ADVERTISEMENT

ಲಾರಿಗಳಿಗೆ ಕ್ಯೂಆರ್‌ ಕೋಡ್‌ ಅಳವಡಿಕೆ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 6:40 IST
Last Updated 8 ಮಾರ್ಚ್ 2023, 6:40 IST
ಲಾರಿಗಳಲ್ಲಿ ಕ್ಯೂಆರ್‌ ಕೋಡ್‌ ಅಳವಡಿಕೆಯನ್ನು ಖಂಡಿಸಿ ಲಾರಿ ಮಾಲೀಕರು ಮಂಗಳವಾರ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು
ಲಾರಿಗಳಲ್ಲಿ ಕ್ಯೂಆರ್‌ ಕೋಡ್‌ ಅಳವಡಿಕೆಯನ್ನು ಖಂಡಿಸಿ ಲಾರಿ ಮಾಲೀಕರು ಮಂಗಳವಾರ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಲಾರಿಗಳಿಗೆ ಕ್ಯೂಆರ್ ಕೋಡ್ ಅಳವಡಿಸುವ ಸಂಬಂಧ ಸಾರಿಗೆ ಆಯುಕ್ತರ ಆದೇಶ ಖಂಡಿಸಿ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಹೊರಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಲಾರಿ ಮಾಲೀಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಸಾರಿಗೆ ಇಲಾಖೆ ಅನುಮೋದಿಸಿರುವ ರೆಟ್ರೊ ರೆಫ್ಲೆಕ್ಟಿವ್‌ ಟೇಪ್‌ ಮತ್ತು ರಿಯರ್‌ ಮಾರ್ಕಿಂಗ್‌ ಪ್ಲೇಟ್‌ ಅಳವಡಿಸಲು ನಮ್ಮ ತಕರಾರಿಲ್ಲ. ಎಲ್ಲ ಅನುಮೋದಿತ ಟೇಪ್‌ ತಯಾರಕರು ಟೇಪನ್ನು ಸಾರಿಗೆ ಇಲಾಖೆ ಅನುಮೋದಿಸಿರುವ ಸಂಸ್ಥೆಗಳಿಂದ ಖರೀದಿಸಿ ವಾಹನಗಳಿಗೆ ಅಳವಡಿಸಲು ಅಭ್ಯಂತರವಿಲ್ಲ’ ಎಂದರು.

ADVERTISEMENT

‘ಆದರೆ, ಕ್ಯೂ ಆರ್‌ ಕೋಡ್‌ ಸ್ಟಿಕ್ಕರ್‌ ಅನ್ನು ಯಾವ ಟೇಪ್‌ ತಯಾರಕರು ತಯಾರಿಸಿಲ್ಲ. ಆದರೂ ಕೆಲವು ಖಾಸಗಿ ಸಂಸ್ಥೆಗಳು ಕ್ಯೂಆರ್‌ ಕೋಡ್‌ ತಯಾರಿಸಿ ಟೇಪ್‌ನ ಬೆಲೆಯನ್ನು ದುಪ್ಪಟ್ಟು ಮಾಡಿ ಲಾರಿ ಮಾಲೀಕರನ್ನು ದೋಚಲು ಮಾಡಿರುವ ಸಂಚು ಇಡೀ ರಾಜ್ಯದಲ್ಲಿ ಈ ಕ್ಯೂಆರ್‌ ಕೋಡ್‌ ತಯಾರಿಸಿ ಸರಬರಾಜು ಮಾಡಲು ಒಂದೇ ಸಂಸ್ಥೆಯನ್ನು ಗುರುತಿಸಿದ್ದಾರೆ ಮತ್ತು ಇದರಿಂದ ಸರಬರಾಜು ದಾರರು ಏಕಸ್ವಾಮ್ಯದಿಂದ ಹೆಚ್ಚಿನ ಬೆಲೆಯನ್ನು ವಿಧಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕ್ಯೂಆರ್‌ ಕೋಡ್‌ ಅಳವಡಿಸುವ ಪ್ರಕ್ರಿಯೆಯನ್ನು ಕಾನೂನಿನಲ್ಲಿ ಅನುಮೋದನೆಗೊಂಡಿಲ್ಲ ಮತ್ತು ಈ ಸಂಬಂಧ ಸರ್ಕಾರ ಅಧಿಸೂಚನೆಯನ್ನೂ ಹೊರಡಿಸಿಲ್ಲ. ಹಾಗಾಗಿ, ಲಾರಿ ಮಾಲಿಕರೆಲ್ಲ ಕ್ಯೂಆರ್‌ ಕೋಡ್‌ ಅಳವಡಿಕೆಯನ್ನು ವಿರೋಧಿಸುತ್ತೇವೆ’ ಎಂದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಸುಧಾಮಣಿ ಅವರು ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿದರು.

ಸಂಘದ ಕಾರ್ಯದರ್ಶಿ ಮರುಳಿಕೃಷ್ಣ, ಉಪಾಧ್ಯಕ್ಷ ಮೊಕ್ತಾರ್, ಖಜಾಂಚಿ ಎಸ್. ಸುರೇಶ್, ಸಹ ಕಾರ್ಯದರ್ಶಿ ಜಾವೀದ್ ಪಾಷ, ಪದಾಧಿಕಾರಿಗಳಾದ ಖಲೀಲ್, ಶಿವಣ್ಣ, ಸಿದ್ದಿಕ್, ನಾಗೇಂದ್ರ ಪ್ರಸಾದ್, ರೆಹಿಮ್, ಗಿರೀಶ್, ಇರ್ಷಾದ್, ಅಸ್ಲಂ ಪಾಷ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.