ADVERTISEMENT

ಮೊಟ್ಟೆ, ಬೆಳ್ಳುಳ್ಳಿ ಬೆಲೆ ಹೆಚ್ಚಳ

ಮಲ್ಲಿಗೆ ತುಟ್ಟಿ, ಉಳಿದ ಹೂವುಗಳು ಅಗ್ಗ, ಬದಲಾಗದ ಮಾಂಸದ ದರ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 20:24 IST
Last Updated 16 ಸೆಪ್ಟೆಂಬರ್ 2019, 20:24 IST
   

ಚಾಮರಾಜನಗರ: ಮೂರು ವಾರಗಳಿಂದ ಬೆಳ್ಳುಳ್ಳಿ ಬೆಲೆ ಹೆಚ್ಚಳವಾಗುತ್ತಿದ್ದು, ಈ ವಾರ ಕೆಜಿ ಬೆಳ್ಳುಳ್ಳಿಯ ದರ ₹ 120ಕ್ಕೆ ತಲುಪಿದೆ. ಓಣಂ ಸಂದರ್ಭದಲ್ಲಿ ಕೊಂಚ ಏರಿಕೆ ಕಂಡಿದ್ದ ಹೂವುಗಳ ಬೆಲೆ ಈ ವಾರ ಇಳಿದಿದೆ. ಕಡಿಮೆ ಆವಕವಾಗುತ್ತಿರುವ ಮಲ್ಲಿಗೆಯ ಧಾರಣೆ ಮಾತ್ರ ಸ್ವಲ್ಪ ಹೆಚ್ಚಾಗಿದೆ.

ತರಕಾರಿಗಳ ಪೈಕಿ ಹೀರೆಕಾಯಿ, ಗೋರಿಕಾಯಿ ಬೆಲೆ ₹ 5, ಕ್ಯಾರೆಟ್‌ನ ಬೆಲೆಯಲ್ಲಿ ₹ 10ಏರಿಕೆ ಕಂಡುಬಂದಿದೆ. ಉಳಿದ ತರಕಾರಿಗಳ ಬೆಲೆ ಯಥಾಸ್ಥಿತಿ ಮುಂದುವರಿದಿದೆ.

‘ಓಣಂ ಹಬ್ಬದ ಸಂದರ್ಭದಲ್ಲಿ ಕೇರಳದವರು ಹೆಚ್ಚು ತರಕಾರಿ ಖರೀದಿಗೆ ಬರುತ್ತಿದ್ದರು. ಆದರೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿರಲಿಲ್ಲ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ‘ಪ್ರಜಾವಾಣಿ’ಗೆ ಹೇಳಿದರು.

ADVERTISEMENT

ಹೂವುಗಳ ಬೆಲೆ ಇಳಿಕೆ: ಮಲ್ಲಿಗೆ ಬಿಟ್ಟು ಉಳಿದ ಎಲ್ಲ ಹೂವುಗಳ ಬೆಲೆ ಈ ವಾರ ಕಡಿಮೆಯಾಗಿದೆ. ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕಳೆದ ವಾರ ಮಲ್ಲಿಗೆಯ ದರ ₹ 160 ಇತ್ತು. ಸೋಮವಾರ ಅದು ₹ 400ಕ್ಕೆ ಏರಿದೆ.

‘ಮಾರುಕಟ್ಟೆಗೆ ಮಲ್ಲಿಗೆ ಆವಕ ಕಡಿಮೆಯಾಗಿದೆ. ಇದರಿಂದ ಬೆಲೆ ಹೆಚ್ಚಳವಾಗಿದೆ. ಮಲ್ಲಿಗೆ ಹೂವಿನ ಬೀಡು ಮುಗಿಯುವ ಹಂತದಲ್ಲಿದೆ. ಹಾಗಾಗಿ ಬೆಲೆ ಏರಿಕೆಯಾಗುತ್ತಿದೆ’ ಎಂದು ಬಿಡಿ ಹೂವುಗಳ ವ್ಯಾಪಾರಿ ಮಹೇಶ್ ಹೇಳಿದರು.

ಕನಕಾಂಬರದ ಬೆಲೆ ₹ 400ರಷ್ಟು ಕಡಿಮೆಯಾಗಿದೆ.ಚೆಂಡು ಹೂ₹ 5, ಸುಗಂಧರಾಜ ಹಾರ, ಗುಲಾಬಿ ದರಗಳು ₹ 30ರಷ್ಟು ಕಡಿಮೆಯಾಗಿದೆ.

ಮೊಟ್ಟೆ ದರ ಏರಿಕೆ: ಎರಡು ವಾರಗಳಿಂದ ಈಚೆಗೆ ಮೊಟ್ಟೆಯ ಬೆಲೆಯೂ ಹೆಚ್ಚಳವಾಗುತ್ತಿದೆ. ಎರಡು ವಾರದ ಹಿಂದೆ 100 ಮೊಟ್ಟೆಯ ಬೆಲೆ₹ 362 ಇತ್ತು. ಕಳೆದ ವಾರ₹ 353ರಿಂದ₹ 370 (ಭಾನುವಾರದ ವರೆಗೆ) ಇತ್ತು. ಈ ವಾರ (ಸೋಮವಾರದ ಬೆಲೆ)₹ 381 ಆಗಿದೆ.

‘ಮೂರು ದಿನಗಳಿಗೊಮ್ಮೆ ಮೈಸೂರು ಮೊಟ್ಟೆ ಮಾರುಕಟ್ಟೆಯಲ್ಲಿ ಬೆಲೆ ನಿರ್ಧಾರವಾಗುತ್ತದೆ. ಅಲ್ಲಿನ ಬೆಲೆಯ ಆಧಾರದಲ್ಲಿ ನಾವು ಮಾರಾಟ ಮಾಡುತ್ತೇವೆ. ಯಾವ ಸಂದರ್ಭದಲ್ಲಿ ಬೆಲೆ ಏರಿಳಿತ ಕಂಡು ಬರುತ್ತದೆ ಎಂದು ನಿರ್ಧರಿಸುವುದು ಕಷ್ಟ’ ಎನ್ನುತ್ತಾರೆ ಮೊಟ್ಟೆ ವ್ಯಾಪಾರಿಗಳು.

ಮಾಂಸ ಮಾರುಕಟ್ಟೆಯಲ್ಲಿ ಮೀನು, ಚಿಕನ್‌, ಮಟನ್‌ ದರದಲ್ಲಿ ಬದಲಾವಣೆ ಕಂಡು ಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.