ADVERTISEMENT

ಯಳಂದೂರು | ಮುಸುಕಿನ ಜೋಳ ಖರೀದಿ ವಿಳಂಬ: ಬೆಲೆ ಕುಸಿತ ಭೀತಿ

ಮಧ್ಯವರ್ತಿಗಳಿಂದ ಕಡಿಮೆ ದರಕ್ಕೆ ಖರೀದಿ

ಪ್ರಜಾವಾಣಿ ವಿಶೇಷ
Published 15 ಡಿಸೆಂಬರ್ 2025, 2:54 IST
Last Updated 15 ಡಿಸೆಂಬರ್ 2025, 2:54 IST
ಯಳಂದೂರು ತಾಲ್ಲೂಕಿನ ಯರಿಯೂರು-ಕೆಸ್ತೂರು ರಸ್ತೆಯಲ್ಲಿ ಮುಸುಕಿನಜೋಳದ ಕಟಾವು ಪ್ರಕ್ರಿಯೆ ನಡೆಯುತ್ತಿರುವುದು
ಯಳಂದೂರು ತಾಲ್ಲೂಕಿನ ಯರಿಯೂರು-ಕೆಸ್ತೂರು ರಸ್ತೆಯಲ್ಲಿ ಮುಸುಕಿನಜೋಳದ ಕಟಾವು ಪ್ರಕ್ರಿಯೆ ನಡೆಯುತ್ತಿರುವುದು    

ಯಳಂದೂರು: ತಾಲ್ಲೂಕಿನಲ್ಲಿ ಮುಸುಕಿನ ಜೋಳ ಬೆಳೆ ಬಂಪರ್ ಇಳುವರಿ ಬಂದಿದ್ದು ಏಕಕಾಲದಲ್ಲಿ ಕಟಾವು ಪ್ರಕ್ರಿಯೆ ಬಿರುಸಾಗಿ ನಡೆದಿದೆ. ಪರಿಣಾಮ ಮೆಕ್ಕೆಜೋಳ ಖರೀದಿ ಮಾಡುವ ವ್ಯಾಪಾರಿಗಳು ಸಂಖ್ಯೆ ಕುಸಿದಿದ್ದು ಬೆಲೆಯೂ ಇಳಿಮುಖವಾಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ಕುಸಿಯುತ್ತಿರುವ ಬೆಲೆಯನ್ನು ತಡೆಯಲು ರಾಜ್ಯ ಸರ್ಕಾರ ತುರ್ತು ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಸುವ ಪ್ರಕ್ರಿಯೆಗೆ ವೇಗ ನೀಡಬೇಕು. ಇಲ್ಲವಾದರೆ, ರೈತರು ಮೆಕ್ಕೆಜೋಳವನ್ನು ಕಡಿಮೆ ಬೆಲೆಗೆ ಮಧ್ಯವರ್ತಿಗಳಿಗೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನಲ್ಲಿ ಮುಸುಕಿನ ಜೋಳದ ತಾಕು 2,100 ಹೆಕ್ಟೇರ್ ಪ್ರದೇಶದಲ್ಲಿದೆ. ಪ್ರಸಕ್ತ ವರ್ಷ ಗುಣಮಟ್ಟದ ಬೆಳೆಯೂ ಕೈಸೇರಿದೆ. ಕೊಯ್ಲು ಪ್ರಕ್ರಿಯೆ ಬಿರುಸಾಗಿ ನಡೆಯುತ್ತಿದ್ದರೂ ಖರೀದಿ ಕೇಂದ್ರ ಆರಂಭವಾಗಿಲ್ಲ.

ADVERTISEMENT

ಜಿಲ್ಲೆಯಲ್ಲಿ ರೈತರಿಂದ ಮೆಕ್ಕೆಜೋಳವನ್ನು ಖರೀದಿಸುವಂತೆ ಕೆಎಂಎಫ್‌ಗೆ ಸೂಚನೆ ನೀಡಲಾಗಿದ್ದರೂ ಇದುವರೆಗೂ ಖರೀದಿಸಲು ಮುಂದಾಗಿಲ್ಲ. ಡಿ.10ರಿಂದ ಆರ್‌ಎಂಎಸಿಯಲ್ಲಿ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದರೂ ಖರೀದಿಗೆ ದಿನ ನಿಗದಿ ಮಾಡಿಲ್ಲ. . ಜೊತೆಗೆ ರೈತರು ಮಾರಾಟ ಮಾಡಲು ಎಲ್ಲಿ ನೋಂದಣಿ ಮಾಡಬೇಕು ಎಂಬ ಮಾಹಿತಿಯೂ ಸಮರ್ಪಕವಾಗಿ ಅಧಿಕಾರಿಗಳು ನೀಡುತ್ತಿಲ್ಲ. ಇದರಿಂದಾಗಿ ರೈತರು ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ಜೋಳ ಮಾರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಅಅಸಮಾಧಾನ ವ್ಯಕ್ತಪಡಿಸುತ್ತಾರೆ ಬೆಳೆಗಾರರು.

