ADVERTISEMENT

ಯಳಂದೂರು| 200 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೇಸಾಯ: ಉತ್ತಮ ಇಳುವರಿ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 2:28 IST
Last Updated 19 ಜನವರಿ 2026, 2:28 IST
ಯಳಂದೂರು ತಾಲ್ಲೂಕಿನ ಕೆಸ್ತೂರು ತೋಟದ ಮಾವಿನ ಮರವೊಂದರಲ್ಲಿ ಸಮೃದ್ಧವಾಗಿ ಹೂ ಅರಳಿದೆ
ಯಳಂದೂರು ತಾಲ್ಲೂಕಿನ ಕೆಸ್ತೂರು ತೋಟದ ಮಾವಿನ ಮರವೊಂದರಲ್ಲಿ ಸಮೃದ್ಧವಾಗಿ ಹೂ ಅರಳಿದೆ   

ಯಳಂದೂರು: ತಾಲ್ಲೂಕಿನಲ್ಲಿ ಸಂಕ್ರಾಂತಿ ನಂತರ ಹವಾಮಾನ ಹಿತಕರವಾಗಿದ್ದು, ಈ ಭಾಗದ ಮಾವು ಮರಗಳು ಹೂಗಳಿಂದ ತುಂಬಿವೆ. ಇದು ಮುಂದಿನ ದಿನಗಳಲ್ಲಿ ಸಮೃದ್ಧ ಇಳುವರಿ ತಂದುಕೊಡುವ ನಿರೀಕ್ಷೆ ಮೂಡಿಸಿದೆ. ಕಳೆದ ವರ್ಷಕ್ಕಿಂತ ಹೆಚ್ಚಿನ ಫಸಲು ಕೈಸೇರುವ ನಿರೀಕ್ಷೆಯಲ್ಲಿ ಇದ್ದಾರೆ ಮಾವು ಬೆಳೆಗಾರರು.

ಅಗರ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 200 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ರಸಪೂರಿ, ಆಪೂಸ್, ತೋತಾಪುರಿ, ಮಲಗೋವಾ, ಬಾದಾಮಿ, ಮತ್ತಿತರ ಸ್ಥಳೀಯ ತಳಿಗಳ ಮಾವಿನ ಹಣ್ಣುಗಳು ಹೆಚ್ಚಾಗಿ ಸಿಗುತ್ತವೆ. ಜನವರಿ ಮಧ್ಯಂತರದಲ್ಲಿ ಎಲ್ಲ ಮರಗಳಲ್ಲಿ ಸಮೃದ್ಧ ಹೂ ಗೋಚರಿಸಿದ್ದು, ಬೆಳೆಗೆ ಪೂರಕ ವಾತಾವರಣವು ಇರುವುದರಿಂದ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುವ ಸಾಧ್ಯತೆ ಹೆಚ್ಚಿಸಿದೆ.

ಮಕರ ಸಂಕ್ರಾಂತಿ ನಂತರ ಬಿಸಿಲಿನ ನಡುವೆ ಚಳಿಯೂ ಹೆಚ್ಚಿದೆ. ತಂಪು ಹವೆ ಮುಂದುವರಿದರೆ ಮಾವಿನ ಸಾಂದ್ರತೆ ಹೆಚ್ಚಾಗಲಿದೆ. ಈಗಾಗಲೇ ಹೆಚ್ಚಿನ ಹೂಗಳಿಂದ ವೃಕ್ಷಗಳು ನಳನಳಿಸುತ್ತಿದ್ದು, ಕೆಲವು ಮರಗಳಲ್ಲಿ ಜಿಗಿಹುಳು ಮತ್ತು ಬೂಸ್ಟ್ ಬಾಧೆಯೂ ಕಾಣಿಸಿಕೊಂಡಿದೆ. ಇದರ ಹತೋಟಿಗೆ ರೈತರು ಮುಂದಾಗಿದ್ದಾರೆ. ಉಳಿದಂತೆ ಮಹಾ ಶಿವರಾತ್ರಿ ತನಕ ಮರಗಳಲ್ಲಿ ಮತ್ತಷ್ಟು ಚಿಗುರು ಕಾಣಿಸಿಕೊಳ್ಳಲಿದೆ ಎನ್ನುತ್ತಾರೆ ಬೇಸಾಯಗಾರರು.

ADVERTISEMENT

ಕಳೆದ ಬಾರಿ ಮರಗಳಲ್ಲಿ ಹೂ ಹೆಚ್ಚಾಗಿತ್ತು. ಹೆಚ್ಚು ದಿನಗಳ ಸಮಯ ಇಬ್ಬನಿ, ಮೋಡ ಕವಿದ ವಾತಾವರಣದಿಂದ ಬೂದಿರೋಗ ತಗುಲಿ ಫಸಲು ಕಡಿಮೆಯಾಯಿತು. ಈ ಬಾರಿ ಭರಪೂರ ಹೂವು ಅರಳಿದ್ದು, ಹೆಚ್ಚು ಫಲ ಕಚ್ಚುವ ಸಾಧ್ಯತೆ ಹೆಚ್ಚಿದೆ. ಏಪ್ರಿಲ್ ಸಮಯದಲ್ಲಿ ಗಾಳಿ ಮತ್ತು ಮಳೆಯ ಆಧಾರದ ಮೇಲೆ ಮಾವು ಕೈಸೇರುವ ಪ್ರಮಾಣ ಗೊತ್ತಾಗಲಿದೆ ಎನ್ನುತ್ತಾರೆ ಕೆಸ್ತೂರು ಮಾವು ಕೃಷಿಕ ಬಸವಣ್ಣ.

