ADVERTISEMENT

ಮಾಕಳಿ ಬೇರು ಕಳ್ಳತನ, ಸಾಗಾಟ ಹೆಚ್ಚಳ

ಕೊಳ್ಳೇಗಾಲ: ಅರಣ್ಯ ಇಲಾಖೆ ಕಣ್ತಪ್ಪಿಸಿ ಸಾವಿರಾರು ಕೆಜಿಗಳಷ್ಟು ಅಕ್ರಮ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 16:25 IST
Last Updated 4 ಆಗಸ್ಟ್ 2021, 16:25 IST
ಕೊಳ್ಳೇಗಾಲ ತಾಲ್ಲೂಕಿನ ಜಕ್ಕಳ್ಳಿಯಲ್ಲಿ ಮಂಗಳವಾರ ವಶಪಡಿಸಿಕೊಂಡ ಮಾಕಳ್ಳಿ ಬೇರು
ಕೊಳ್ಳೇಗಾಲ ತಾಲ್ಲೂಕಿನ ಜಕ್ಕಳ್ಳಿಯಲ್ಲಿ ಮಂಗಳವಾರ ವಶಪಡಿಸಿಕೊಂಡ ಮಾಕಳ್ಳಿ ಬೇರು   

ಕೊಳ್ಳೇಗಾಲ: ತಾಲ್ಲೂಕಿನ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮಾಕಳಿ ಬೇರಿನ ಅಕ್ರಮ ಸಂಗ್ರಹ ಹಾಗೂ ಮಾರಾಟ ಪ್ರಕರಣಗಳು ಹೆಚ್ಚುತ್ತಿದ್ದು, ಅಪರೂಪದ ಸಸ್ಯದ ರಕ್ಷಣೆ ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳು ನೀಡುವ ಅಂಕಿ ಅಂಶಗಳ ಪ್ರಕಾರ, ವರ್ಷದ ಅವಧಿಯಲ್ಲಿ ಕೊಳ್ಳೇಗಾಲ ವ್ಯಾಪ್ತಿಯಲ್ಲಿ ಮಾಕಳಿ ಬೇರಿನ ಅಕ್ರಮ ಸಂಗ್ರಹ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಎಂಟು ಪ್ರಕರಣಗಳು ವರದಿಯಾಗಿವೆ.

ತಾಲ್ಲೂಕಿನ ಜಕ್ಕಳ್ಳಿ ಗ್ರಾಮದ ಅರಣ್ಯ ಪ್ರದೇಶದಿಂದ 670 ಕೆಜಿಗಳಷ್ಟು ಹಸಿಮಾಕಳಿಬೇರನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದುದನ್ನು ಅರಣ್ಯ ಸಂಚಾರಿ ದಳದ ಮಂಗಳವಾರ ಪತ್ತೆ ಹಚ್ಚಿರುವುದು ಹೊಸ ಪ್ರಕರಣ. ಎರಡು ತಿಂಗಳ ಹಿಂದೆ ತಾಲ್ಲೂಕಿನ ಜಾಗೇರಿಯ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 1,500 ಕೆಜಿಗಳಷ್ಟು ಮಾಕಳಿ ಬೇರನ್ನು ವಶಪಡಿಸಿಕೊಳ್ಳಲಾಗಿತ್ತು.

