ADVERTISEMENT

ಶ್ರೀನಿವಾಸ ಪ್ರಸಾದ್ ಬೆಂಬಲ ಕಾಂಗ್ರೆಸ್‌ಗೆ: ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 4:16 IST
Last Updated 24 ಏಪ್ರಿಲ್ 2024, 4:16 IST
ಅಯ್ಯನಪುರ ಶಿವಕುಮಾರ್‌
ಅಯ್ಯನಪುರ ಶಿವಕುಮಾರ್‌   

ಚಾಮರಾಜನಗರ: ಈ ಬಾರಿಯ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಬೆಂಬಲಿಗರಿಗೆ ಸೂಚಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ಶ್ರೀನಿವಾಸ ಪ್ರಸಾದ್‌ ಅಭಿಮಾನಿ ಬಳಗದ ಅಯ್ಯನಪುರ ಶಿವಕುಮಾರ್ ಮಂಗಳವಾರ ಹೇಳಿದರು.

ಶ್ರೀನಿವಾಸ ಪ್ರಸಾದ್ ಸಹೋದರ ವಿ.ರಾಮಸ್ವಾಮಿ ಅವರೊಂದಿಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಶ್ರೀನಿವಾಸ ಪ್ರಸಾದ್ ಅವರ ಬೆಂಬಲದ ವಿಚಾರದಲ್ಲಿ ಕೆಲವರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ನಾವೆಲ್ಲರೂ ಅವರ ಬೆಂಬಲಿಗರು. ಅವರೊಂದಿಗೆ ದಶಕಗಳಿಂದ ಹೆಜ್ಜೆ ಹಾಕುತ್ತಿದ್ದೇವೆ. ಅವರು ಕೈಗೊಳ್ಳುವ ತೀರ್ಮಾನದಂತೆ ನಡೆದುಕೊಳ್ಳುತ್ತಿದ್ದೇವೆ’ ಎಂದರು.

‘ಅವರು ರಾಜಕೀಯ ನಿವೃತ್ತಿಯಾದ ನಂತರ, ತೀರ್ಮಾನಕ್ಕೆ ಬರಲು ಸಭೆ ಸೇರಿದ್ದೆವು. ‘ನಾನಿನ್ನು ಯಾವ ಪಕ್ಷದೊಂದಿಗೂ ಗುರುತಿಸಿಕೊಳ್ಳುವುದಿಲ್ಲ. ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ನಿಮ್ಮ ಇಚ್ಛೆಯಂತೆ ನಿರ್ಧಾರ ಕೈಗೊಳ್ಳಬಹುದು’ ಎಂದು ಸಂಸದರು ಹೇಳಿದ್ದರು. ಆ ಬಳಿಕ ನಾವೆಲ್ಲ ಕಾಂಗ್ರೆಸ್ ಸೇರಿದ್ದೇವೆ’ ಎಂದರು.

ADVERTISEMENT

‘ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಉತ್ತಮ ವಾತಾವರಣ ಇದೆ ಎಂದು ಅವರೇ ಹೇಳಿದ್ದಾರೆ. ಈ ಮಾತಿನ ಅರ್ಥವನ್ನು ನೀವೇ ಗ್ರಹಿಸಬಹುದು’ ಎಂದು ಶಿವಕುಮಾರ್ ಹೇಳಿದರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಶ್ರೀನಿವಾಸ ಪ್ರಸಾದ್ ಅವರನ್ನು ಬಿಜೆಪಿ ಗೌರವಯುತವಾಗಿ ನಡೆಸಿಕೊಳ್ಳಲಿಲ್ಲ. ಮುಖಂಡರ ನಡವಳಿಕೆಯಿಂದ ಅವರು ಬೇಸರಗೊಂಡಿದ್ದರು. ವಿಧಾನಸಭಾ ಚುನಾವಣೆ, ವಿಧಾನ ಪರಿಷತ್ ಚುನಾವಣೆಗಳಲ್ಲಿ ಅವರ ಅಭಿಪ್ರಾಯ ಕೇಳಿರಲಿಲ್ಲ. ನಿವೃತ್ತಿಯ ನಂತರವೂ ಸರಿಯಾಗಿ ಮಾತನಾಡಿಸಲಿಲ್ಲ. ಅವರ ಮಾತಿಗೂ ಪಕ್ಷದಲ್ಲಿ ಮನ್ನಣೆ ಇರಲಿಲ್ಲ. ಅವರು ಮತ್ತು ನಾವೆಲ್ಲ ದೈಹಿಕವಾಗಿ ಬಿಜೆಪಿಯಲ್ಲಿ ಇದ್ದೆವೆಯೇ ವಿನಾ ಮಾನಸಿಕವಾಗಿ ಇರಲಿಲ್ಲ’ ಎಂದು ಹೇಳಿದರು.

ಶ್ರೀನಿವಾಸ ಪ್ರಸಾದ್ ಅಳಿಯ ಡಾ.ಮೋಹನ್ ನಮ್ಮೊಂದಿಗೇ ಇದ್ದಾರೆ. ಮೊನ್ನೆ ಬಿಜೆಪಿ ಪ್ರಚಾರ ಸಭೆಯಲ್ಲಿ ಒತ್ತಡ ಇದ್ದುದರಿಂದ ಭಾಗಿಯಾಗಿದ್ದಾರೆ’ ಎಂದು ಶಿವಕುಮಾರ್‌ ಹೇಳಿದರು.

ಮುಖಂಡರಾದ ರಾಮಸಮುದ್ರ ಬಸವರಾಜು, ಪಡಗೂರಿನ ಸಂಪತ್ತು, ಸುರೇಶ್, ಪ್ರಸನ್ನ, ಸಿದ್ದಯ್ಯನಪುರದ ಶಿವರಾಜು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.