ADVERTISEMENT

ಸಾಲಮನ್ನಾ: ರೈತರ ಪಾಲಿಗೆ ಸಿಹಿ, ಕಹಿ

ದೊಡ್ಡ ಮಟ್ಟಿನ ಸಮಾಧಾನ ತರದ ಕುಮಾರಸ್ವಾಮಿ ಘೋಷಣೆ

ಸೂರ್ಯನಾರಾಯಣ ವಿ
Published 5 ಜುಲೈ 2018, 15:31 IST
Last Updated 5 ಜುಲೈ 2018, 15:31 IST

ಚಾಮರಾಜನಗರ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಸಾಲಮನ್ನಾದ ಲೆಕ್ಕಾಚಾರ ಜಿಲ್ಲೆಯ ಸಣ್ಣ ಹಿಡುವಳಿದಾರರಲ್ಲಿ ಸಂತಸ ತಂದಿದ್ದರೆ, ದೊಡ್ಡ ಮಟ್ಟದ ಕೃಷಿಕರಿಗೆ ಸಮಾಧಾನ ತಂದಿಲ್ಲ. ಎಲ್ಲ ಕೃಷಿ ಸಾಲ ಮನ್ನಾ ಆಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಕೆಲವರಿಗೆ ಇದು ನಿರಾಸೆ ಉಂಟು ಮಾಡಿದೆ.

ಸಾಲದ ಮೊತ್ತವನ್ನು ₹2 ಲಕ್ಷಕ್ಕೆ ಮಿತಿ ಗೊಳಿಸಿರುವುದರಿಂದ ದೊಡ್ಡ ರೈತ ಮತ್ತು ಸಣ್ಣ ರೈತ ಎಂದು ತಾರತ‌ಮ್ಯ ಮಾಡಿದಂತಾಗುತ್ತದೆ ಎಂಬ ಅಭಿಪ್ರಾಯವನ್ನು ರೈತ ಮುಖಂಡರು ವ್ಯಕ್ತಪಡಿಸಿದ್ದಾರೆ. ‘ಕುಮಾರಸ್ವಾಮಿ ಅವರು ಎಲ್ಲ ಬೆಳೆಸಾಲ ಮನ್ನಾ ಮಾಡುತ್ತೇನೆ ಎಂದು ಘೋಷಿಸಿದ್ದರು. ಆದರೆ, ಈಗ ಸಾಲದ ಮೊತ್ತವನ್ನು ₹ 2 ಲಕ್ಷಕ್ಕೆ ನಿಗದಿ ಪಡಿಸುವ ಮೂಲಕ ಮಾತು ತಪ್ಪಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರಿಂದ ಇಡೀ ರಾಷ್ಟ್ರವೇ ಅವರತ್ತ ದೃಷ್ಟಿ ನೆ‌ಟ್ಟಿತ್ತು. ಆದರೆ, ಈಗ ಅವರು ಎಲ್ಲರ ನಿರೀಕ್ಷೆ ಹುಸಿಗೊಳಿಸಿದ್ದಾರೆ’ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಹೊನ್ನೂರು ಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘2009ರ ಏಪ್ರಿಲ್‌ 1ರಿಂದ 2017ರ ಡಿಸೆಂಬರ್‌31ರ ನಡುವಿನ ಅವಧಿಯಲ್ಲಿ ಸಾಲ ಮಾಡಿದವರಿಗೆ ಮಾತ್ರ ಇದು ಅನ್ವಯವಾಗುತ್ತದೆ. 2018ರ ಮೇ 31ವರೆಗೂ ಇದನ್ನು ವಿಸ್ತರಿಸಬೇಕಿತ್ತು. ಅಲ್ಲದೇ ಈಗಾಗಲೇ ಸಾಲ ಪಾವತಿ ಮಾಡಿದವರ ಖಾತೆಗೆ ಪ್ರೋತ್ಸಾಹ ಧನವಾಗಿ ₹25 ಸಾವಿರ ನೀಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಇದು ಸರಿಯಲ್ಲ; ಆ ರೈತರಿಗೂ ಸಂಪೂರ್ಣ ₹2 ಲಕ್ಷ ವಾವತಿಸಬೇಕು’ ಎಂದು ಅವರು ಒತ್ತಾಯಿಸಿದರು.

ADVERTISEMENT

‘ಬಜೆಟ್‌ನಲ್ಲಿ ರೈತರ ಹಿತಕಾಯುವ ವಿಷಯಗಳಿಲ್ಲ. ಸಾವಯವ, ನೈಸರ್ಗಿಕ ಕೃಷಿಯ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ರೈತರು ಬೆಳೆಯುವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವವರೆಗೆ ರಾಜ್ಯದ ರೈತರ ಸಮಸ್ಯೆ ಬಗೆಹರಿಯುವುದಿಲ್ಲ. ಸಾಲ ಮನ್ನಾ ಎಂಬುದು ರೈತರ ಕಣ್ಣೊರೆಸುವ ತಂತ್ರವಷ್ಟೆ’ ಎಂದು ಅವರು ಹೇಳಿದರು.

