ಹನೂರು: ಕಳೆದ ಮೂರು ದಿನಗಳಿಂದ ವಿಜೃಂಭಣೆಯಿಂದ ನಡೆಯುತ್ತಿರುವ ಜಾತ್ರೆಗೆ ನಾಲ್ಕನೇ ದಿನ ಗುರುವಾರ ಬೆಳಿಗ್ಗೆ ಅಗ್ನಿ ಕುಂಡೋತ್ಸವ ಪ್ರದರ್ಶನ ಮಾಡುವುದರ ಮೂಲಕ ನಾಲ್ಕು ದಿನಗಳ ಜಾತ್ರೆಗೆ ತೆರೆ ಎಳೆಯಲಾಯಿತು.
ದೇವಾಲಯದ ಪ್ರಧಾನ ಅರ್ಚಕ ರಾಜೋಜಿ ರಾವ್ ಬೆಳಗಿನ ಜಾವ ಗುರುವಾರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಜ್ಜನ ಬಾವಿಗೆ ತೆರಳಿ ಪೂಜೆ ಸಲ್ಲಿಸಿ ದೇವಾಲಯಕ್ಕೆ ಬರುವ ವೇಳೆ ಹರಕೆ ಹೊತ್ತ ಭಕ್ತರು ದಾರಿಯಲ್ಲಿ ಮಲಗಿ ಇಷ್ಟಾರ್ಥ ಸಿದ್ಧಿಸುವಂತೆ ನಿವೇದನೆ ಮಾಡಿಕೊಂಡರು. ಮಲಗಿದ್ದ ಭಕ್ತರನ್ನು ದಾಟಿಕೊಂಡು ದೇವಾಲಯಕ್ಕೆ ಬಂದು ಧಾರ್ಮಿಕ ವಿಧಿವಿಧಾನ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಒಂದು ವಾರದಿಂದ ಮಣ್ಣಿನ ಮಡಿಕೆಯಲ್ಲಿ ಕಾದಿದ್ದ ಅಗ್ನಿ ಕುಂಡವನ್ನು ಪೂಜೆ ಸಲ್ಲಿಸಿ ಪ್ರಧಾನ ಅರ್ಚಕರು ಪ್ರಾತಕಾಲದಲ್ಲಿ ಬರಿಗೈಯಲ್ಲಿ ಎತ್ತುವ ಮೂಲಕ ನೆರೆದಿದ್ದ ಭಕ್ತರನ್ನು ಮೂಖ ಪ್ರೇಕ್ಷಕರನ್ನಾಗಿ ಮಾಡಿದರು. ನಂತರ ಅಗ್ನಿ ಕುಂಡವನ್ನು ತೊಡೆಯ ಮೇಲೆ ಇಟ್ಟುಕೊಂಡು ‘ಈ ಬಾರಿ ಮುಂಗಾರು ಮಳೆ ನಾಲ್ಕು ಕಡಿಮೆ, ಎಂಟಾಣೆ ಬೆಳೆಯಾಗುವುದು, ಮುಂಗಾರು ಮಳೆ ಎರಡು ಕಡಿಮೆ ಹನ್ನೆರಡಾಣೆ ಬೆಳೆಯಾಗುತ್ತದೆ. ದೇವಿಯ ನಂಬಿರುವ ಭಕ್ತರ ಹಾಗೂ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನತೆ ಯಾವುದೇ ರೋಗರುಜಿನಗಳು ಬರದಂತೆ ದೇವಿ ತಡೆಗಟ್ಟುವುದಾಗಿ’ ವಾಗ್ದಾನ ನೀಡಿದರು.
ಪೊಲೀಸ್ ಬಂದೋಬಸ್ತ್ : ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವದ ಅಗ್ನಿಕುಂಡೋತ್ಸವ ನೋಡಲು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಹಾಗೂ ನೆರೆಯ ತಾಲ್ಲೂಕು ಮತ್ತು ಜಿಲ್ಲೆಗಳಿಂದಲೂ ಭಕ್ತರು ಬಂದಿದ್ದರು. ಮುಂಜಾಗ್ರತಾ ಕ್ರಮವಾಗಿ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಇಲಾಖೆಯಿಂದ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.