ADVERTISEMENT

ಔಷಧೀಯ ಸಸ್ಯ: ಅಳಿವಿನಂಚಿನಲ್ಲಿರುವ ಮಾಕಳಿ ಬೇರಿಗೆ ನಗರ ಪ್ರದೇಶಗಳಲ್ಲಿ ಅಪಾರ ಬೇಡಿಕೆ ಇದೆ. ಬಳ್ಳಿಯಾಕಾರದಲ್ಲಿ ಬೆಳೆಯುವ ಈ ಸಸ್ಯವು ಬೇಸಿಗೆಯಲ್ಲಿ ಸಂಪೂರ್ಣ ಎಲೆ ಉದುರಿಸುತ್ತದೆ. ಮಳೆಗಾಲದಲ್ಲಿ ಮರ, ಬಂಡೆಯ ಬಿರುಕುಗಳಲ್ಲಿ ಆಶ್ರಯ ಪಡೆದು 10 ಮೀ ಎತ್ತರದವರೆಗೂ ಬೆಳೆಯುತ್ತದೆ.ಬೇರನ್ನು ಜ್ವರ, ಕೆಮ್ಮು, ಶೀತಕ್ಕೆ ಔಷಧವನ್ನಾಗಿ ಬಳಸಲಾಗುತ್ತದೆ. ಅಲ್ಲದೇ ಪಾನೀಯ, ಉಪ್ಪಿನಕಾಯಿ ತಯಾರಿಕೆಯಲ್ಲೂ ಬಳಕೆ ಇದೆ. ತಮಿಳುನಾಡಿನಲ್ಲಿಮಾಕಳಿಬೇರಿನ ಉಪ್ಪಿನಕಾಯಿ ಹೆಚ್ಚು ಪ್ರಸಿದ್ಧಿ.

ಔಷಧೀಯ ಗುಣ ಮತ್ತು ಪರಾಗಸ್ಪರ್ಶ ಕ್ರಿಯೆಯಲ್ಲಿ ಈಬೇರುಪ್ರಮುಖ ಪಾತ್ರ ವಹಿಸುವುದರಿಂದ ವನ್ಯದಾಮಗಳಲ್ಲಿಮಾಕಳಿಬೇರುಸಂಗ್ರಹಿಸುವುದನ್ನು ನಿಷೇಧಿಸಲಾಗಿದೆ.

ಆದರೆ ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಧಾಮಗಳಲ್ಲಿ ಈ ಬೇರನ್ನು ಸಂಗ್ರಹಿಸಿ, ಅಕ್ರಮವಾಗಿ ಮಾರಾಟ ಮಾಡುವ ದೊಡ್ಡವೇ ಜಾಲವೇ ಇದೆ. ಅರಣ್ಯ ಇಲಾಖೆ ಸಿಬ್ಬಂದಿ ಅಕ್ರಮವಾಗಿ ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವವರ ಮೇಲೆ ಹದ್ದಿನ ಕಣ್ಣು ಇಟ್ಟುಕೊಂಡಿದ್ದರೂ, ಅವರ ಕಣ್ತಪ್ಪಿಸಿ ಕಾಡಿನೊಳಕ್ಕೆ ಹೋಗಿ ಕೆಜಿಗಟ್ಟೆಲೆ ಮಾಕಳಿ ಬೇರು ಸಂಗ್ರಹಿಸುತ್ತಿದ್ದಾರೆ.

‘ನೆರೆಯ ಕೇರಳ ಮತ್ತು ತಮಿಳುನಾಡಿನಲ್ಲಿ ಈ ಬೇರಿಗೆ ಹೆಚ್ಚು ಬೇಡಿಕೆ ಇದೆ. ನೆರೆರಾಜ್ಯದಿಂದ ಬರುವ ಕಳ್ಳರು, ಸ್ಥಳೀಯರ ನೆರವು ಪಡೆದು ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಕಳ್ಳತನ ಮಾಡುತ್ತಾರೆ’ ಎಂದು ಜಾಗೇರಿ ಗ್ರಾಮದ ಶರವಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ಇದಕ್ಕೆ ಪೂರಕವೆಂಬಂತೆ ಕಾವೇರಿ ಹಾಗೂ ಮಲೆ ಮಹದೇಶ್ವರ ವನ್ಯಧಾಮದಲ್ಲಿ ವರದಿಯಾದ ಪ್ರಕರಣಗಳಲ್ಲಿ ಬಂಧಿಸಿದವರಲ್ಲಿ ಹೆಚ್ಚಿನವರು ತಮಿಳುನಾಡಿನರಾಗಿದ್ದಾರೆ.