ಲಾಭವಿಲ್ಲ:‘ಈ ಸಾಲಮನ್ನಾದಿಂದ ದೊಡ್ಡ ಮಟ್ಟಿನ ಲಾಭ ಏನೂ ಆಗುವುದಿಲ್ಲ. ನಾವು ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆ ಮತ್ತು ಬೆಲೆ ಸಿಕ್ಕಿದರೆ ಸಾಲ ಮನ್ನಾ ಮಾಡಬೇಕು ಎಂದು ಹೇಳುವುದಿಲ್ಲ. ಸರ್ಕಾರಗಳು ರೈತರಿಗೆ ಲಾಭವಾಗುವ ಕಾರ್ಯಕ್ರಮಗಳನ್ನು ರೂಪಿಸಬೇಕು’ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸಿದ್ದರಾಜು ಹೇಳಿದರು.

ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೇ ಹೋದಾಗ ರೈತರಿಗೆ ಸಾಲ ಮಾಡದೆ ಬೇರೆ ವಿಧಿಯೇ ಇಲ್ಲ. ಹೀಗಿರುವಾಗ ಎಷ್ಟು ಬಾರಿ ಸಾಲ ಮನ್ನಾ ಮಾಡಿದರೂ ಈ ಪ್ರಕ್ರಿಯೆ ಮುಂದುವರಿಯುತ್ತಲೇ ಇರುತ್ತದೆ. ರೈತನ ಅಭ್ಯುದಯಕ್ಕೆ ವೈಜ್ಞಾನಿಕ‌ವ್ಯವಸ್ಥೆಯನ್ನು ಜಾರಿಗೆ ತರುವರೆಗೆ ಇದೊಂದು ರಾಜಕೀಯ ಗಿಮಿಕ್‌ನಂತೆಯೇ ಕಾಣುತ್ತದೆ ಎಂಬುದು ಅವರ ಅಭಿಪ್ರಾಯ.

‘ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಕುಮಾರಸ್ವಾಮಿ ಅವರು ಸಾಲಮನ್ನಾ ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಈಗ ಎರಡು ಲಕ್ಷಕ್ಕೆ ಮಿತಿಗೊಳಿಸುವ ಮೂಲಕ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ಸಾಲದಿಂದಾಗಿ ದೊಡ್ಡ ಕೃಷಿಕರಿಗೂ ತೊಂದರೆಯಾಗುತ್ತಿದೆ. ಆದರೆ, ಈ ಯೋಜನೆಯಿಂದ ಅವರಿಗೆ ಹೆಚ್ಚು ಅನುಕೂಲವಿಲ್ಲ’ ಎಂದು ಗುಂಡ್ಲುಪೇಟೆ ಶಾಸಕ ಸಿ.ಎಸ್‌. ನಿರಂಜನ್‌ಕುಮಾರ್‌ ಹೇಳಿದರು.

‘ಕಾರ್ಪೊರೇಟ್‌ ರೈತರ ಸಾಲವನ್ನುಸರ್ಕಾರ ಮನ್ನಾ ಮಾಡಬೇಕು ಎಂದು ನಾವು ಹೇಳುತ್ತಿಲ್ಲ. ಆದರೆ, ಎಲ್ಲರಂತೆ ಕೃಷಿ ಮಾಡುತ್ತಿರುವ ದೊಡ್ಡ ರೈತರ ಸಾಲ ಮನ್ನಾ ಮಾಡಬೇಕು ಎಂಬುದಷ್ಟೇ ನಮ್ಮ ಒತ್ತಾಯ’ ಎಂದು ಜಿಲ್ಲೆಯ ಮತ್ತೊಬ್ಬ ರೈತ ಮುಖಂಡ ಮಹೇಶ್‌ ಪ್ರಭು ‘ಪ್ರಜಾವಾಣಿ’ ತಿಳಿಸಿದರು.

‘ಕೆಲವು ಅವಿಭಕ್ತ ಕುಟುಂಬಗಳಲ್ಲಿ ರೈತರು ದೊಡ್ಡ ಮಟ್ಟದಲ್ಲೇ ಕೃಷಿ ಮಾಡುತ್ತಿದ್ದಾರೆ. ಅವರೂ ತುಂಬಾಸಾಲ ಮಾಡಿಕೊಂಡಿದ್ದಾರೆ. ದೊಡ್ಡ ಮಟ್ಟಿನ ಲಾಭವೇನೂ ಅವರಿಗೆ ಸಿಗುತ್ತಿವೆ. ₹2 ಲಕ್ಷ ನಿಗದಿ ಪಡಿಸಿರುವುದರಿಂದ ಇಂತಹ ಹಿಡುವಳಿದಾರರಿಗೆ ದೊಡ್ಡ ಪ್ರಯೋಜನವಾಗುವುದಿಲ್ಲ’ ಎಂದು ಅವರು ಹೇಳಿದರು.

‘ಈ ರೀತಿ ಮಾಡುತ್ತಿದ್ದರೆ ಇದು ಜನಪ್ರಿಯ ಕಾರ್ಯಕ್ರಮವಾಗುತ್ತದಷ್ಟೆ. ರಾಜಕೀಯ ಗಿಮಿಕ್‌ ಆಗುತ್ತದೆ. ತಾರತಮ್ಯ ಮಾಡಬೇಡಿ. ಇಡೀ ರೈತ ಸಮುದಾಯವನ್ನು ಒಂದಾಗಿ ಕಾಣಬೇಕು. ನಮ್ಮ ಬೆಳೆಗೆ ಸೂಕ್ತ ಮಾರುಕಟ್ಟೆ ಕಲ್ಪಿಸಿದರೆ ಸಾಲ ಮನ್ನಾ ಮಾಡಿ ಎಂದು ನಾವು ಕೇಳುವುದೇ ಇಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.