ಹನೂರು: ವಿಶಿಷ್ಟ ಪ್ರಾಣಿ ಸಂಕುಲ ಹಾಗೂ ಸಸ್ಯ ಸಂಪತ್ತನ್ನು ಒಡಲೊಳಗೆ ಇರಿಸಿಕೊಂಡಿರುವ ಮಲೆಮಹದೇಶ್ವರ ವನ್ಯಧಾಮದಲ್ಲಿ ಅಪರೂಪದ ಕೆನ್ನಾಯಿಗಳ ಹಿಂಡು ಪ್ರವಾಸಿಗರಿಗೆ ದರ್ಶನ ನೀಡುತ್ತಿದ್ದು ಆಕರ್ಷಿಸುತ್ತಿವೆ.
ಸಫಾರಿಯಲ್ಲಿ ಆನೆ, ಹುಲಿ, ಚಿರತೆ, ಕರಿಡಿ, ಜಿಂಕೆಗಳ ಸಾಮಾನ್ಯವಾಗಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದವು. ಇದೀಗ ಕೆನ್ನಾಯಿಗಳು ಸಹ ಹೆಚ್ಚಾಗಿ ನೋಡಲು ಸಿಗುತ್ತಿದ್ದು ಪ್ರವಾಸಿಗರು ಖುಷಿಯಾಗಿದ್ದಾರೆ.
ಎರಡು ಹುಲಿ ಸಂರಕ್ಷಿತ ಪ್ರದೇಶ, ವನ್ಯಧಾಮ ಹಾಗೂ ಮೀಸಲು ಅರಣ್ಯ ಪ್ರದೇಶಗಳೊಂದಿಗೆ ಗಡಿ ಹಂಚಿಕೊಂಡಿರುವ ಮಲೆಮಹದೇಶ್ವರ ವನ್ಯಧಾಮವು ವನ್ಯಪ್ರಾಣಿಗಳ ಪ್ರಮುಖ ಆವಾರಸ್ಥಾನವಾಗಿ ಗುರುತಿಸಿಕೊಂಡಿದೆ. ವನ್ಯಧಾಮದಲ್ಲಿರುವ ಪ್ರಕೃತಿ ಸೌಂದರ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಲು ಅರಣ್ಯ ಇಲಾಖೆಯು ಅಜ್ಜೀಪುರ ಹಾಗೂ ಲೊಕ್ಕನಹಳ್ಳಿಯಲ್ಲಿ ಸಫಾರಿ ಕೇಂದ್ರಗಳನ್ನು ತೆರೆದಿದೆ.
ಲೊಕ್ಕನಹಳ್ಳಿ ಸಫಾರಿ ಮಾರ್ಗದಲ್ಲಿ ಹುಲಿ, ಚಿರತೆ, ಆನೆ, ಕರಡಿ, ಜಿಂಕೆ, ಕಡವೆಗಳ ಜೊತೆಗೆ ಕೆನ್ನಾಯಿಗಳು ಹೆಚ್ಚಾಗಿ ಪ್ರವಾಸಿಗರಿಗೆ ಕಾಣಸಿಗುತ್ತಿದ್ದು ಗಮನ ಸೆಳೆಯುತ್ತಿವೆ.
ಆಗಾಗ ಮಳೆ ಬೀಳುತ್ತಿರುವುದರಿಂದ ಕಾಡಿನೊಳಗೆ ಹಸಿರು ಚಿಗುರೊಡೆಯಲು ಆರಂಭವಾಗಿದೆ. ಇತರೆ ವನ್ಯಪ್ರಾಣಿಗಳಂತೆ ಕೆನ್ನಾಯಿಗಳು ಸಹ ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಳಿವಿನಂಚಿನಲ್ಲಿರುವ ಪ್ರಾಣಿಯಾಗಿರುವ ಕೆನ್ನಾಯಿಗಳ ಜೀವನ ಶೈಲಿ ನಿಗೂಢವಾದುದು.
ಗುಂಪು ಗುಂಪಾಗಿ ಕಾಣಿಸಿಕೊಳ್ಳುವ ಇವು ಮನುಷ್ಯರಿಂದ ದೂರವಿರಲು ಇಷ್ಟಪಡುತ್ತವೆ. ಕಾಡಿನೊಳಗೆ ಆಹಾರ ಸಿಗದಿದ್ದರೂ ಇತರೆ ಪ್ರಾಣಿಗಳಂತೆ ಗ್ರಾಮಗಳಿಗೆ ಲಗ್ಗೆ ಇಡುವುದಿಲ್ಲ. ಇಂಥ ವಿಶಿಷ್ಟ ಪ್ರಾಣಿಗಳ ಹಿಂಡು ಮರಿಗಳ ಜತೆ ಹೆಚ್ಚಾಗಿ ಕಾಣಿಸಿಕೊಳ್ಳಲಾರಂಭಿಸಿವೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
ಪಶ್ಚಿಮಕ್ಕೆ ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ, ದಕ್ಷಿಣಕ್ಕೆ ಸತ್ಯಮಂಗಲ ಹುಲಿ ಸಂರಕ್ಷತ ಪ್ರದೇಶಗಳಿದ್ದು ಇಲ್ಲಿಂದಲೂ ಕೆನ್ನಾಯಿಗಳು ಮಲೆಮಹದೇಶ್ವರ ವನ್ಯದಾಮದ ಪಿ.ಜಿ ಪಾಳ್ಯ ವನ್ಯಜೀವಿ ವಲಯಕ್ಕೆ ಬಂದಿರುವ ಸಾಧ್ಯತೆಗಳು ಹೆಚ್ಚಾಗಿವೆ.
2022ರಲ್ಲಿ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಕಾಣಿಸಿಕೊಂಡಿದ್ದ ಕೆನ್ನಾಯಿಯೊಂದು ಆವಾಸ ಸ್ಥಾನ ಹುಡುಕಿಕೊಂಡು 2023ರಲ್ಲಿ ಮಲೆಮಹದೇಶ್ವರ ವನ್ಯಧಾಮಕ್ಕೆ ಬಂದಿರುವುದು ನೇಚರ್ ಕನರ್ವೇಷನ್ ಫೌಂಡೇಷನ್ ಅಳವಡಿಸಿದ್ದ ಕ್ಯಾಮರದಲ್ಲಿ ಪತ್ತೆಯಾಗಿದೆ.
ಬಿಳಿಗಿರಿರಂಗಬೆಟ್ಟ ಹುಲಿ ಸಂರಕ್ಷಣಾ ಪ್ರದೇಶಕ್ಕೆ ಹೊಂದಿಕೊಂಡಿರುವ ಪಿ.ಜಿ.ಪಾಳ್ಯ ಮತ್ತು ಹನೂರು ವಲಯಗಳು ಸೀಳುನಾಯಿಗಳ ಮುಖ್ಯ ಆವಾಸಸ್ಥಾನಗಳಾಗಿವೆ. ಕೆಲವು ಸೀಳುನಾಯಿಗಳ ಗುಂಪು ಬಿಳಿಗಿರಿರಂಗನಬೆಟ್ಟದಿಂದ ಮಲೆ ಮಹದೇಶ್ವರಧಾಮಕ್ಕೆ ವಲಸೆ ಬಂದಿರುವುದನ್ನು ದಾಖಲಿಸಲಾಗಿದೆ ಎನ್ನುತ್ತಾರೆ ವನ್ಯಜೀವಿ ತಜ್ಞ ಡಾ.ಸಂಜಯ್ ಗುಬ್ಬಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.