ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಭಾನುವಾರ ನಗರದಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಿಸಲಾಯಿತು.
ನಗರದ ಚಾಮರಾಜೇಶ್ವರ ದೇವಾಲಯ ಮುಂಬಾಗದಲ್ಲಿ ಮಹಾವೀರರ ಭಾವಚಿತ್ರಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಪುಷ್ಪರ್ಚಾನೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮಹಾವೀರರ ಭಾವಚಿತ್ರದ ಮೆರವಣಿಗೆ ವರನಟ ಡಾ.ರಾಜ್ ಕುಮಾರ್ ರಂಗಮಂದಿರದ ಬಳಿ ಸಮಾಪನಗೊಂಡಿತು.
ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಪುಟ್ಟರಂಗಶೆಟ್ಟಿ ‘ಅಹಿಂಸೆ, ಮಾನವತೆ ಹಾಗೂ ಪ್ರೀತಿಯನ್ನು ಪ್ರತಿಪಾದಿಸುವುದು ಎಲ್ಲ ಧರ್ಮಗಳ ಸಾರವಾಗಿದೆ. ಮಹಾವೀರರು ಜಗತ್ತಿಗೆ ಶಾಂತಿ ಸಾರಿದರು, ಜನರ ಒಳಿತಿಗೆ ಶ್ರಮಿಸಿದರು ಎಂಧರು.
ಬುದ್ದ ಹಾಗೂ ಮಹಾವೀರರ ವಿಚಾರಧಾರೆಗಳಲ್ಲಿ ಸಾಮ್ಯತೆ ಇದ್ದು ಇಬ್ಬರೂ ಮನುಕುಲದ ಒಳಿತಿಗೆ ಹಂಬಲಿಸಿ ಬದುಕನ್ನೇ ಮುಡುಪಾಗಿಟ್ಟರು. ಸಮಾಜದಲ್ಲಿ ಸೇವಾ ಮನೋಭಾವನೆ ಮೂಡಲು ಉಭಯ ಮಹನೀಯರು ಪ್ರಮುಖ ಕಾರಣರು ಎಂದು ಶಾಸಕರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಭಗವಾನ್ ಮಹಾವೀರರ ಬದುಕು ಮತ್ತು ನಡೆದು ಬಂದ ದಾರಿಯಲ್ಲಿ ಸಮಾಜ ಸಾಗಬೇಕಿದೆ. ಮಹಾವೀರರು ಮೂಡನಂಬಿಕೆ ಕಂದಾಚಾರಗಳನ್ನು ವಿರೋಧಿಸಿದರು. ವೈಭೋಗದ ಜೀವನ ತೊರೆದು ಸರಳವಾಗಿ ಬದುಕುವ ಮೂಲಕ ಸಮಾಜಕ್ಕೆ ಮಾದರಿಯಾದರು ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ಮುಖ್ಯ ಭಾಷಣ ಮಾಡಿದರು. ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡಯ್ಯ ಸಮುದಾಯದ ಮುಖಂಡರಾದ ನಿರ್ಮಲ್ ಕುಮಾರ್, ಸಿ.ಎನ್.ಚಂದ್ರಪ್ರಭ ಜೈನ್, ಶಾಂತಿ ಪ್ರಸಾದ್, ಪದ್ಮ ಕಲಾ, ಅನುರಾಧಾ ಮಹೇಶ್, ವಿಜಯ ಬಾಬು ಕಾರ್ಯಕ್ರಮದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.