ADVERTISEMENT

ಚಾಮರಾಜನಗರ | ಬೀನ್ಸ್‌ ಧಾರಣೆ ಇಳಿಕೆ, ಹೂವಿಗಿಲ್ಲ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 18:29 IST
Last Updated 8 ಜನವರಿ 2024, 18:29 IST
ಚಾಮರಾಜನಗರದ ತಳ್ಳುಗಾಡಿಯೊಂದರಲ್ಲಿ ಟೊಮೆಟೊ ಖರೀದಿಯಲ್ಲಿ ತೊಡಗಿದ್ದ ವ್ಯಾಪಾರಿ
ಚಾಮರಾಜನಗರದ ತಳ್ಳುಗಾಡಿಯೊಂದರಲ್ಲಿ ಟೊಮೆಟೊ ಖರೀದಿಯಲ್ಲಿ ತೊಡಗಿದ್ದ ವ್ಯಾಪಾರಿ   

ಚಾಮರಾಜನಗರ: ನಗರದ ಮಾರುಕಟ್ಟೆಯಲ್ಲಿ ಈ ವಾರ ತರಕಾರಿ, ಹಣ್ಣುಗಳ ಧಾರಣೆಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ತರಕಾರಿಗಳ ಪೈಕಿ ಬೀನ್ಸ್‌ ಧಾರಣೆ ಇಳಿಕೆಯಾಗಿದೆ. ಹೂವುಗಳಿಗೆ ಬೇಡಿಕೆ ಇಲ್ಲದಿರುವುದರಿಂದ ಬೆಲೆಯೂ ಇಳಿದಿದೆ. 

ತರಕಾರಿ ಮಾರುಕಟ್ಟೆಯಲ್ಲಿ ಕಳೆದ ವಾರಾಂಭದಲ್ಲಿ ಬೀನ್ಸ್‌ ಧಾರಣೆ ಏರಿತ್ತು. ಹಾಪ್‌ಕಾಮ್ಸ್‌ನಲ್ಲಿ ₹50ರಿಂದ ₹60ರವರೆಗೆ ಇತ್ತು. ಈ ವಾರ ಬೆಲೆಯಲ್ಲಿ ಇಳಿಮುಖವಾಗಿದ್ದು, ಕೆಜಿಗೆ ₹40 ಇದೆ. 

ಹಲವು ವಾರಗಳಿಂದ ಟೊಟೊಟೊ ಬೆಲೆ ಸ್ಥಿರವಾಗಿದೆ. ಕೆಜಿಗೆ ₹30ರಂತೆ ಮಾರಾಟವಾಗುತ್ತಿದೆ. ತಳ್ಳುಗಾಡಿಗಳಲ್ಲಿ ಬೆಲೆ ಇನ್ನಷ್ಟು ಕಡಿಮೆ ಇದೆ. 

ADVERTISEMENT

ಉಳಿದ ತರಕಾರಿಗಳ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಬೆಳ್ಳುಳ್ಳಿ ಧಾರಣೆ ಇಳಿಮುಖವಾಗಿಲ್ಲ. ಈ ವಾರವೂ ಕೆಜಿಗೆ ₹240 ಇದೆ. ಮೂಲಂಗಿ, ಮೂಲಂಗಿ, ಈರುಳ್ಳಿ ₹30ಕ್ಕೆ ಸಿಗುತ್ತಿದೆ. ಗಾತ್ರದಲ್ಲಿ ದೊಡ್ಡದಾಗಿರುವ, ಗುಣಮಟ್ಟದ ಈರುಳ್ಳಿಗೆ ವ್ಯಾಪಾರಿಗಳು ₹5 ಹೆಚ್ಚು ಹೇಳುತ್ತಿದ್ದಾರೆ. 

‘ಕಳೆದ ವಾರದಲ್ಲಿ ಕೆಲವು ದಿನ ಬೀನ್ಸ್‌ ಮಾರುಕಟ್ಟೆಗೆ ಕಡಿಮೆ ಬಂದಿತ್ತು. ಪೂರೈಕೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿದ್ದರಿಂದ ಎಲ್ಲ ಕಡೆಗಳಲ್ಲೂ ಬೆಲೆ ಜಾಸ್ತಿಯಾಗಿತ್ತು. ಈಗ ಆವಕ ಹೆಚ್ಚಾಗುತ್ತಿದ್ದು, ಬೆಲೆ ಇಳಿಕೆಯಾಗಿದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಹೇಳಿದರು. 

