ADVERTISEMENT

ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಮಕರ ಸಂಕ್ರಾಂತಿಯ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 14:46 IST
Last Updated 14 ಜನವರಿ 2021, 14:46 IST
ಯಳಂದೂರು ತಾಲ್ಲೂಕಿನ ಹೊನ್ನೂರು ಗ್ರಾಮದಲ್ಲಿ ಗುರುವಾರ ಸಂಕ್ರಾಂತಿ ಹಬ್ಬದ ಅಂಗವಾಗಿ ರೈತರು ಜಾನುವಾರುಗಳನ್ನು ಕಿಚ್ಚು ಹಾಯಿಸಿ ಸಂಭ್ರಮಿಸಿದರು
ಯಳಂದೂರು ತಾಲ್ಲೂಕಿನ ಹೊನ್ನೂರು ಗ್ರಾಮದಲ್ಲಿ ಗುರುವಾರ ಸಂಕ್ರಾಂತಿ ಹಬ್ಬದ ಅಂಗವಾಗಿ ರೈತರು ಜಾನುವಾರುಗಳನ್ನು ಕಿಚ್ಚು ಹಾಯಿಸಿ ಸಂಭ್ರಮಿಸಿದರು   

ಚಾಮರಾಜನಗರ: ಜಿಲ್ಲೆಯಾದ್ಯಂತ ಗುರುವಾರ ಶ್ರದ್ಧಾ ಭಕ್ತಿ, ಸಂಭ್ರಮ ಸಡಗರದಿಂದ ಸಂಕ್ರಾಂತಿಹಬ್ಬವನ್ನು ಆಚರಿಸಲಾಯಿತು.

ಇಂಗ್ಲಿಷ್‌ ಕ್ಯಾಲೆಂಡರ್‌ ವರ್ಷದ ಮೊದಲ ಹಬ್ಬದಂದು ಜನರು ಎಳ್ಳು ಬೆಲ್ಲ, ಕಬ್ಬಿನ ಸಿಹಿಯನ್ನು ಸವಿದರು. ಮನೆಗಳನ್ನು ತಳಿರು ತೋರಣ, ರಂಗೋಲಿಯಿಂದ ಅಲಂಕರಿಸಿ ಸಂಭ್ರಮಿಸಿದರು.

ಚಾಮರಾಜನಗರ ಸೇರಿದಂತೆ ಜಿಲ್ಲೆಯಾದ್ಯಂತ ವಿವಿಧ ದೇವಾಲಯಗಳಲ್ಲಿ ಸಂಕ್ರಾಂತಿ ಅಂಗವಾಗಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ದೇವರ ವಿಗ್ರಹಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಜನರು ಕೂಡ ಕುಟುಂಬ ಸಮೇತರಾಗಿ ದೇವರ ದರ್ಶನ ಪಡೆದರು.

ADVERTISEMENT

ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ, ಗುಂಡ್ಲುಪೇಟೆ ತಾಲ್ಲೂಕಿನ ಹುಲುಗನಮುರಡಿ ದೇವಾಲಯದಲ್ಲಿ ಸಂಕ್ರಾಂತಿ ಜಾತ್ರೆ ಕೋವಿಡ್‌ ಕಾರಣಕ್ಕೆ ಸರಳವಾಗಿ ನಡೆಯಿತು. ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ಜನರುಎಳ್ಳು ಬೆಲ್ಲವನ್ನು ಸ್ನೇಹಿತರು, ನೆಂಟರಿಷ್ಟರಿಗೆ ಹಂಚಿ ಸಂಭ್ರಮಿಸಿದರು. ಮನೆಗಳಲ್ಲಿ ಸಿಹಿ ಮತ್ತು ಖಾರ ಪೊಂಗಲ್‌ ಸೇರಿದಂತೆ ವಿಶೇಷ ಅಡುಗೆ ಸಿದ್ಧಪಡಿಸಿ ಬಂಧುಗಳನ್ನು ಆಹ್ವಾನಿಸಿ ಬಡಿಸಿದರು. ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಹಬ್ಬ ಆಚರಣೆ ಜೋರಾಗಿತ್ತು.

ಗೋವುಗಳಿಗೆ ಪೂಜೆ: ನಗರ ಪ್ರದೇಶಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜನರು ಹಸುಗಳಿಗೆ ಪೂಜೆ ಸಲ್ಲಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ರೈತರು ಹೊಸ ಫಸಲುಗಳಿಗೆ ಪೂಜೆ ಸಲ್ಲಿಸುವುದರ ಮೂಲಕ ಸಂಕ್ರಾಂತಿಯನ್ನು ವಿಶಿಷ್ಟವಾಗಿ ಆಚರಿಸಿದರು. ಹಬ್ಬದ ಅಂಗವಾಗಿ, ಸಂಜೆ ಹೊತ್ತು ಎತ್ತುಗಳನ್ನು ಕಿಚ್ಚು ಹಾಯಿಸಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.