ADVERTISEMENT

ಮಹದೇಶ್ವರ ಬೆಟ್ಟ: ಮಾದಪ್ಪನ ಸನ್ನಿಧಿಯಲ್ಲಿ ಹಾಲರವೆ ಉತ್ಸವ

ಬೇಡಗಂಪಣ ಸಮುದಾಯದ ಬಾಲೆಯರಿಂದ ದೇವರ ಅಭಿಷೇಕಕ್ಕೆ ಪವಿತ್ರ ನೀರು ಅರ್ಪಣೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 4:06 IST
Last Updated 22 ಅಕ್ಟೋಬರ್ 2025, 4:06 IST
ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಹನೂರು ತಾಲ್ಲೂಕಿನ ಮಲೆ ಮಹದೇಶ್ವರನ ಸನ್ನಿಧಿ ವಿದ್ಯುತ್ ದೀಪಾಲಂಕಾರದಿಂದ ಸಿಂಗಾರಗೊಂಡಿರುವ ದೃಶ್ಯ
ಚಿತ್ರ: ಸಂಜಯ್‌ ಎಸ್‌.ತಿಪ್ಪಣ್ಣನವರ್  
ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಹನೂರು ತಾಲ್ಲೂಕಿನ ಮಲೆ ಮಹದೇಶ್ವರನ ಸನ್ನಿಧಿ ವಿದ್ಯುತ್ ದೀಪಾಲಂಕಾರದಿಂದ ಸಿಂಗಾರಗೊಂಡಿರುವ ದೃಶ್ಯ ಚಿತ್ರ: ಸಂಜಯ್‌ ಎಸ್‌.ತಿಪ್ಪಣ್ಣನವರ್     

ಮಹದೇಶ್ವರ ಬೆಟ್ಟ: ನಾಡಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾದ ಹನೂರು ತಾಲ್ಲೂಕಿನ ಮಲೆ ಮಹದೇಶ್ವರನ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವದ ಸಂಭ್ರಮ ಕಳೆಗಟ್ಟಿದೆ. 

ಐದು ದಿನಗಳ ವಿಜೃಂಭಣೆಯ ದೀಪಾವಳಿ ಜಾತ್ರೆಯಲ್ಲಿ ನಾಡಿನ ಮೂಲೆಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಭಾಗವಹಿಸಿ ಮಾದಪ್ಪನ ದರ್ಶನ ಪಡೆಯುತ್ತಿದ್ದಾರೆ. 

ಉತ್ಸವದ ನಾಲ್ಕನೇ ದಿನವಾದ ಮಂಗಳವಾರ ತಲತಲಾಂತರಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಹಾಲರುವೆ ಉತ್ಸವ ಅದ್ಧೂರಿಯಾಗಿ ನೆರವೇರಿತು. ಮಾದಪ್ಪನ ಪೂಜಿಸುವ ಬೇಡಗಂಪಣ ಸಮುದಾಯದ 10ರಿಂದ 12ವರ್ಷದೊಳಗಿನ 101 ಬಾಲೆಯರಿಂದ ಹಾಲರುವೆ ಉತ್ಸವ ನೆರವೇರಿದ್ದು ವಿಶೇಷವಾಗಿತ್ತು.

ADVERTISEMENT

ಬೇಡಗಂಪಣ ಸಮುದಾಯದ ಸರದಿ ಅರ್ಚಕರು ಹಾಗೂ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಹಾಲರವೆ ಉತ್ಸವ ಭಕ್ತರ ಕಣ್ಮನ ಸೆಳೆಯಿತು. ಹಸಿರು ಸೀರೆಯುಟ್ಟ ಬಾಲೆಯರು ಹಾಲರವಿಯನ್ನು ತಲೆಯ ಮೇಲೆ ಹೊತ್ತು ಸಾಗಿದ ದೃಶ್ಯವನ್ನು ಕಂಡು ಭಕ್ತರು ಭಕ್ತಿಪರವಶರಾದರು.

