ADVERTISEMENT

ಗರ್ಭಿಣಿ ಪತ್ನಿ ಕೊಲೆ ಮಾಡಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

2013ರ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಪ್ರಕರಣ, 9 ವರ್ಷಗಳ ಬಳಿಕ ಅಪರಾಧಿಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 16:29 IST
Last Updated 14 ಸೆಪ್ಟೆಂಬರ್ 2022, 16:29 IST
ಕೋರ್ಟ್‌ 
ಕೋರ್ಟ್‌    

ಚಾಮರಾಜನಗರ: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಉಸಿರುಕಟ್ಟಿಸಿ ಕೊಲೆ ಮಾಡಿದ ವ್ಯಕ್ತಿಗೆ ಜಿಲ್ಲಾಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಕೊಳ್ಳೇಗಾಲ ತಾಲ್ಲೂಕು ರಾಚಪ್ಪಾಜಿ ನಗರದ ಮುತ್ತುರಾಜು ಅಲಿಯಾಸ್‌ ಚಿನಕಯ್ಯ ಶಿಕ್ಷೆಗೆ ಗುರಿಯಾದ ಅಪರಾಧಿ. 2013ರ ಸೆಪ್ಟೆಂಬರ್‌ 25ರಂದು ಕೊಲೆ ಪ್ರಕರಣ ದಾಖಲಾಗಿತ್ತು.

ವೃತ್ತಿಯಲ್ಲಿ ಟ್ರ್ಯಾಕ್ಟರ್‌ ಚಾಲಕನಾಗಿದ್ದ ಮುತ್ತುರಾಜು ಗೊಲ್ಲ ಜನಾಂಗದವನು. ಆತ ಸೋಲಿಗ ಸಮುದಾಯಕ್ಕೆ ಸೇರಿದ್ದ ಜ್ಯೋತಿ ಎಂಬಾಕೆಯನ್ನು ಪ್ರೀತಿಸಿದ್ದ. ಆಕೆಯ ಮನೆಯವರ ವಿರೋಧದ ನಡುವೆಯೂ ಆಕೆಯನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದು ಮದುವೆಯಾಗಿದ್ದ.

ADVERTISEMENT

ಸ್ವಲ್ಪ ದಿನಗಳವರೆಗೆ ಜ್ಯೋತಿಯನ್ನು ಮುತ್ತುರಾಜು ಚೆನ್ನಾಗಿ ನೋಡಿಕೊಂಡಿದ್ದ. ಆಕೆ ಗರ್ಭಣಿಯೂ ಆಗಿದ್ದಳು. ಆದರೆ, ನಂತರ ಜ್ಯೋತಿಯೊಂದಿಗೆ ಜಗಳವಾಡಲು ಆರಂಭಿಸಿದ್ದ. ‘ನಾನು ಗೊಲ್ಲ ಜನಾಂಗದವನು. ನೀನು ಕೀಳು ಜಾತಿಗೆ ಸೇರಿದ ಸೋಲಿಗಳಾಗಿದ್ದು, ನಿನ್ನನ್ನು ಪ್ರೀತಿಸಿ ಮದುವೆಯಾಗಿ ನಮ್ಮ ಮನೆಯವರನ್ನೆಲ್ಲ ದೂರ ಮಾಡಿಕೊಂಡು ದೊಡ್ಡ ತಪ್ಪು ಮಾಡಿದೆ. ಈಗಲೂ ನಿನ್ನನ್ನುಯಾರಿಗೂ ತಿಳಿಯದ ಹಾಗೆ ಕೊಲೆ ಮಾಡಿ ನಮ್ಮ ಜಾತಿಯ ಹುಡುಗಿಯನ್ನು ಮದುವೆ ಮಾಡಿಕೊಳ್ಳುತ್ತೇನೆ’ ಎಂದು ಹೇಳಿ ಮಾನಸಿಕ ಕಿರುಕುಳ ನೀಡಿದ್ದ.

ಜ್ಗೋತಿ 3 ತಿಂಗಳ ಗರ್ಭಿಣಿಯಾಗಿದ್ದಾಗ ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. 2013ರ ಸೆಪ್ಟಂಬರ್‌ 24ರಂದು ಮುತ್ತುರಾಜು, ಜ್ಯೋತಿಯನ್ನು ಕರೆದು, ‘ನೀನು ನಿನ್ನ ತವರು ಮನೆಗೆ ಹೋಗಿ ತುಂಬಾ ತಿಂಗಳಾಗಿವೆ. ಗರ್ಭಿಣಿಯಾಗಿರುವುದರಿಂದ ಸ್ವಲ್ಪ ದಿನ ನಿಮ್ಮ ತಾಯಿಯ ಮನೆಯಲ್ಲಿ ಇರು’ ಎಂದು ಹೇಳಿದ್ದ.

ಆ ದಿನ ರಾತ್ರಿ ಆಕೆಯನ್ನು ಬೈಕಿನಲ್ಲಿ ಕೂರಿಸಿಕೊಂಡು ಸತ್ತೇಗಾಲ ಉಗನಿಯಾ ಮುಖ್ಯ ರಸ್ತೆಯ ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಕೆಳಗಡೆ ಇಳಿಸಿದ್ದ ಮುತ್ತುರಾಜು, ಆಕೆಗೆ ಮದ್ಯ ಬೆರೆಸಿದಜ್ಯೂಸ್ ಕುಡಿಸಿದ್ದ. ಇನ್ನಿಬ್ಬರು ಆರೋಪಿಗಳ ನೆರವಿನಿಂದ, ವೇಲಿನಿಂದ ಆಕೆಯ ಕುತ್ತಿಗೆಯನ್ನು ಬಿಗಿದು ಉಸಿರು ಗಟ್ಟಿಸಿ ಕೊಲೆ ಮಾಡಿದ್ದ. ಶವವನ್ನು ಪಕ್ಕದ ಪಾಳು ಬಿದ್ದಿದ್ದ ಸ್ಥಳದಲ್ಲಿ ಕುರುಚಲು ಗಿಡಗಳ ನಡುವೆ ಹಾಕಿ ಗುರುತು ಪತ್ತೆಯಾಗದಂತೆ ಆಕೆಯ ಎಡ ಕೆನ್ನೆಯನ್ನು ಸುಟ್ಟು ಹಾಕಿದ್ದ.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮುತ್ತುರಾಜು ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ ರುಜುವಾತಾಗಿದ್ದರಿಂದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಬಿ.ಎಸ್‌.ಭಾರತಿ ಅವರು ಮುತ್ತುರಾಜು ಅವರನ್ನು ಅಪರಾಧಿ ಎಂದು ಘೋಷಿಸಿ, ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಜೊತೆಗೆ ₹2.10 ಲಕ್ಷ ದಂಡವನ್ನು ವಿಧಿಸಿದ್ದಾರೆ.

ಪ್ರಾಸಿಕ್ಯೂಷನ್‌ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಲೋಲಾಕ್ಷಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.