ADVERTISEMENT

ಚಾಮರಾಜನಗರ | ಸಂಕ್ರಾಂತಿ ಸಡಗರ: ಎಳ್ಳು ಬೆಲ್ಲದ ವಿನಿಮಯ

​ಪ್ರಜಾವಾಣಿ ವಾರ್ತೆ
Published 16 ಜನವರಿ 2024, 4:23 IST
Last Updated 16 ಜನವರಿ 2024, 4:23 IST
ಸಂಕ್ರಾಂತಿ ಹಬ್ಬದ ಅಂಗವಾಗಿ ಚಾಮರಾಜನಗರದಲ್ಲಿ ರಾಸುಗಳಿಗೆ ಪೂಜೆ ಸಲ್ಲಿಸಲಾಯಿತು
ಸಂಕ್ರಾಂತಿ ಹಬ್ಬದ ಅಂಗವಾಗಿ ಚಾಮರಾಜನಗರದಲ್ಲಿ ರಾಸುಗಳಿಗೆ ಪೂಜೆ ಸಲ್ಲಿಸಲಾಯಿತು   

ಚಾಮರಾಜನಗರ/ ಯಳಂದೂರು: ಜಿಲ್ಲೆಯಾದ್ಯಂತ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಜನರು ಸೋಮವಾರ ಸಂಕ್ರಾಂತಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. 

ಎಳ್ಳು, ಬೆಲ್ಲ ಕಬ್ಬು ಹಂಚಿ, ಸಿಹಿ ಸವಿದು ಶುಭಾಶಯ ವಿನಿಮಯ ಮಾಡಿಕೊಂಡರು. ರೈತರು ಫಸಲಿಗೆ ಪೂಜೆ ಸಲ್ಲಿಸಿ, ಜಾನುವಾರುಗಳನ್ನು ಅಲಂಕರಿಸಿ ಪೂಜೆ ಮಾಡಿ, ಕಿಚ್ಚು ಹಾಯಿಸಿ ಸಂಭ್ರಮಿಸಿದರು. 

ಮನೆ ಮನೆಗಳಲ್ಲಿ ಸಂಭ್ರಮ

ADVERTISEMENT

ಜಿಲ್ಲೆಯಾದ್ಯಂತ ಮನೆ ಮನೆಗಳಲ್ಲಿ ಹಿಂದೂಗಳು ಶ್ರದ್ಧಾ ಭಕ್ತಿಯಿಂದ ಹಬ್ಬ ಆಚರಿಸಿದರು. 

‌ಮಹಿಳೆಯರು, ಮಕ್ಕಳು ಮನೆಯ ಮುಂಭಾಗ ಆಕರ್ಷಕ ರಂಗೋಲಿ ಬಿಡಿಸಿ, ತಳಿರು ತೋರಣಗಳನ್ನು ಕಟ್ಟಿ ಅಲಂಕರಿಸಿದರು. 

ಮನೆಗಳಲ್ಲಿ ಕಿಚಡಿ, ಖಾರ, ಸಿಹಿ ಪೊಂಗಲ್‌, ಪಾಯಸ ಸೇರಿದಂತೆ ಇತರೆ ಭಕ್ಷ್ಯಗಳನ್ನು ಸಿದ್ಧಪಡಿಸಿ ಸ್ನೇಹಿತರು, ನೆಂಟರಿಷ್ಟರನ್ನು ಮನೆಗೆ ಆಹ್ವಾನಿಸಿ ಹಬ್ಬದ ಊಟ ಬಡಿಸಿದರು. 

ನಂತರ ಮಹಿಳೆಯರು, ಮಕ್ಕಳು ಸ್ನೇಹಿತರು, ನೆಂಟರಿಷ್ಟರ ಮನೆಗೆ ತೆರಳಿ ಎಳ್ಳು ಬೆಲ್ಲ, ಕಬ್ಬು ನೀಡಿ ಶುಭಾಶಯ ನಕೋರಿದರು.    

ದೇವಾಲಯಳಿಗೆ ಭೇಟಿ

ಜನರು ಕುಟುಂಬ ಸಮೇತರಾಗಿ ದೇವಾಲಯಗಳಿಗೆ ಭೆಟಿ ನೀಡಿದರು. ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿತ್ತು. 

