ADVERTISEMENT

ಕನಕಗಿರಿ: ವಿರಾಗಿಗೆ ಮಹಾ ಅಭಿಷೇಕ, ಭಕ್ತರಿಗೆ ಪುಳಕ

ವಿವಿಧ ಬಣ್ಣಗಳಲ್ಲಿ ಕೊಂಗೊಳಿಸಿದ ಭಗವಾನ್‌ ಬಾಹುಬಲಿ, ಸಾವಿರಾರು ಭಕ್ತರು ಸಾಕ್ಷಿ

​ಪ್ರಜಾವಾಣಿ ವಾರ್ತೆ
Published 1 ಮೇ 2022, 13:06 IST
Last Updated 1 ಮೇ 2022, 13:06 IST
ಚಾಮರಾಜನಗರ ತಾಲ್ಲೂಕಿನ ಮಲೆಯೂರು ಗ್ರಾಮದಲ್ಲಿರುವ ಕನಕಗಿರಿ ಕ್ಷೇತ್ರದಲ್ಲಿ ಭಗವಾನ್‌ ಬಾಹುಬಲಿಗೆ ಭಾನುವಾರ ನಡೆದ ಮಹಾಮಸ್ತಕಾಭಿಷೇಕದಲ್ಲಿ ಕ್ಷೀರಾಭಿಷೇಕ ನೆರವೇರಿಸಲಾಯಿತು – ಪ್ರಜಾವಾಣಿ ಚಿತ್ರ/ ಸಿ.ಆರ್‌.ವೆಂಟಕರಾಮು
ಚಾಮರಾಜನಗರ ತಾಲ್ಲೂಕಿನ ಮಲೆಯೂರು ಗ್ರಾಮದಲ್ಲಿರುವ ಕನಕಗಿರಿ ಕ್ಷೇತ್ರದಲ್ಲಿ ಭಗವಾನ್‌ ಬಾಹುಬಲಿಗೆ ಭಾನುವಾರ ನಡೆದ ಮಹಾಮಸ್ತಕಾಭಿಷೇಕದಲ್ಲಿ ಕ್ಷೀರಾಭಿಷೇಕ ನೆರವೇರಿಸಲಾಯಿತು – ಪ್ರಜಾವಾಣಿ ಚಿತ್ರ/ ಸಿ.ಆರ್‌.ವೆಂಟಕರಾಮು   

ಚಾಮರಾಜನಗರ: ತಾಲ್ಲೂಕಿನ ಕನಕಗಿರಿ ಬೆಟ್ಟದಲ್ಲಿ ನೆಲೆ ನಿಂತು, ಜಗತ್ತಿಗೆ ತ್ಯಾಗದ ಸಂದೇಶ ರವಾನಿಸುತ್ತಿರುವ ವಿರಾಗಿ ಬಾಹುಬಲಿ ಸ್ವಾಮಿಯು ಭಾನುವಾರ ಹಾಲು, ಶ್ರೀಗಂಧ, ಅಷ್ಟಗಂಧ, ರಕ್ತಚಂದನ, ಅರಿಸಿನ ಸೇರಿದಂತೆ ವಿವಿಧ ದ್ರವ್ಯಗಳ ಮಹಾ ಅಭಿಷೇಕಕ್ಕೆ ಮೈಯೊಡ್ಡಿ ಬಣ್ಣ ಬಣ್ಣಗಳಿಂದ ಕಂಗೊಳಿಸಿದರು.

ಪ್ರಜ್ವಲಿಸುತ್ತಿದ್ದ ಸೂರ್ಯನ ಕಿರಣಗಳ ಶಾಖದ ನಡುವೆ, ಶಾಂತವಾಗಿ ನಿಂತು, ಮಂದಸ್ಮಿತನಾಗಿ ಮಹಾ ಮಜ್ಜನವನ್ನು ಸ್ವೀಕರಿಸಿದ ಭಗವಾನ್‌ ಬಾಹುಬಲಿಯನ್ನು ಕಂಡು ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬಂದಿದ್ದ ಸಾವಿರಾರು ಪುಳಕಿತರಾದರು. ಹಾಡು, ನೃತ್ಯ, ಜೈಕಾರಗಳ ಮೂಲಕ ಕನಕಗಿರಿ ಬೆಟ್ಟದಲ್ಲೆಲ್ಲ ಜಿನ ಭಕ್ತಿ ಅನುರಣಿಸುವಂತೆ ಮಾಡಿದರು.

ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸಾವಿರಾರು ಸಂಖ್ಯೆಯಲ್ಲಿ ಪುರುಷರು ಹಾಗೂ ಮಹಿಳೆಯರು ನೆರೆದಿದ್ದರು.ಆರು ವರ್ಷಗಳಿಗೊಮ್ಮೆ ನಡೆಯುವ ಅಪರೂಪದ ಮಹಾಮಜ್ಜನಕ್ಕೆ ಸಾಕ್ಷಿಯಾದ ಭಕ್ತರು, ಬಿಸಿಲಿನ ಝಳದ ನಡುವೆಯೂ ವೈರಾಗ್ಯ ಮೂರ್ತಿಯನ್ನು ಕಂಡು ತಂಪಾದರು!

ADVERTISEMENT
ಚಾಮರಾಜನಗರ ತಾಲ್ಲೂಕಿನ ಮಲೆಯೂರು ಗ್ರಾಮದಲ್ಲಿರುವ ಕನಕಗಿರಿ ಕ್ಷೇತ್ರದಲ್ಲಿ ಭಾನುವಾರ ನಡೆದ ಮಹಾಮಸ್ತಕಾಭಿಷೇಕದಲ್ಲಿ ಕಲ್ಪಚೂರ್ಣದ ಅಭಿಷೇಕದ ಸಮಯದಲ್ಲಿ ಕಂಗೊಳಿಸಿದ ಬಾಹುಬಲಿ

ತಾಲ್ಲೂಕಿನ ಮಲೆಯೂರು ಗ್ರಾಮದಲ್ಲಿರುವ ಪ್ರಸಿದ್ಧ ಜೈನಕ್ಷೇತ್ರ ಕನಕಗಿರಿಯಲ್ಲಿ ನಡೆಯುತ್ತಿರುವ ಅತಿಶಯ ಮಹೋತ್ಸವ ಅಂಗವಾಗಿ ಭಾನುವಾರ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ನಡೆಯಿತು.

ಶ್ರವಣಬೆಳಗೊಳದಲ್ಲಿರುವ ಬಾಹುಬಲಿ ಮೂರ್ತಿಯನ್ನೇ ಹೋಲುವ, 18 ಅಡಿಗಳಷ್ಟು ಎತ್ತರದ ಬಾಹುಬಲಿ ಪ್ರತಿಮೆಯನ್ನು ಕನಕಗಿರಿ ಕ್ಷೇತ್ರದಲ್ಲಿ2017ರ ಫೆಬ್ರುವರಿಯಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಆ ಸಂದರ್ಭದಲ್ಲಿ ಮೊದಲ ಮಹಾಮಸ್ತಕಾಭಿಷೇಕ ನಡೆದಿತ್ತು. ಆರು ವರ್ಷಗಳ ನಂತರ ಈಗ ಎರಡನೇ ಬಾರಿಗೆ ಮಹಾ ಅಭಿಷೇಕ ನಡೆಯುತ್ತಿದೆ. ಇದೇ 5ರವರೆಗೂ ನಡೆಯಲಿದೆ.

ಸುತ್ತೂರು ಶ್ರೀ ಚಾಲನೆ: ಕಳಶಾಭಿಷೇಕದ ಮೂಲಕ ಮಹಾಮಸ್ತಕಾಭಿಷೇಕಕ್ಕೆ ಚಾಲನೆ ದೊರೆಯಿತು. ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರು ಈ ಕೈಂಕರ್ಯವನ್ನು ನೆರವೇರಿಸಿದರು. ಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ತಮಿಳುನಾಡಿನ ಅರಿಹಂತಗಿರಿಯ ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ ಸೇರಿದಂತೆ ಜೈನ ಸಮುದಾಯದ ಮುಖಂಡರು ಸುತ್ತೂರು ಶ್ರೀಗಳಿಗೆ ಜೊತೆಯಾದರು.

ಚಾಮರಾಜನಗರ ತಾಲ್ಲೂಕಿನ ಮಲೆಯೂರು ಗ್ರಾಮದಲ್ಲಿರುವ ಕನಕಗಿರಿ ಕ್ಷೇತ್ರದಲ್ಲಿ ಭಗವಾನ್‌ ಬಾಹುಬಲಿಗೆ ಭಾನುವಾರ ನಡೆದ ಮಹಾಮಸ್ತಕಾಭಿಷೇಕದಲ್ಲಿ ಅಷ್ಟಗಂಧ ಅಭಿಷೇಕ ನೆರವೇರಿಸಲಾಯಿತು

ಇದಕ್ಕೂ ಮೊದಲು ಬಾಹುಬಲಿ ಮೂರ್ತಿಯ ಪಾದ ತಳದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದರು.

ಪ್ರಥಮ ಕಳಶಾಭಿಷೇಕದ ನಂತರ ಜಲಾಭಿಷೇಕ ನಡೆಯಿತು. 508 ಕಳಶಗಳಲ್ಲಿ ಸಂಗ್ರಹಿಸಿ ಪೂಜಿಸಿದ್ದ ಜಲವನ್ನು, ನೋಂದಣಿ ಮಾಡಿಕೊಂಡ ಭಕ್ತರು ಅಭಿಷೇಕ ಮಾಡಿದರು.

