ADVERTISEMENT

ಚಾಮರಾಜನಗರ: ನಗರಸಭೆಗೆ ಲೋಕಾಯುಕ್ತ ಶಾಕ್‌

ಕಡತಗಳ ವಿಲೇವಾರಿ ವಿಳಂಬ, ಅವ್ಯವಹಾರ ದೂರು; ಅಹವಾಲು ಆಲಿಕೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 4:57 IST
Last Updated 12 ಸೆಪ್ಟೆಂಬರ್ 2025, 4:57 IST
ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಗುರುವಾರ ಚಾಮರಾಜನಗರ ನಗರಸಭೆಗೆ ಭೇಟಿನೀಡಿದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸಿದರು
ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಗುರುವಾರ ಚಾಮರಾಜನಗರ ನಗರಸಭೆಗೆ ಭೇಟಿನೀಡಿದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸಿದರು   

ಚಾಮರಾಜನಗರ: ನಗರಸಭೆಯಲ್ಲಿ ಸಾರ್ವಜನಿಕರ ಕಡತಗಳ ವಿಲೇವಾರಿಯಲ್ಲಿ ವಿಳಂಬ, ಇ–ಸ್ವತ್ತು ನೀಡಲು ಹಣಕ್ಕೆ ಬೇಡಿಕೆ, ಸರ್ಕಾರಿ ಸೌಲಭ್ಯಗಳ ಹಂಚಿಕೆಯಲ್ಲಿ ವೈಫಲ್ಯ ಸೇರಿದಂತೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಗುರುವಾರ ಲೋಕಾಯುಕ್ತ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ನೇತೃತ್ವದ ತಂಡ ದಿನವಿಡೀ ಕಡತಗಳ ಪರೀಶಿಲನೆ ನಡೆಸಿತು. 

ಬೆಳಿಗ್ಗೆ 10.30ಕ್ಕೆ ನಗರಸಭೆ ಕಚೇರಿ ಪ್ರವೇಶಿಸಿದ ಲೋಕಾಯುಕ್ತ ಅಧಿಕಾರಿಗಳು ಕತ್ತಲಾದರೂ ಕಡತಗಳ ಪರಿಶೀಲನೆ ಹಾಗೂ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವುದರಲ್ಲಿ ಮಗ್ನರಾಗಿದ್ದರು. ಸಾರ್ವಜನಿಕರು ನಗರಸಭೆ ಅಧಿಕಾರಿಗಳ ಕಾರ್ಯ ವೈಖರಿಯ ವಿರುದ್ಧ ಲೋಕಾಯುಕ್ತರಿಗೆ ಲಿಖಿತ ದೂರು ಸಲ್ಲಿಸಿದರು. 

ನಗರದ ಸ್ವಚ್ಛತೆ ಕಾಪಾಡಲು, ಕುಡಿಯುವ ನೀರಿನ ಸೌಲಭ್ಯ ಒದಗಿಸಲು, ರಸ್ತೆಗಳ ದುರಸ್ತಿ, ಚರಂಡಿಗಳ ಸ್ವಚ್ಛತೆ, ಕಸ ವಿಲೇವಾರಿ, ಉದ್ಯಾನಗಳ ನಿರ್ವಹಣೆ, ಬೀದಿದೀಪಗಳ ದುರಸ್ತಿ ಸೇರಿದಂತೆ ನಗರಸಭೆ ವ್ಯಾಪ್ತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ನಾಗರಿಕರು ದೂರು ಸಲ್ಲಿಸಿದರು. 

