ADVERTISEMENT

‘ಬಾಡಿದ’ ಹೂವು ಮಾರುವವರ ಬದುಕು

ಹೂವನ್ನೇ ನಂಬಿ ಬದುಕುವ 300 ಕುಟುಂಬಗಳು, ಆರು ದಿನಗಳಿಂದ ಕೂಲಿ ಇಲ್ಲ

ಸೂರ್ಯನಾರಾಯಣ ವಿ
Published 31 ಮಾರ್ಚ್ 2020, 20:00 IST
Last Updated 31 ಮಾರ್ಚ್ 2020, 20:00 IST
ಚೆನ್ನೀಪುರದ ಮೋಳೆಯ ಮಹಿಳೆಯೊಬ್ಬರು ಲಭ್ಯ ಇರುವ ಹೂವುಗಳನ್ನು ಕಟ್ಟುತ್ತಿರುವುದು
ಚೆನ್ನೀಪುರದ ಮೋಳೆಯ ಮಹಿಳೆಯೊಬ್ಬರು ಲಭ್ಯ ಇರುವ ಹೂವುಗಳನ್ನು ಕಟ್ಟುತ್ತಿರುವುದು   

ಚಾಮರಾಜನಗರ: ಕೊರೊನಾ ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಹೇರಲಾಗಿರುವ ದಿಗ್ಬಂಧನದಿಂದ ಜಿಲ್ಲೆಯಾದ್ಯಂತ ಪುಷ್ಪೋದ್ಯಮ ನೆಲಕ್ಕಚ್ಚಿದ್ದು, ಹೂವಿನ ವ್ಯಾಪಾರವನ್ನೇ ನಂಬಿಕೊಂಡಿರುವ ನಗರದ ಚೆನ್ನೀಪುರದಮೋಳೆಯ 300 ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.

ಚಾಮರಾಜನಗರ ನಗರಸಭಾ ವ್ಯಾಪ್ತಿಗೆ ಬರುವ ಚೆನ್ನೀಪುರದ ಮೋಳೆ ಹೂವಿನ ಉದ್ಯಮಕ್ಕೆ ಪ್ರಸಿದ್ಧಿ. ಸುಮಾರು 2,000ಕ್ಕೂ ಹೆಚ್ಚು ಜನರು ಇಲ್ಲಿ ವಾಸಿಸುತ್ತಿದ್ದಾರೆ. ಶೇ 90‌ ಮಂದಿ ಹೂವಿಗೆ ಸಂಬಂಧಿಸಿದ ಕೆಲಸದಲ್ಲಿ ತೊಡಗಿದ್ದಾರೆ. ಕೆಲವರು ಬಿಡಿ ಹೂವಿನ ಅಂಗಡಿಗಳನ್ನು ಇಟ್ಟುಕೊಂಡಿದ್ದರೆ, ಇನ್ನು ಕೆಲವರು ಅಲ್ಲಿಂದ ಹೂವುಗಳನ್ನು ಖರೀದಿಸಿ ಅದನ್ನು ಕಟ್ಟುವ ಕೆಲಸ, ಮತ್ತೂ ಕೆಲವರು ಅದನ್ನು ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದರು.ದಿಗ್ಬಂಧನ ಹೇರಿದ ನಂತರದ ಆರು ದಿನಗಳಲ್ಲಿ ಇಲ್ಲಿಯವರಿಗೆ ಕೆಲಸ ಇಲ್ಲದಂತಾಗಿದೆ.