ಗ್ರಾಮೀಣ ಭಾಗಗಳಲ್ಲಿ ರೈತರು ಸಂಪ್ರದಾಯದಂತೆ ಸಂಕ್ರಾಂತಿ ಆಚರಿಸಿದರು. ಬೆಳಿಗ್ಗೆಯಿಂದಲೇ ಬೆಳೆದ ಫಸಲನ್ನು ಪೂಜೆಗೆ ಅಣಿಗೊಳಿಸಿದರು. ಗೋವುಗಳನ್ನು ಕೆರೆ, ಕಟ್ಟೆಗಳಲ್ಲಿ ತೊಳೆದು, ಕೋಡುಗಳಿಗೆ ಬಣ್ಣ ಹಚ್ಚಿ ಪೂಜೆ ಸಲ್ಲಿಸಿದರು. ಸಂಜೆ ಜಾನುವಾರುಗಳಿಗೆ ಕಿಚ್ಚು ಹಾಯಿಸಿ ಸಂಕ್ರಾಂತಿ ಸಡಗರ ಹೆಚ್ಚಿಸಿದರು. 

ಮನೆಗೆ ಹಿಂದಿರುಗಿದ ಹಸುಗಳಿಗೆ ಸುಮಂಗಲಿಯರು ಹಣ್ಣು, ಕಾಯಿ ನೀಡಿ ಆರತಿ ಬೆಳಗಿದರು

ಯಳಂದೂರು ತಾಲ್ಲೂಕಿನ ಹೊನ್ನೂರು ಗ್ರಾಮದಲ್ಲಿ ಅಲಂಕೃತ  ರಾಸುಗಳನ್ನು ಮೆರವಣಿಗೆ ಮೂಲಕ ಒಂದೆಡೆ ಸೇರಿಸಿ,  ಕಿಚ್ಚು ಹಾಯಿಸಲಾಯಿತು.

ಮಾದಪ್ಪನ ಸನ್ನಿಧಿಯಲ್ಲಿ ಭಕ್ತರ ದಂಡು

ಮಹದೇಶ್ವರ ಬೆಟ್ಟ: ಮಕರ ಸಂಕ್ರಾತಿ ಹಬ್ಬದ ಪ್ರಯುಕ್ತ ಸಾವಿರಾರು ಭಕ್ತರು ಮಹದೇಶ್ವರ ಸ್ವಾಮಿಯ ದರ್ಶನ ಪಡೆದರು. ಮಕರ ಸಂಕ್ರಮಣದ ಪ್ರಯುಕ್ತ ಮಹದೇಶ್ವರಸ್ವಾಮಿಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಅಭಿಷೇಕಗಳು ಬಿಲ್ವಾರ್ಚನೆ ನಡೆಯಿತು. ಮಹಾ ಮಂಗಳಾರತಿ ಬೆಳಗಿದ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು. ಜಿಲ್ಲೆ ಹೊರ ಜಿಲ್ಲೆಗಳಿಂದ ಮಾತ್ರವಲ್ಲದೆ ನೆರೆಯ ತಮಿಳುನಾಡಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಬೆಳ್ಳಿ ರಥೋತ್ಸವ ಹುಲಿವಾಹನ ರುದ್ರಾಕ್ಷಿ ಮಂಟಪ ಬಸವ ವಾಹನ ಚಿನ್ನದ ರಥೋತ್ಸವ ಹಾಗೂ ಉರುಳು ಸೇವೆ ಪಂಜಿನ ಸೇವೆ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸಿ ಹರಕೆ ತೀರಿಸಿದರು. 

ಮಕರ ಸಂಕ್ರಾಂತಿ ದಿನವಾದ ಸೋಮವಾರ ಸಂಜೆ ಯಳಂದೂರು ತಾಲ್ಲೂಕಿನ ಹೊನ್ನೂರಿನಲ್ಲಿ ರೈತರು ಜಾನುವಾರುಗಳನ್ನು ಕಿಚ್ಚು ಹಾಯಿಸಿದರು
ಸಂಕ್ರಾಂತಿಯಂದು ಮಹದೇಶ್ವರ ಬೆಟ್ಟದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.