ADVERTISEMENT

ಲೋಕ ಅದಾಲತ್‌ ನಾಳೆ, 1,414 ಪ್ರಕರಣ ಪರಿಗಣನೆ

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಡಿ.ವಿ.ಪಾಟೀಲ ಮಾಹಿತಿ, ಸದುಪಯೋಗಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 9:54 IST
Last Updated 7 ಫೆಬ್ರುವರಿ 2020, 9:54 IST
ಪತ್ರಿಕಾಗೋಷ್ಠಿಯಲ್ಲಿ ನ್ಯಾಯಾಧೀಶ ಡಿ.ವಿ.ಪಾಟೀಲ ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌ ಇದ್ದರು
ಪತ್ರಿಕಾಗೋಷ್ಠಿಯಲ್ಲಿ ನ್ಯಾಯಾಧೀಶ ಡಿ.ವಿ.ಪಾಟೀಲ ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌ ಇದ್ದರು   

ಚಾಮರಾಜನಗರ: ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಇದೇ 8ರಂದು (ಭಾನುವಾರ) ಲೋಕ ಅದಾಲತ್‌ ನಡೆಯಲಿದೆ.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಡಿ.ವಿ.ಪಾಟೀಲ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಲೋಕ ಅದಾಲತ್‌ ಬಗ್ಗೆ ವಿವರಗಳನ್ನು ನೀಡಿದರು.

‘ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು ಮತ್ತು ಕೊಳ್ಳೇಗಾಲದ ನ್ಯಾಯಾಲಯಗಳ ಆವರಣಗಳಲ್ಲಿ ಅದಾಲತ್‌ ನಡೆಯಲಿದ್ದು, 14 ಬೈಠಕ್‌ ಗಳಿಗೆ ಸಂಧಾನಕಾರರನ್ನು ನೇಮಿಸ ಲಾಗುವುದು’ ಎಂದು ಹೇಳಿದರು.

ADVERTISEMENT

1,330 ಪ್ರಕರಣಗಳ ವಿಲೇವಾರಿ: ‘2019ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ಗಳಲ್ಲಿ ಒಟ್ಟು 1,330 ಪ್ರಕರಣಗಳನ್ನು ಇತ್ಯರ್ಥ ಪ‍ಡಿಸಲಾಗಿದೆ. ಇವುಗಳಲ್ಲಿ 602 ಸಿವಿಲ್‌ ಹಾಗೂ 729 ಕ್ರಿಮಿನಲ್‌ ಪ್ರಕರಣಗಳು ಇವೆ’ ಎಂದು ಮಾಹಿತಿ ನೀಡಿದರು.

‘ಭಾನುವಾರದಂದು ನಡೆಯ ಲಿರುವ ಅದಾಲತ್‌ಗಾಗಿ ವಿವಿಧ ನ್ಯಾಯಾಲಯಗಳಿಂದ 904 ಸಿವಿಲ್‌ ಪ್ರಕರಣಗಳು ಹಾಗೂ 510 ಕ್ರಿಮಿನಲ್‌ ಪ್ರಕರಣಗಳು ಸೇರಿದಂತೆ ಒಟ್ಟು 1,414 ಪ್ರಕರಣಗಳನ್ನು ಗುರುತಿಸಲಾಗಿದೆ. ಇವುಗಳ ಜೊತೆಗೆ 270 ವ್ಯಾಜ್ಯಪೂರ್ವ ಪ್ರಕರಣಗಳನ್ನೂ ಪರಿಗಣಿಸಲಾಗಿದೆ’ ಎಂದರು.

ಯಾವ ಪ್ರಕರಣಗಳು ಅರ್ಹ?

‘ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳನ್ನು (ಪಿಐಎಲ್‌) ಬಿಟ್ಟು ಇತರ ಯಾವುದೇ ರೀತಿಯ ಸಿವಿಲ್ ಪ್ರಕರಣಗಳು (ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ದಾಂಪತ್ಯ ಹಕ್ಕುಗಳ ಪುನರ್ ಸ್ಥಾಪನೆ, ಜೀವನಾಂಶ, ಮಕ್ಕಳ ಸಂರಕ್ಷಣೆಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳು), ವಾಹನ ಅಪಘಾತದ ಪ್ರಕರಣಗಳು, ಕೈಗಾರಿಕಾ ವಿವಾದ ಕಾಯ್ದೆ ವ್ಯಾಪ್ತಿಯ ಪ್ರಕರಣಗಳು, ದಂಡ ಪ್ರಕ್ರಿಯಾ ಸಂಹಿತೆ ಕಲಂ 320(1) ಮತ್ತು 320(2) ರಡಿಯಲ್ಲಿ ರಾಜಿ ಮಾಡುವ ಪ್ರಕರಣಗಳು, ಚೆಕ್‌ ಅಮಾನ್ಯ ಪ್ರಕರಣಗಳು, ಕಾರ್ಮಿಕ ಕಾಯ್ದೆ ಅಡಿಯ ಪ್ರಕರಣಗಳು, ವಿದ್ಯುಡತ್ ಕಳ್ಳತನಕ್ಕೆ ಸಂಬಂಧಿಸಿದ ಪ್ರಕರಣಗಳು, ಕಲ್ಲು, ಮರಳು ಅಕ್ರಮ ಸಾಗಣೆಗೆ ಸಂಬಂಧಿಸಿದ ಪ್ರಕರಣಗಳನ್ನು ಲೋಕ್ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಬಹುದಾಗಿದೆ. ವ್ಯಾಜ್ಯ ಪೂರ್ವ ಪ್ರಕರಣಗಳನ್ನೂ ವಿಲೇವಾರಿ ಮಾಡಬಹುದಾಗಿದೆ’ ಎಂದು ಹೇಳಿದರು.

ಲೋಕ ಅದಾಲತ್‌ ಅನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು. ವ್ಯಾಜ್ಯಗಳು ರಾಜಿ– ಸಂಧಾನದ ಮೂಲಕ ತ್ವರಿತಗತಿಯಲ್ಲಿ ಇತ್ಯರ್ಥ ವಾಗುವುದರಿಂದ ಹಣ ಹಾಗೂ ಸಮಯ ಉಳಿತಾಯವಾಗಲಿದೆ ಎಂದರು.

ಲೋಕ ಅದಾಲತ್‌ನ ಅನುಕೂಲಗಳು

ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣ ತೀರ್ಮಾನವಾಗುತ್ತದೆ. ಇದರ ವಿರುದ್ಧ ಮೇಲ್ಮನವಿ ಸಲ್ಲಿಸುವುದಕ್ಕೆ ಅವಕಾಶ ಇಲ್ಲ. ಹಾಗಾಗಿ ಲೋಕ ಅದಾಲತ್‌ನ ತೀರ್ಪು ಅಂತಿಮ.

ಅದಾಲತ್‌ನಲ್ಲಿ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಂಡರೆ ಪಕ್ಷಗಾರರು ಸಂದಾಯ ಮಾಡಿದ ಶೇ 75ರಷ್ಟು ನ್ಯಾಯಾಲಯ ಶುಲ್ಕ ಪಕ್ಷಗಾರರಿಗೆ ವಾಪಸ್‌ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.