ಚೆನ್ನೀಪುರದ ಮೋಳೆಯಲ್ಲಿ ಎಂಟು ಬಿಡಿ ಹೂವಿನ ಮಾರಾಟ ಅಂಗಡಿಗಳಿವೆ. ಹೂವಿನ ಬೆಳೆಗಾರರು ಸೇವಂತಿಗೆ, ಚೆಂಡು ಹೂ, ಕನಕಾಂಬರ, ಮಲ್ಲಿಗೆ ಸೇರಿದಂತೆವಿವಿಧ ಹೂವುಗಳನ್ನು ಇಲ್ಲಿಗೆ ತಂದು ಮಾರಾಟ ಮಾಡುತ್ತಿದ್ದರು. ಸಂಚಾರ ನಿರ್ಬಂಧಿಸಿರುವುದರಿಂದ, ಅಂಗಡಿ ಮುಂಗಟ್ಟುಗಳು ಮುಚ್ಚಿರುವುದರಿಂದ ಜನರ ಓಡಾಟ ಇಲ್ಲ. ಹೂವುಗಳಿಗೆ ಬೇಡಿಕೆ ಇಲ್ಲ. ಬೆಳೆಗಾರರು ಹೂವುಗಳನ್ನು ಕೊಯ್ಯುತ್ತಿಲ್ಲ.

ADVERTISEMENT

ಗ್ರಾಮದಲ್ಲಿರುವ ಬಹುತೇಕ ಕುಟುಂಬಗಳ ಮಹಿಳೆಯರು ಒಂದಲ್ಲ ಒಂದು ರೀತಿಯಲ್ಲಿ ಹೂವಿನ ಕೆಲಸದಲ್ಲಿ ತೊಡಗಿದ್ದಾರೆ. ಬೆಳಿಗ್ಗೆ 5ಗಂಟೆಗೆ ಹೂವುಗಳನ್ನು ಕಟ್ಟಿ ನಗರಕ್ಕೆ ಹೊತ್ತೊಯ್ದು ಬಡಾವಣೆಗಳಲ್ಲಿ ಹಾಗೂ ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಕೆಲವು ಮಹಿಳೆಯರು ಹೂವಿನ ಮಾಲೆಯನ್ನು ಕಾಯಂ ಆಗಿ ಅಂಗಡಿಗಳು, ಕಚೇರಿಗಳಿಗೆ ನೀಡುತ್ತಿದ್ದರು. ದಿನಕ್ಕೆ ₹250–₹300ವರೆಗೂ ದುಡಿಯುತ್ತಿದ್ದರು. ವಾರದಿಂದೀಚೆಗೆ ಅದಕ್ಕೆ ಕುತ್ತು ಬಂದಿದೆ. ಇದೇ ಪರಿಸ್ಥಿತಿ ಇನ್ನೆಷ್ಟು ದಿನ ಮುಂದುವರಿಯಲಿದೆಯೋ ಎಂಬ ಆತಂಕದಲ್ಲಿ ಅವರಿದ್ದಾರೆ.

‘ಹೂವು ಕಟ್ಟಿ, ಮಾರಾಟ ಮಾಡುವ ಕೆಲಸ ಬಿಟ್ಟರೆ ನನಗೆ ಬೇರೇನೂ ಗೊತ್ತಿಲ್ಲಪ್ಪ. ದಿನಾಲೂ ₹150–₹200 ರವರೆಗೆ ದುಡಿಯುತ್ತಿದೆ. ಆರು ದಿನಗಳಿಂದ ಹೂವುಗಳು ಬರುತ್ತಿಲ್ಲ. ಕೈಗೂ ಕೆಲಸ ಇಲ್ಲ. ಇನ್ನು ಎಷ್ಟು ದಿನ ಸಂಪಾದನೆ ಇಲ್ಲದೆ ಕುಳಿತುಕೊಳ್ಳಬೇಕೋ ಎಂಬುದು ಗೊತ್ತಿಲ್ಲ’ ಎಂದು ಚೆನ್ನೀಪುರದ ಮೋಳೆಯ 50ರ ಹರೆಯದ ನಂಜಮ್ಮ ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು.

