್ಕೆ ಕೋವಿಡ್‌ ಸೋಂಕಿತ ವ್ಯಕ್ತಿ ಬಂದು ಹೋಗಿದ್ದ ವಿಚಾರ ಹಾಗೂ 18 ಮಂದಿಯನ್ನು ಕ್ವಾರಂಟೈನ್‌ ಮಾಡಿದ ಸುದ್ದಿ ತಿಳಿಯುತ್ತಲೇ, ಜಿಲ್ಲೆಯಲ್ಲಿ ಮತ್ತೆ ಮದ್ಯದ ಅಂಗಡಿಗಳನ್ನು ಮುಚ್ಚಲಾಗುತ್ತದೆ ಎಂಬ ಭಯದಿಂದ ಕೆಲವರು ಹೆಚ್ಚೆಚ್ಚು ಮದ್ಯಗಳನ್ನು ಖರೀದಿಸಿದರು. ಇದರಿಂದ ಕೆಲವು ಅಂಗಡಿಗಳಲ್ಲಿ ಮಧ್ಯಾಹ್ನದ ಹೊತ್ತಿಗೆ ದಾಸ್ತಾನು ಮುಗಿಯಿತು. ಜಿಲ್ಲೆಗೆ ಮಂಗಳವಾರ ಬೆಳಿಗ್ಗೆಯೇ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ (ಕೆಎಸ್‌ಬಿಸಿಎಲ್‌) ಮದ್ಯ ಪೂರೈಕೆ ಮಾಡಿದ್ದರಿಂದ ಎಲ್ಲೂ ಮದ್ಯದ ಕೊರತೆ ಕಂಡು ಬರಲಿಲ್ಲ.

ದಾಸ್ತಾನು ಇದೆ

‘40 ದಿನಗಳ ನಂತರ ಸೋಮವಾರ ಮದ್ಯದ ಅಂಗಡಿಗಳು ತೆರೆದಿದ್ದರಿಂದ ಎಲ್ಲ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿತ್ತು. ಮಂಗಳವಾರ ಇಂತಹ ಸ್ಥಿತಿ ಇರಲಿಲ್ಲ. ಮದ್ಯದ ಅಂಗಡಿಗಳಲ್ಲಿ ಶೇ 50ರಷ್ಟು ಜನರ ಸಂಖ್ಯೆ ಇತ್ತು. ಸರಾಗವಾಗಿ ವ್ಯವಹಾರ ನಡೆದಿದೆ’ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತ ಮಾದೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮಲ್ಲಿ ಸಾಕಷ್ಟು ಮದ್ಯ ದಾಸ್ತಾನು ಇದೆ. ಸೋಮವಾರ ರಾತ್ರಿಯೇ ಕೆಎಸ್‌ಬಿಸಿಎಲ್‌ಗೆ ಬೇಡಿಕೆ ಇಟ್ಟಿದ್ದವು. ಮಂಗಳವಾರ ಬೆಳಿಗ್ಗೆ ಪೂರೈಸಿದೆ. ಹಾಗಾಗಿ, ಎಲ್ಲಿಯೂ ಕೊರತೆ ಉಂಟಾಗಿಲ್ಲ’ ಎಂದು ಅವರು ಹೇಳಿದರು.

41,778 ಲೀ. ಮದ್ಯ, 9,790 ಲೀ. ಬಿಯರ್‌ ಮಾರಾಟ

ಮೊದಲ ದಿನವಾದ ಸೋಮವಾರ ರಾತ್ರಿ ನಗರ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯದ ನಶೆ ಏರಿ ತೂರಾಡುವವರ ಸಂಖ್ಯೆ ಹೆಚ್ಚಿತ್ತು. ಹಲವು ದಿನಗಳ ನಂತರ ಮದ್ಯ ಸಿಕ್ಕಿದ್ದರಿಂದ ಬಹುತೇಕರು ಮಿತಿ ಮೀರಿ ಕುಡಿದಿದ್ದರು.

ಅಬಕಾರಿ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ ಮೊದಲ ದಿನ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ.

41,778 ಲೀಟರ್‌ಗಳಷ್ಟು ಮದ್ಯ ಬಿಕರಿಯಾಗಿದ್ದರೆ, 9,790 ಲೀಟರ್‌ಗಳಷ್ಟು ಬಿಯರ್‌ ಮಾರಾಟವಾಗಿದೆ.

ಚಾಮರಾಜನಗರ ತಾಲ್ಲೂಕಿನಲ್ಲಿ ಅತೀ ಹೆಚ್ಚು 17,344 ಲೀಟರ್‌ ಮದ್ಯ ಹಾಗೂ 4,368 ಲೀಟರ್‌ ಬಿಯರ್‌ ಮಾರಾಟವಾಗಿದೆ.

ಕೊಳ್ಳೇಗಾಲದಲ್ಲಿ 15,516 ಲೀಟರ್‌ ಮದ್ಯ ಮತ್ತು 4,010 ಲೀಟರ್‌ಗಳಷ್ಟು ಬಿಯರ್‌ ಅನ್ನು ಜನರು ಖರೀದಿಸಿದ್ದಾರೆ. ಗುಂಡ್ಲುಪೇಟೆಯಲ್ಲಿ 8,918 ಲೀಟರ್‌ ಮದ್ಯ ಹಾಗೂ 1,408 ಲೀಟರ್‌ ಬಿಯರ್ ಮಾರಾಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.