ಕಾಡಿನಲ್ಲೇ ತಂಗುವ ಕಳ್ಳರು

ಈ ಬೇರನ್ನು ಸಂಗ್ರಹಿಸುವ ಸ್ಥಳೀಯರು ಕಡಿಮೆ. ಆದರೆ ಹೊರಗಿನಿಂದ ಬರುವವರಿಗೆ ಅದನ್ನು ಸಂಗ್ರಹಿಸಲು ಸಹಾಯ ಮಾಡುತ್ತಾರೆ. ಈ ಬೇರು ಒಂದೇ ಕಡೆಯಲ್ಲಿ ನೂರಾರು ಕೆಜಿ ಸಿಗುವುದಿಲ್ಲ. ಬೆರಳೆಣಿಕೆಯಷ್ಟು ಕೆಜಿ ಸಿಗಬಹುದು. ಹಾಗಾಗಿ, ಇದರ ಅಕ್ರಮ ಸಂಗ್ರಹಕ್ಕೆ ಬರುವವರು ಕೆಲವು ದಿನ ಕಾಡಿನಲ್ಲೇ ವಾಸವಿದ್ದು, ಅದರ ಸಂಗ್ರಹದಲ್ಲಿ ತೊಡಗುತ್ತಾರೆ. ನಂತರ ಒಂದೇ ಕಡೆ ಶೇಖರಣೆ ಮಾಡಿ, ಅಕ್ರಮವಾಗಿ ಹೊರ ರಾಜ್ಯಕ್ಕೆ ಸಾಗಿಸಲು ಪ್ರಯತ್ನಿಸುತ್ತಾರೆ. ಹಲವು ಪ್ರಕರಣಗಳಲ್ಲಿ ನಮಗೆ ಖಚಿತ ಮಾಹಿತಿ ದೊರೆತಿದ್ದು, ಅದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದೇವೆ’ ಎಂದುಕೊಳ್ಳೇಗಾಲ ಬಫರ್ ವಲಯ ಅರಣ್ಯಧಿಕಾರಿ ಪ್ರವೀಣ್ ರಾಮಪ್ಪ ಚಲವಾದಿ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಉತ್ತಮ ಬೆಲೆ: ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಅಕ್ರಮ ಸಂಗ್ರಹಕಾರರು ಬೇರುಗಳನ್ನು ಮಧ್ಯವರ್ತಿಗಳಿಗೆ ಮಾರಾಟ ಮಾಡುತ್ತಾರೆ. ಅವರು ಅದನ್ನು ಬೇರೆಕಡೆಗೆ ಸಾಗಿಸಿ ಹೆಚ್ಚಿನ ಬೆಲೆ ಮಾರಾಟ ಮಾಡುತ್ತಾರೆ ಎಂದು ಹೇಳುತ್ತಾರೆ ಅರಣ್ಯ ಅಧಿಕಾರಿಗಳು.

ಪ್ರಕರಣವೊಂದರಲ್ಲಿ ಜಪ್ತಿ ಮಾಡಿದ್ದ 1,500 ಕೆಜಿಗಳಷ್ಟು ಬೇರನ್ನು ಕಳೆದ ತಿಂಗಳು ಹರಾಜು ಹಾಕಿದ್ದೆವು. ₹7 ಲಕ್ಷ ಸಂಗ್ರಹವಾಗಿತ್ತು ಎಂದು ರಾಮಪ್ಪ ಚಲವಾದಿ ಅವರು ಮಾಹಿತಿ ನೀಡಿದರು.

ಮಾಕಳಿ ಬೇರಿನ ಸಂಗ್ರಹ ಹಾಗೂ ಮಾರಾಟದ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದೇವೆ. ಅಕ್ರಮ ಸಂಗ್ರಹಕಾರರ ಮೇಲೆ ಸಿಬ್ಬಂದಿ ನಿಗಾ ಇಟ್ಟಿದ್ದಾರೆ
- ವಿ.ಏಡುಕುಂಡಲು, ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.