ಕೃಷಿಕರು ಬೆಳೆದ ಫಸಲನ್ನು ಸಂಗ್ರಹಿಸಲು ಸೂಕ್ತ ವ್ಯವಸ್ಥೆ ಇಲ್ಲ. ಜೊತೆಗೆ ಮಾರುಕಟ್ಟೆಗೆ ಕೊಂಡೊಯ್ಯಲು ಸಾಗಾಣೆ ವೆಚ್ಚ ದುಬಾರಿಯಾಗುತ್ತದೆ. ಮುಂದಿನ ಸಾಗುವಳಿಗೆ ಭೂಮಿ ಹಸನು ಮಾಡಿಕೊಳ್ಳಬೇಕಾಗಿರುವುದರಿಂದ ಕಟಾವು ಮಾಡಿದ ತಕ್ಷಣ ಬೆಳೆಗಳನ್ನು ಮಾರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ.

ರೈತರ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಳ್ಳುವ ಮಧ್ಯವರ್ತಿಗಳು ಕಡಿಮೆ ಬೆಲೆಗೆ ಬೆಳೆಗಳನ್ನು ಖರೀದಿ ಮಾಡುತ್ತಿದ್ದಾರೆ. ಕ್ವಿಂಟಲ್ ಜೋಳಕ್ಕೆ ‌₹ 1,900 ರಿಂದ 2,100 ನಿಗದಿ ಮಾಡಲಾಗಿದ್ದು ಪ್ರತಿ ಕ್ವಿಂಟಲ್‌ಗೆ ₹ 300 ರಿಂದ ₹ 400 ಕಡಿಮೆಯಾಗಿದೆ. ಬಹುಬೇಗ ಖರೀದಿ ಪ್ರಕ್ರಿಯೆ ಆರಂಭ ಮಾಡಿದರೆ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ಹೆಚ್ಚಾಗಲಿದೆ. ಬೆಳೆಗಾರರಿಗೆ ನೆರವಾಗಲಿದೆ ಎನ್ನುತ್ತಾರೆ ಕೃಷಿಕ ಕೆಸ್ತೂರು ಪ್ರಸನ್ನ.

ಈಗಾಗಲೇ ತಾಲ್ಲೂಕಿನ ಶೇ 50ರಷ್ಟು ರೈತರು ಕಡಿಮೆ ಬೆಲೆಗೆ ಮೆಕ್ಕೆಜೋಳ ಮಾರಾಟ ಮಾಡಿದ್ದಾರೆ. ಖರೀದಿ ಕೇಂದ್ರ ತೆರೆಯುವುದು ವಿಳಂಬ ಮಾಡಿದಷ್ಟು ದಲ್ಲಾಳಿಗಳಿಗೆ ಅನುಕೂಲವಾಗಲಿದೆ. ಇಳುವರಿ ಪಡೆದರೂ ಲಾಭಾಂಶ ಕೈತಪ್ಪಲಿದೆ ಎನ್ನುತ್ತಾರೆ ರೈತ ಮುಖಂಡ ಪಟ್ಟಣದ ಸುರೇಶ್.

‘ಮೆಕ್ಕೆಜೋಳ ಖರೀದಿಗೆ ನೋಂದಣಿಗಷ್ಟೆ ಅವಕಾಶ’ ರೈತರಿಗೆ ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳು ಕೆಎಂಎಫ್‌ ತುರ್ತು ಖರೀದಿ ಪ್ರಕ್ರಿಯೆ ಆರಂಭಿಸಲು ಒತ್ತಾಯ 

‘ರೈತರು ನೋಂದಾಯಿಸಿಕೊಳ್ಳಿ’ 

ಸಂತೇಮರಹಳ್ಳಿಯ ಸಂತೆಮಾಳದಲ್ಲಿ ಆರ್‌ಎಂಸಿಯಿಂದ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲಾಗಿದೆ. ರೈತರು ಪಹಣಿ ಮತ್ತು ಆಧಾರ್ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ನಂತರ ನಿಗದಿಪಡಿಸಿದ ದಿನಾಂಕದಿಂದ ಖರೀದಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಪ್ರತಿ ಕ್ವಿಂಟಲ್‌ಗೆ ₹ 2400 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಜನವರಿಯಿಂದ ಖರೀದಿ ನಡೆಯುವ ನಿರೀಕ್ಷೆ ಇದೆ. ಮುಕ್ತ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಬೆಲೆ ಕುಸಿತ ಕಂಡಿರುವುದರಿಂದ ರೈತರು ಎಪಿಎಂಸಿ ಮತ್ತು ಪತ್ತಿನ ಸಹಕಾರ ಸಂಘಗಳು ಖರೀದಿ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.