ಸಂಪ್ರದಾಯದಂತೆ ಮಡಿಯುಟ್ಟು ಉಪವಾಸವಿದ್ದ ಬಾಲೆಯರು ಮಲೆ ಬೆಟ್ಟದಿಂದ 7 ಕಿ.ಮೀ ದೂರದ ಅರಣ್ಯ ಹಾದಿಯಲ್ಲಿರುವ ಹಾಲರ ಹಳ್ಳ ತಲುಪಿ ಪೂಜೆ ಪುರಸ್ಕಾರ ಮಾಡಿ ಕಳಸಗಳನ್ನು ಹೊತ್ತು ಕ್ಷೇತ್ರದತ್ತ ನಡೆದರು. ವಾದ್ಯ ಮೇಳದೊಂದಿಗೆ ಬೆಟ್ಟಕ್ಕೆ ಮೆರವಣಿಗೆ ಸಾಗುವಾಗ ಪಟ್ಟದ ಆನೆ, ಡೊಳ್ಳು ಕುಣಿತ, ಛತ್ರಿ ಚಾಮರಗಳು ಇದ್ದವು. ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿ ಕಳಸಗಳಲ್ಲಿ ತಂದಿದ್ದ ಪವಿತ್ರ ನೀರನ್ನು ಮಾದಪ್ಪನಿಗೆ ಅಭಿಷೇಕ ಮಾಡುವ ಮೂಲಕ ಹಾಲರವೆ ಉತ್ಸವ ಸಂಪನ್ನವಾಯಿತು.

ಕತ್ತಿ ಪವಾಡ: ಬೇಡಗಂಪಣ ಸಮುದಾಯದ ಬಾಲೆಯರು ಹಾಲುಹಳ್ಳದಿಂದ ಪುಟ್ಟ ಬಿಂದಿಗೆಗಳಲ್ಲಿ ಹಾಲರವೆ ಹೊತ್ತು ತಂಬಡಿಗೇರಿ ಗ್ರಾಮದ ಮುಖ್ಯದ್ವಾರದ ಬಳಿ ಇರಿಸಿದರು. ಈ ಸಂದರ್ಭ ದೊಡ್ಡಪಾಲಿಗೆ ಸೇರಿದ ಬೇಡಗಂಪಣ ಸಮುದಾಯದವರು ಕತ್ತಿ ಪವಾಡ ಪ್ರದರ್ಶಿಸಿದರು. ಬೇಡಗಂಪಣರಲ್ಲಿ ಈ ಬಾರಿ ಭಾರಿ ದೊಡ್ಡ ಪಾಲಿನ ಸಮುದಾಯದಿಂದ ಕತ್ತಿ ಪವಾಡ ನಡೆಯಿತು.

22ರಂದು ಕ್ಷೇತ್ರದಲ್ಲಿ ಅದ್ಧೂರಿ ಮಹಾ ರಥೋತ್ಸವ ನಡೆಯಲಿದೆ. 56 ಅಡಿ ಎತ್ತರದ ರಥವನ್ನು ಭಕ್ತರು ಎಳೆದು ಭಕ್ತಿ ಸಮರ್ಪಿಸಲಿದ್ದಾರೆ. ರಾತ್ರಿ ತೆಪ್ಪೋತ್ಸವ ನಡೆಯಲಿದ್ದು ದೀಪಾವಳಿ ಜಾತ್ರೆಗೆ ತೆರೆ ಬೀಳಲಿದೆ.

ಮಲೆ ಮಹದೇಶ್ವರನ ಕ್ಷೇತ್ರದಲ್ಲಿರುವ ಮಹದೇಶ್ವರನ ಪ್ರತಿಮೆ
ಹನೂರು ತಾಲ್ಲೂಕಿನ ಮಲೆ ಮಹದೇಶ್ವರನ ದೇಗುಲ ಡ್ರೋನ್ ಕ್ಯಾಮೆರಾ ಕಣ್ಣಲ್ಲಿ ಕಂಡಿದ್ದು ಹೀಗೆ
ಹಾಲರುವೆ ಹೊತ್ತು ಮಲೆ ಮಹದೇಶ್ವರನ ಕ್ಷೇತ್ರದತ್ತ ಹೆಜ್ಜೆ ಹಾಕುತ್ತಿರುವ ಬೇಡಗಂಪಣ ಸಮುದಾಯದ ಬಾಲೆಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.