ADVERTISEMENT

ಬಾಲಕಿಯನ್ನು ಬಲವಂತವಾಗಿ ಮದುವೆಯಾಗಿ, ಗರ್ಭಿಣಿಯಾಗಿಸಿದ ವ್ಯಕ್ತಿಗೆ 10 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2022, 16:12 IST
Last Updated 5 ಫೆಬ್ರುವರಿ 2022, 16:12 IST
ಚಂದ್ರಶೇಖರ್‌
ಚಂದ್ರಶೇಖರ್‌   

ಚಾಮರಾಜನಗರ: ಬಾಲಕಿಯನ್ನು ಬಲವಂತವಾಗಿ ಮದುವೆ ಮಾಡಿಕೊಂಡು ಆಕೆಯನ್ನು ಗರ್ಭಿಣಿ ಮಾಡಿದ ವ್ಯಕ್ತಿಗೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಉಮ್ಮತ್ತೂರು ಗ್ರಾಮದ ಚಂದ್ರಶೇಖರ್ ಅಲಿಯಾಸ್ ಚಂದ್ರ ಶಿಕ್ಷೆಗೆ ಗುರಿಯಾದ ವ್ಯಕ್ತಿ. 2015ರ ನವೆಂಬರ್‌ 2ರಂದು ಈ ಪ್ರಕರಣ ನಡೆದಿತ್ತು.

ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಚಂದ್ರಶೇಖರ್‌ಗೆ ಮದುವೆಯಾಗಿ ಮೂರು ಮಕ್ಕಳಿದ್ದರು. ಹಾಗಿದ್ದರೂ, ಎಸ್ಸೆಸ್ಸೆಲ್ಸಿ ವರೆಗೆ ಓದಿ ನಂತರ ಮನೆಯಲ್ಲಿದ್ದ 17 ವರ್ಷದ ಬಾಲಕಿಯನ್ನು ಪುಸಲಾಯಿಸಿ ಮದುವೆಯಾಗಿದ್ದ.

ADVERTISEMENT

ತಾನು ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಊರಿನಲ್ಲಿದ್ದ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ ಚಂದ್ರ, ಆಕೆಯೊಂದಿಗೆ ಸಲುಗೆಯಿಂದ ನಡೆದುಕೊಳ್ಳುತ್ತಿದ್ದ.

’ನನಗೆ ಮದುವೆಯಾಗಿಲ್ಲ. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ‘ ಎಂದು ಸುಳ್ಳು ಹೇಳಿ, 2015ರ ನವೆಂಬರ್‌ 2ರಂದು ಬೆಂಗಳೂರಿನಲ್ಲಿದ್ದುಕೊಂಡು ಬಾಲಕಿಗೆ ಕರೆ ಮಾಡಿ, ’ನೀನು ನನ್ನ ಜೊತೆಗೆ ಬೆಂಗಳೂರಿಗೆ ಸುಖವಾಗಿ ಇರಬಹುದು‘ ಎಂದು ಬಾಲಕಿಯನ್ನು ನಂಬಿಸಿದ್ದ. ಆಕೆಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಒಂದು ಮನೆಯಲ್ಲಿ ಇರಿಸಿ ಕುತ್ತಿಗೆಗೆ ಅರಿಸಿನ ದಾರ ಕಟ್ಟಿ, ಆಕೆಯೊಂದಿಗೆ ದೈಹಿಕ ಸಂಪರ್ಕ ನಡೆಸಿದ್ದ. ಬಾಲಕಿ ಗರ್ಭಿಣಿ ಆಗಿದ್ದಳು.

ಈ ಸಂಬಂಧ, ಸಂತೇಮರಹಳ್ಳಿ ಪೊಲೀಸ್‌ ಠಾಣೆಯಲ್ಲಿ ಬಾಲಕಿಯ ತಂದೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರು ಚಂದ್ರಶೇಖರ್‌ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು.

ಆರೋಪಿ ವಿರುದ್ಧದ ಆರೋಪಗಳು ಸಾಬೀತಾಗಿರುವುದರಿಂದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಬಿ.ಎಸ್‌.ಭಾರತಿ ಅವರು ಚಂದ್ರಶೇಖರ್‌ಗೆ 10 ವರ್ಷಗಳ ಸಾಮಾನ್ಯ ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ ಶುಕ್ರವಾರ ಆದೇಶಿಸಿದ್ದಾರೆ. ಕಾನೂನು ಸೇವಾ ಪ್ರಾಧಿಕಾರದಿಂದ ₹20 ಸಾವಿರ ಪರಿಹಾರ ನೀಡುವಂತೆಯೂ ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕೆ.‌ಯೋಗೇಶ್ ಅವರು ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.