ಮಾವು ಕೃಷಿಕರು ಹೂ ರಕ್ಷಣೆಗೆ ಕ್ರಮ ವಹಿಸಬೇಕಿದೆ. ಪರಾಗಸ್ಪರ್ಶ ಸಮಯದಲ್ಲಿ ಔಷಧ ಸಿಂಪಡಣೆ ಮಾಡಬಾರದು. ಮುಂಜಾನೆ 10ರೊಳಗೆ ಸಿಂಪಡಣೆ ಮುಗಿಸಬೇಕು. ಜಿಗುಹುಳು ಬಿದ್ದರೆ ಶಿಲೀಂಧ್ರನಾಶಕ ಔಷಧ ಸಿಂಪಡಣೆ ಮಾಡಬೇಕು. ಹೂ ಬಿಟ್ಟ ಮರಗಳಿಗೆ ನೀರು ಹರಿಸಬಾರದು ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಸಲಹೆ ನೀಡುತ್ತಾರೆ.

ನೀರಿನಲ್ಲಿ ಕರಗುವ ಗಂಧಕ ಸಿಂಪಡಿಸಿ: ತಾಲ್ಲೂಕಿನಲ್ಲಿ ಬೆಳೆಯುವ ಮಾವು ಕೊಲ್ಲಿ ರಾಷ್ಟ್ರಗಳಿಗೆ ರಫ್ತಾಗುತ್ತದೆ. ಈ ಸಲ ಉತ್ತಮ ಮಳೆ-ಹವೆ ಮುಂದುವರಿದಿದೆ. ಶೇ 90ಕ್ಕೂ ಹೆಚ್ಚಿನ ಮಾವು ವೃಕ್ಷಗಳು ಹೂ ಕಚ್ಚಿವೆ. ಈ ವರೆಗೆ ರೋಗದ ಸುಳಿವಿಲ್ಲ. ಆದರೆ, ಜಿಗಿಹುಳು ಮತ್ತು ಬೂಸ್ಟ್ ಅಲ್ಲಲ್ಲಿ ಕಾಣಿಸಿಕೊಳ್ಳಬಹುದು. ಇದನ್ನು ನಿಯಂತ್ರಿಸಲು 2 ಗ್ರಾಂ ಗಂಧಕ (ನೀರಿನಲ್ಲಿ ಕರಗಿಸಿ) 1 ಲೀಟರ್‌ಗೆ ಸೇರಿಸಿ ಸಿಂಪಡಿಸುವುದರಿಂದ ಉತ್ತಮ ಇಳುವರಿ ಲಭಿಸಲಿದೆ ಎಂದು ತೋಟಗಾರಿಕ ಇಲಾಖೆ ಅಧಿಕಾರಿ ಜಿ.ಎಸ್.ರಾಜು ಸಲಹೆ ನೀಡಿದರು.

10 ಲಕ್ಷ ರೂ ಆದಾಯದ ನಿರೀಕ್ಷೆ

‘ಮಾವು ಸಾಗುವಳಿಯಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕೀಟ ನಾಶಕ ಬಳಸುವುದಿಲ್ಲ. ಜುಲೈ ಮತ್ತು ಆಗಸ್ಟ್‌ನಲ್ಲಿ ಹಟ್ಟಿ ಗೊಬ್ಬರ ಹಾಗೂ ಮಣ್ಣಿನಲ್ಲಿ ಸಾವಯವ ಅಂಶಗಳನ್ನು ಕೊಳೆಸಲು ಬಯೋ ಡೈಜೆಸ್ಟರ್‌ ಅನ್ನು ಬೆಲ್ಲದ ಜೊತೆ ಸೇರಿಸಿ ನೀಡಲಾಗುತ್ತದೆ. ಇದರಿಂದ 1 ಸಾವಿರಕ್ಕೂ ಹೆಚ್ಚು ಮರಗಳಲ್ಲಿ ಉತ್ತಮ ಹೂ ಅರಳಿದೆ. ಔಷಧ ಸಿಂಪಡಿಸದ ಕಾರಣಕ್ಕೆ ಪ್ರತಿವರ್ಷ ₹ 10 ಲಕ್ಷ ಮೌಲ್ಯದ ಮಾವು ಮೈಸೂರು ಮತ್ತು ಬೆಂಗಳೂರು ನಗರಗಳಲ್ಲಿ ಮಾರಾಟ ಆಗುತ್ತದೆ ಎಂದು ಸಾವಯವ ಕೃಷಿಕ ಲೋಕೇಶ್ ಹೇಳಿದರು.

ಯಳಂದೂರು ತಾಲ್ಲೂಕಿನ ಕೆಸ್ತೂರು ತೋಟದ ಮಾವಿನ ಮರಗಳಲ್ಲಿ ಸಮೃದ್ಧವಾಗಿ ಹೂ ಅರಳಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.