ADVERTISEMENT

ಮಹದೇಶ್ವರ ಬೆಟ್ಟ: ಮಹಾಲಯ ಅಮಾವಾಸ್ಯೆ ಜಾತ್ರೆ ಇಂದಿನಿಂದ

ಕೌದಳ್ಳಿಯಿಂದ ದ್ವಿಚಕ್ರವಾಹನಗಳ ಸಂಚಾರಕ್ಕೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2023, 7:26 IST
Last Updated 12 ಅಕ್ಟೋಬರ್ 2023, 7:26 IST
ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ 
ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ    

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ, ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಗುರುವಾರದಿಂದ (ಅ.12) ಮಹಾಲಯ ಅಮಾವಾಸ್ಯೆ ಜಾತ್ರೆ ಆರಂಭವಾಗಲಿದೆ. 

13ರಂದು ಚದುರ್ದಶಿ ಮಹದೇಶ್ವರ ಸ್ವಾಮಿಗೆ ಎಣ್ಣೆಮಜ್ಜನ ವಿಶೇಷ ಸೇವೆ ಉತ್ಸವಾದಿಗಳು ಹಾಗೂ 14ರಂದು ಮಹಾಲಯ ಅಮಾವಾಸ್ಯೆ ವಿಶೇಷ ಉತ್ಸವಾದಿಗಳು ಜರುಗಲಿವೆ.

15ರಂದು ದಸರಾ ಜಾತ್ರಾ ಮಹೋತ್ಸವದ ಶರನ್ನವರಾತ್ರಿ ಉಯ್ಯಾಲೋತ್ಸವ ಪ್ರಾರಂಭವಾಗಲಿದೆ. 23ರಂದು ಮಹಾನವಮಿ, ಆಯುಧಪೂಜೆ ಹಾಗೂ 24ರಂದು ವಿಜಯದಶಮಿ, ಕುದುರೆ ವಾಹನೋತ್ಸವ ನಡೆಯಲಿದೆ.

ದೀಪಾವಳಿ ಜಾತ್ರೆ: ನವೆಂಬರ್ 10ರಂದು ದೀಪಾವಳಿ ಪ್ರಯುಕ್ತ ವಿಶೇಷ ಕಾರ್ಯಕ್ರಮ ಪ್ರಾರಂಭವಾಗಲಿದೆ. 11ರಂದು ಶ್ರೀ ಸ್ವಾಮಿಗೆ ಎಣ್ಣೆಮಜ್ಜನ ಸೇವೆ ಮತ್ತು ಉತ್ಸವಾದಿಗಳು, 12ರಂದು ನರಕ ಚತುರ್ದಶಿ ವಿಶೇಷ ಉತ್ಸವಾದಿಗಳು, 13ರಂದು ಅಮಾವಾಸ್ಯೆ, ಹಾಲರುವೆ ಉತ್ಸವ ಹಾಗೂ 14ರಂದು ದೀಪಾವಳಿ ಮಹಾರಥೋತ್ಸವವು ಬೆಳಿಗ್ಗೆ 8.50 ರಿಂದ 9.10 ಗಂಟೆಯವರೆಗೆ ಜರುಗಲಿದೆ.

ADVERTISEMENT

ನವೆಂಬರ್ 20ರಂದು ಮೊದಲನೇ ಕಾರ್ತಿಕ ಸೋಮವಾರ, 27ರಂದು ಎರಡನೇ ಕಾರ್ತಿಕ ಸೋಮವಾರ, ಡಿಸೆಂಬರ್ 4ರಂದು ಮೂರನೇ ಕಾರ್ತಿಕ ಸೋಮವಾರದಂದು ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. 11ರಂದು ನಾಲ್ಕನೇ ಕಾರ್ತಿಕ ಸೋಮವಾರದಂದು ಶ್ರೀ ಸ್ವಾಮಿಗೆ ಎಣ್ಣೆಮಜ್ಜನ ಸೇವೆ, ರಾತ್ರಿ ಶ್ರೀ ಮಹದೇಶ್ವರ ಜ್ಯೋತಿ ದರ್ಶನ ಹಾಗೂ 12ರಂದು ಕಾರ್ತಿಕ ಅಮಾವಾಸ್ಯೆ ವಿಶೇಷ ಸೇವೆ ಉತ್ಸವಗಳು ನಡೆಯಲಿವೆ ಎಂದು  ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದ್ವಿಚಕ್ರವಾಹನಗಳಿಗೆ ನಿರ್ಬಂಧ
ಈ ಮಧ್ಯೆ ಮಹಾಲಯ ಅಮಾವಾಸ್ಯೆ ಜಾತ್ರೆಯಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆ ಇರುವುದರಿಂದ ಬೆಟ್ಟದ ರಸ್ತೆಯಲ್ಲಿ ವಾಹನಗಳ ದಟ್ಟಣೆ ತಡೆಯುವ ಉದ್ದೇಶದಿಂದ ಬುಧವಾರ ಸಂಜೆ 6 ಗಂಟೆಯಿಂದ 15ರ ಸಂಜೆ 7 ಗಂಟೆಯವರೆಗೆ ಕೌದಳ್ಳಿ ಗ್ರಾಮ ಪ್ರಕಾಶ್‌ ಗಾರ್ಡನ್‌ನಿಂದ ಬೆಟ್ಟದವರೆಗೆ ದ್ವಿಚಕ್ರವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್‌ ಆದೇಶ ಹೊರಡಿಸಿದ್ದಾರೆ.  ಅಲ್ಲಿಂದ ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.  ಜಾತ್ರೆಯ ಸಂದರ್ಭದಲ್ಲಿ ಬೆಟ್ಟ ರಸ್ತೆಯ ತಿರುವುಗಳಲ್ಲಿ ಅಪಘಾತಗಳು ಹೆಚ್ಚು ಸಂಭವಿಸುತ್ತಿದ್ದವು. ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚು ತೊಂದರೆ ಅನುಭವಿಸುತ್ತಿದ್ದರು. ಈ ಕಾರಣಕ್ಕೆ ಕಳೆದ ವರ್ಷದಿಂದ ಜಾತ್ರಾ ಸಮಯದಲ್ಲಿ ದ್ವಿಚಕ್ರ ವಾಹನಗಳ ಸಂಚಾರವನ್ನು ಜಿಲ್ಲಾಡಳಿತ ತಾತ್ಕಾಲಿಕವಾಗಿ ನಿಷೇಧಿಸುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.