ಕಂಗೊಳಿಸಿದ ಬಾಹುಬಲಿ

ನೋಂದಣಿ ಮಾಡಿದ್ದ ಭಕ್ತರು ಹಾಗೂ ವಿವಿಧ ಊರುಗಳ ಜೈನ ಸಮಾಜದ ಸಂಘಟನೆಗಳ ಪ್ರತಿನಿಧಿಗಳು, ಬಾಹುಬಲಿ ಮೂರ್ತಿಯ ಶಿರಕ್ಕೆ ಹೊಂದಿಕೊಂಡು ನಿರ್ಮಿಸಿದ್ದ ಅಟ್ಟಳಿಗೆಯನ್ನು ಏರಿ, 14 ದ್ರವ್ಯಗಳಿಂದ ಮಹಾ ತ್ಯಾಗಮೂರ್ತಿಗೆ ಅಭಿಷೇಕ ನೆರವೇರಿಸಿದರು. ಒಂದೊಂದು ದ್ರವ್ಯದ ಅಭಿಷೇಕ ಸಂದರ್ಭದಲ್ಲೂ ಬಾಹುಬಲಿ ಸ್ವಾಮಿ ಭಿನ್ನ ಭಿನ್ನವಾಗಿ ಕಂಗೊಳಿಸಿದರು.

ಜಲ, ಎಳನೀರು, ಹಾಲು, ಕಬ್ಬಿನಹಾಲು (ಇಕ್ಷುರಸ), ಸರ್ವ ಔಷಧ, ಕಲ್ಪಚೂರ್ಣ, ಅರಿಸಿನ, ಚತುಷ್ಕೋಣ ಕಳಶ, ಶ್ರೀಗಂಧ, ಅಷ್ಟಗಂಧ, ಕೆಂಪುಚಂದನ, ಕೇಸರಿ, ಪುಷ್ಪವೃಷ್ಟಿ ಮತ್ತು ಶಾಂತಿದಾರಗಳಿಂದ ಅಭಿಷೇಕ ಮಾಡಲಾಯಿತು. ಅಭಿಷೇಕಗಳು ಮುಕ್ತಾಯಗೊಂಡ ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು. ಕೊನೆಗೆ ಬಾಹುಬಲಿಸ್ವಾಮಿಗೆ ಮಹಾಹಾರ ಹಾಕಲಾಯಿತು.

ಬಿರು ಬಿಸಿಲನ್ನೂ ಲೆಕ್ಕಿಸಿದೆ ಹೊರ ಜಿಲ್ಲೆ, ರಾಜ್ಯಗಳಿಂದ ಬಂದಿದ್ದ ಭಕ್ತರು ಮಹಾಮಸ್ತಕಾಭಿಷೇಕವನ್ನು ವೀಕ್ಷಿಸಿದರು

ಕಬ್ಬಿನಹಾಲು, ಅರಿಸಿನ, ಶ್ರೀಗಂಧ, ಅಷ್ಟಗಂಧ, ಕಲ್ಪಚೂರ್ಣ, ಕೆಂಪುಚಂದನದ ಅಭಿಷೇಕಗಳ ಸಂದರ್ಭದಲ್ಲಿ ಬಾಹುಬಲಿ ಮೂರ್ತಿಯು ವಿವಿಧ ಬಣ್ಣಗಳಲ್ಲಿ ಕಂಗೊಳಿಸುತ್ತಿದ್ದರೆ, ಭಕ್ತರು ಭಾವಪರವಶರಾದರು. ಜೈಕಾರ, ಘೋಷಣೆ, ಹಾಡುಗಳು ಮುಗಿಲು ಮುಟ್ಟಿತ್ತು. ಭಕ್ತರು ವಯಸ್ಸಿನ ಭೇದ ಮರೆತು ಕುಣಿದು ಕುಪ್ಪಳಿಸಿದರು.

ಚಾಮರಾಜನಗರ ತಾಲ್ಲೂಕಿನ ಮಲೆಯೂರು ಗ್ರಾಮದಲ್ಲಿರುವ ಕನಕಗಿರಿ ಕ್ಷೇತ್ರದಲ್ಲಿ ಭಾನುವಾರ ನಡೆದ ಮಹಾಮಸ್ತಕಾಭಿಷೇಕದಲ್ಲಿ ಬಾಹುಬಲಿ ಸ್ವಾಮಿಗೆ ರಕ್ತಚಂದನದ ಅಭಿಷೇಕ ನೆರವೇರಿಸಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.