ADVERTISEMENT

ನಗರಸಭೆಯ ಕಂದಾಯ, ಆರೋಗ್ಯ, ಹಣಕಾಸು, ಸ್ವಚ್ಛತೆ, ಇ ಸ್ವತ್ತು ವಿಲೇವಾರಿ ಸೇರಿದಂತೆ ಪ್ರತಿಯೊಂದು ವಿಭಾಗಕ್ಕೂ ಭೇಟಿನೀಡಿದ ಅಧಿಕಾರಿಗಳು ಕಡತಗಳನ್ನು ಪರಿಶೀಲಿಸಿದರು. ಈ ಸಂದರ್ಭ ಸ್ಥಳದಲ್ಲಿ ಹಾಜರಿದ್ದ ನಗರಸಭೆ ಪೌರಾಯುಕ್ತ ಎಸ್‌.ಎ.ರಾಮದಾಸ್ ಸಹಿತ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಇ ಸ್ವತ್ತು ವಿತರಣೆ, ಕಡತಗಳ ವಿಲೇವಾರಿ ಹಾಗೂ ನಿರ್ವಹಣೆಯಲ್ಲಿ ಗಂಭೀರವಾದ ಲೋಪ–ದೋಷಗಳು ಕಂಡುಬಂದಿದ್ದು ಕ್ರಮ ಜರುಗಿಸಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದರು.

ಬುದ್ಧ ನಗರದ ವಾಟರ್ ಟ್ಯಾಂಕ್ ಪಕ್ಕದಲ್ಲಿ ಸಾಧು ಚಾರಿಟಬಲ್ ಟ್ರಸ್ಟ್‌ ಹೆಸರಿಗೆ ಹಂಚಿಕೆಯಾಗಿದ್ದ ನಿವೇಶನವನ್ನು ಟ್ರಸ್ಟ್‌ ಅಧ್ಯಕ್ಷರ ಹೆಸರಿಗೆ ಖಾತೆ ಮಾಡಿಕೊಡಲಾಗಿದ್ದು ತನಿಖೆ ನಡೆಸಿ ಖಾತೆ ರದ್ದುಪಡಿಸಬೇಕು ಎಂದು ಹೋರಾಟಗಾರ ಭಾನುಪ್ರಕಾಶ್ ಮನವಿ ನೀಡಿದರು.

ಇದೇ ವೇಳೆ ಬುದ್ಧನಗರದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಂತೆ, ಕಸ ವಿಲೇವಾರಿ ಮಾಡುವಂತೆ, ಶುಚಿತ್ವಕ್ಕೆ ಒತ್ತು ನೀಡುವಂತೆ ನಿವಾಸಿಗಳು ಮನವಿ ನೀಡಿದರು.

ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಲೋಹಿತ್ ಕುಮಾರ್, ಗಿರೀಶ್‌, ಶಶಿಕುಮಾರ್‌, ರವಿಕುಮಾರ್ ಇದ್ದರು.

ಅಕ್ರಮವಾಗಿ ಇ–ಸ್ವತ್ತು: ಕ್ರಮಕ್ಕೆ ಆಗ್ರಹ ಪ್ರಗತಿ ನಗರದಲ್ಲಿ ಪರಿಶಿಷ್ಟ ವರ್ಗಗಳ ಬಾಲಕರ ವಿದ್ಯಾರ್ಥಿ ನಿಲಯದ ಪಕ್ಕದಲ್ಲಿರುವ ಸಾರ್ವಜನಿಕ ರಸ್ತೆಗೆ ಮೀಸಲಿರಿಸಿದ ಜಾಗವನ್ನು ಡಿ.31 2022ರಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ನಗರಸಭೆಯಿಂದ ಇ–ಸ್ವತ್ತು ಮಾಡಿಕೊಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿದ್ದು ತನಿಖೆ ನಡೆಸಿ ಇ ಸ್ವತ್ತು ರದ್ದುಗೊಳಿಸಿ ಜಾಗವನ್ನು ಸಾರ್ವಜನಿಕ ಬಳಕೆಯ ಉದ್ದೇಶಕ್ಕೆ ನೀಡಬೇಕು. ಅಕ್ರಮವಾಗಿ ಇ–ಸ್ವತ್ತು ನೀಡಿರುವ ಅಧಿಕಾರಿಗಳು ಹಾಗೂ ಇ–ಸ್ವತ್ತು ಪಡೆದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಹೋರಾಟಗಾರ ಭಾನುಪ್ರಕಾಶ್ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.