‘ನಮ್ಮ ಮೋಳೆಯಲ್ಲಿ ಎಂಟು ಅಂಗಡಿಗಳಿವೆ. ಪ್ರತಿ ದಿನ ₹10 ಸಾವಿರದಿಂದ ₹20 ಸಾವಿರದವರೆಗೆ ಹೂವಿನ ವ್ಯಾಪಾರ ನಡೆಯುತ್ತಿತ್ತು. ದಿಗ್ಬಂಧನ ಹೇರಿದಾಗಿನಿಂದ ಎಲ್ಲವೂ ನಿಂತು ಹೋಗಿದೆ. ಹೂವಿಗೆ ಎಲ್ಲೂ ಬೇಡಿಕೆ ಇಲ್ಲ. ರೈತರು ಕಟಾವು ಮಾಡದೆ ಬಿಟ್ಟಿದ್ದಾರೆ. ನಮ್ಮಲ್ಲಿ 300 ಮನೆಗಳಿದ್ದು, ಪ್ರತಿ ಮನೆಯವರು ಅದರಲ್ಲೂ ಹೆಚ್ಚಾಗಿ ಮಹಿಳೆಯರು ಹೂವು ಕಟ್ಟುವ, ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು. ಒಂದಷ್ಟು ಸಂಪಾದಿಸುತ್ತಿದ್ದರು. ಈಗ ಕೆಲಸವಿಲ್ಲದೆ ಅಷ್ಟು ಕುಟುಂಬಗಳಿಗೂ ತೊಂದರೆಯಾಗಿದೆ’ ಎಂದು ಹೂವಿನ ವ್ಯಾಪಾರಿ ರವಿ ಅವರು ಈಗಿನ ಸ್ಥಿತಿಯನ್ನು ವಿವರಿಸಿದರು.

‘ದಿನಂಪ್ರತಿ ಕೂಲಿಗಾಗಿ ಹೂವು ಕಟ್ಟಿಕೊಡುವವರು ಹಾಗೂ ನಗರಕ್ಕೆ ಹೋಗಿ ಮಾರಾಟ ಮಾಡುವವರು ದಿನನಿತ್ಯ ಸಂಪಾದಿಸುವ ಹಣದಿಂದಲೇ ಜೀವನ ನಡೆಸುತ್ತಿದ್ದರು. ಈಗ ಅವರಿಗೆ ಸಂಪಾದನೆ ಇಲ್ಲ. ಮನೆಯಲ್ಲೇ ಸುಮ್ಮನೆ ಕುಳಿತಿದ್ದಾರೆ. ಬೇರೆಲ್ಲೂ ಕೆಲಸವೂ ಇಲ್ಲ. ಜೀವನ ದೂಡುವುದು ಅವರಿಗೆ ಕಷ್ಟವಾಗಿದೆ’ ಎಂದು ಹೇಳಿದರು.

ಕಡಿದಿದೆ ಸರಪಣಿ...

‘ಪುಷ್ಪೋದ್ಯಮ ಎನ್ನುವುದು ಸರಪಣಿಯಂತೆ. ಇಲ್ಲಿ ಬೆಳೆಗಾರರು, ವ್ಯಾಪಾರಿಗಳು, ಹೂ ಕಟ್ಟುವವರು, ಮಾರಾಟ ಮಾಡುವವರು ಹಾಗೂ ಗ್ರಾಹಕರು ಪರಸ್ಪರ ಕೊಂಡಿಗಳಂತೆ ಇರುತ್ತಾರೆ. ಕೊರೊನಾ ವೈರಸ್‌ ಭೀತಿಯಿಂದ ಕೈಗೊಳ್ಳಲಾಗಿರುವ ಮುಂಜಾಗ್ರತಾ ಕ್ರಮಗಳಿಂದಾಗಿ ಈ ಕೊಂಡಿಯೇ ತುಂಡಾಗಿದೆ. ಬೆಳೆಗಾರರ ತೋಟದಲ್ಲಿ ಹೂವುಗಳಿವೆ. ಆದರೆ, ಗ್ರಾಹಕರು ಇಲ್ಲದೇ ಇರುವುದರಿಂದ ಸರಪಣಿ ಕಾರ್ಯನಿರ್ವಹಿಸುವುದಿಲ್ಲ. ಇದರಿಂದ ಎಲ್ಲ ಐವರಿಗೂ ತೊಂದರೆಯಾಗಿದೆ’ ಎಂದು ರವಿ ಅವರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.