ADVERTISEMENT

ಲೋಕ ಅದಾಲತ್‌: ಚಾಮರಾಜನಗರ ಜಿಲ್ಲೆಗೆ 7ನೇ ಸ್ಥಾನ

ದಾಖಲೆ ಪ್ರಮಾಣದಲ್ಲಿ ಪ್ರಕರಣ ಇತ್ಯರ್ಥ–ಜಿಲ್ಲಾ ಪ್ರಧಾನ ನ್ಯಾಯಾಧೀಶ ಸದಾಶಿವ ಎಸ್‌.ಸುಲ್ತಾನ್‌ ಪುರಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 16:46 IST
Last Updated 19 ಆಗಸ್ಟ್ 2021, 16:46 IST
ಸದಾಶಿವ ಎಸ್‌.ಸುಲ್ತಾನ್‌ಪುರಿ
ಸದಾಶಿವ ಎಸ್‌.ಸುಲ್ತಾನ್‌ಪುರಿ   

ಚಾಮರಾಜನಗರ: ‘ಜಿಲ್ಲೆಯ ನ್ಯಾಯಾಲಯಗಳಲ್ಲಿ ಕಳೆದ ಶನಿವಾರ (ಆ.14) ಹಾಗೂ ಸೋಮವಾರ (ಆ.16) ನಡೆದ ಮೆಗಾ ಲೋಕ ಅದಾಲತ್‌ನಲ್ಲಿ 3,659ಪ್ರಕರಣಗಳು ಇತ್ಯರ್ಥವಾಗಿದ್ದು, ಜಿಲ್ಲೆಗೆ 7ನೇ ಸ್ಥಾನ ಲಭಿಸಿದೆ’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾಶಿವ ಎಸ್‌.ಸುಲ್ತಾನ್‌ಪುರಿ ಅವರು ಗುರುವಾರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಜಿಲ್ಲೆಯ ನ್ಯಾಯಾಲಯಗಳಲ್ಲಿ 20,148 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದು, ಅದಾಲತ್‌ಗೆ 7,303 ಪ್ರಕರಣಗಳನ್ನು ಗುರುತಿಸಲಾಗಿತ್ತು. ಈ ಪೈಕಿ ಶೇ 49.06ರಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ₹8.19 ಕೋಟಿ ಮೊತ್ತದ ಪರಿಹಾರವನ್ನು ಕೊಡಿಸಲಾಗಿದೆ’ ಎಂದು ಹೇಳಿದರು.

ಹಳೆಯ ಪ್ರಕರಣ ಇತ್ಯರ್ಥ: ಈ ಬಾರಿಯ ಲೋಕ ಅದಾಲತ್‌ನಲ್ಲಿ ಹಲವು ಹಳೆಯ ಹಾಗೂ ಕೌಟುಂಬಿಕ ಪ್ರಕರಣಗಳು ಇತ್ಯರ್ಥವಾಗಿವೆ. 1999ರಲ್ಲಿ ದಾಖಲಾದ ಪ್ರಕರಣವೊಂದು 21 ವರ್ಷಗಳಿಂದ ನ್ಯಾಯಾಲಯದಲ್ಲಿ ಇತ್ಯರ್ಥವಾಗಿರಲಿಲ್ಲ. ವೈದ್ಯ ದಂಪತಿ‌ ನಡುವಿನ ಪ್ರಕರಣವೂ ರಾಜಿ ಸಂಧಾನದ ಮೂಲಕ ಇತ್ಯರ್ಥವಾಗಿ ಸುಖಾಂತ್ಯ ಕಂಡಿದೆ. ಇಂತಹ ಹಲವು ವ್ಯಾಜ್ಯಗಳು ವಿಲೇವಾರಿಯಾಗಿರುವುದು ಈ ಬಾರಿಯ ಅದಾಲತ್‌ನ ವಿಶೇಷ ಎಂದು ನ್ಯಾಯಾಧೀಶರು ಹೇಳಿದರು.

ADVERTISEMENT

‘ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಹಲವು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಇದರಿಂದ ನ್ಯಾಯಾಲಯ ಹಾಗೂ ಕಕ್ಷಿದಾರರ ಸಮಯ, ಶ್ರಮ ಉಳಿತಾಯದ ಜೊತೆಗೆ ಕಕ್ಷಿದಾರರಿಗೆ ಶೀಘ್ರವಾಗಿ ನ್ಯಾಯ ಸಿಕ್ಕಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಿವೆ‌’ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ್ ಅವರು ಮಾತನಾಡಿ, ‘ಲೋಕ ಅದಾಲತ್ ಕೇವಲ ಪ್ರಚಾರಕ್ಕೆ ಜನರಿಗೆ ನ್ಯಾಯ ದೊರಕಿಸಿ ಕೊಡುವುದರ ಜೊತೆಗೆ ಹಣ, ಸಮಯ ಉಳಿತಾಯವಾಗಿದ್ದು ಹಲವು ಜನರಿಗೆ ಅನುಕೂಲವಾಗಿದೆ. ಅದಾಲತ್‌ನಲ್ಲಿ ಬಾಕಿ ಉಳಿದಿದ್ದ ಹಳೆಯ ಪ್ರಕರಣಗಳ ಜೊತೆಗೆ ವಿಶೇಷ ಪ್ರಕರಣಗಳು ಇತ್ಯರ್ಥವಾಗಿರುವುದು ಉಲ್ಲೇಖನೀಯ ವಿಷಯವಾಗಿದೆ’ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಪ್ರಧಾನ ಕಾರ್ಯದರ್ಶಿ ಹರವೆ ಮಂಜು ಇದ್ದರು.

--

ಅದಾಲತ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿದ್ದ ಪರಿಣಾಮ ಇಷ್ಟು ಪ್ರಮಾಣದಲ್ಲಿ ಪ್ರಕರಣಗಳು ಇತ್ಯರ್ಥವಾಗಲು ಸಾಧ್ಯವಾಗಿದೆ

- ಸದಾಶಿವ ಎಸ್‌.ಸುಲ್ತಾನ್‌ಪುರಿ, ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.