ADVERTISEMENT

ಮಹದೇಶ್ವರ ಬೆಟ್ಟ: ಅಮಾವಾಸ್ಯೆ ವಿಶೇಷ ಪೂಜೆ, ಭಕ್ತರಿಗೆ‌ ನಿರ್ಬಂಧ

19 ರಿಂದ 21ರವರೆಗೆ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 8:37 IST
Last Updated 18 ಜೂನ್ 2020, 8:37 IST
ಮಹದೇಶ್ವರ ಬೆಟ್ಟ
ಮಹದೇಶ್ವರ ಬೆಟ್ಟ   

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಶುಕ್ರವಾರದಿಂದ (ಜೂನ್ 19) 21ರವರೆಗೆ ಎಣ್ಣೆ ಮಜ್ಜನ ಸೇವೆ ಹಾಗೂ ಅಮಾವಾಸ್ಯೆ ವಿಶೇಷ ಪೂಜೆಗಳು ನಡೆಯಲಿದ್ದು, ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ಈ ಅವಧಿಯಲ್ಲಿ ಭಕ್ತರ ಸಂದಣಿ ತಪ್ಪಿಸುವುದಕ್ಕಾಗಿ ಮೂರು‌ ದಿನಗಳ ಕಾಲ ಭಕ್ತರಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶ ಹೊರಡಿಸಿದ್ದಾರೆ.

ಅಮಾವಾಸ್ಯೆ ದಿನದ ವಿಶೇಷ ಪೂಜೆಗಳು,ಭಾನುವಾರ ಮತ್ತು ರಜಾ ದಿನಗಳಲ್ಲಿ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡು ಬರುತ್ತದೆ.

ಮೂರು‌ ದಿನಗಳ ಅವಧಿಯಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇರುವುದರಿಂದ, ಕೋವಿಡ್-19 ತಡೆಗಾಗಿ ಸುರಕ್ಷಿತ ಅಂತರ ಕಾಪಾಡಿಕೊಂಡು ಭಕ್ತರನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಕಷ್ಟವಿರುವುದರಿಂದ ಮೂರು‌ದಿನಗಳ ಕಾಲ ದೇವಾಲಯ ಹಾಗೂ ಪ್ರಾಧಿಕಾರದ ಆವರಣಕ್ಕೆ ಸಾರ್ವಜನಿಕರು ಹಾಗೂ ಭಕ್ತರ ಪ್ರವೇಶವನ್ನು ನಿಷೇಧಿಸಬೇಕು ಎಂದು ಮಲೆಮಹದೇಶ್ವರ ಸ್ವಾಮಿ‌ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಪತ್ರದ ಮೂಲಕ ಮನವಿ‌ ಮಾಡಿದ್ದರು.

ADVERTISEMENT

ಇದರ ಆಧಾರದಲ್ಲಿ, ಸಾರ್ವಜನಿಕರ ಹಾಗೂ ಭಕ್ತರ ಆರೋಗ್ಯದ ದೃಷ್ಟಿಯಿಂದ 19ರಿಂದ 21ರವರೆಗೆ ದೇವಾಲಯಕ್ಕೆ ಸಾರ್ವಜನಿಕರ ಹಾಗೂ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.