ಸೊಪ್ಪು ತರಕಾರಿಗಳು ಸಾಕಷ್ಟು ಪ್ರಮಾಣದಲ್ಲಿ ಪೂರೈಕೆಯಾಗುತ್ತಿದ್ದು, ಕಟ್ಟಿಗೆ ₹10ರಿಂದ ₹20ರವರೆಗೆ ಇದೆ. ಅವರೆಕಾಯಿ, ತೊಗರಿಕಾಯಿಗಳಿಗೆ ಬೇಡಿಕೆ ಮುಂದುವರಿದಿದ್ದು, ಬೆಲೆ ಕ್ರಮವಾಗಿ ₹50 ಮತ್ತು ₹60 ಇದೆ.  

ಹಣ್ಣುಗಳ ಬೆಲೆ ಸ್ಥಿರವಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಸೇಬಿಗೆ ₹120ರಿಂದ ₹140 ಇದೆ. ದಾಳಿಂಬೆಗೂ ಇಷ್ಟೇ ಬೆಲೆ ಇದೆ. ಕಿತ್ತಳೆ ಸಾಕಷ್ಟು ಪ್ರಮಾಣದಲ್ಲಿ ಬರುತ್ತಿದ್ದರೂ, ಬೆಲೆ ₹60ರಿಂದ ₹70ರವರೆಗೆ ಇದೆ. ಮೂಸಂಬಿಗೆ ಕೆಜಿಗೆ ₹80 ಹೇಳುತ್ತಿದ್ದಾರೆ. ಏಲಕ್ಕಿ ಬಾಳೆಹಣ್ಣು, ಪಚ್ಚೆ ಬಾಳೆ ಹಣ್ಣು ಕ್ರಮವಾಗಿ ₹60 ಮತ್ತು ₹40ಕ್ಕೆ ಮಾರಾಟವಾಗುತ್ತಿದೆ. 

ಮಾಂಸದ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿಕನ್‌ಗೆ ₹180ರಿಂದ ₹200ರವರೆಗೆ ಬೆಲೆ ಇದೆ. ಮಟನ್‌ಗೆ ಕೆಜಿಗೆ ₹600 ಕೊಡಬೇಕಿದೆ. 

ಇಳಿದ ಹೂವಿನ ಧಾರಣೆ

ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಹೂವಿನ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿದೆ. ಕನಕಾಂಬರ ಬಿಟ್ಟರೆ ಉಳಿದ ಪುಷ್ಪಗಳಿಗೆ ಬೇಡಿಕೆ ಇಲ್ಲ ಎಂದು ಹೇಳುತ್ತಿದ್ದಾರೆ ಬಿಡಿ ಹೂವಿನ ವ್ಯಾಪಾರಿಗಳು.  ಈ ವಾರಾಂತ್ಯದಲ್ಲಿ ಸಂಕ್ರಾಂತಿ ಹಬ್ಬ ಇರುವುದರಿಂದ ಎರಡು ದಿನಗಳ ಕಾಲ ಬೇಡಿಕೆ ಇರಬಹುದು. ನಂತರ ಮತ್ತೆ ಬೆಲೆ ಇಳಿಯಬಹುದು ಎಂದು ಚೆನ್ನಿಪುರಮೋಳೆಯ ಬಿಡಿ ಹೂವಿನ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.  ಸೇವಂತಿಗೆಯ ಬೆಲೆ ಗಣನೀಯವಾಗಿ ಇಳಿದಿದೆ. ಹೋದ ವಾರ ಕೆಜಿಗೆ ₹120ರಿಂದ ₹160ರವರೆಗೆ ಇತ್ತು. ಈ ವಾರ ₹40ರಿಂದ–₹50 ಇದೆ. ಚೆಂಡು ಹೂವು ಸುಗಂಧರಾಜ ಹೂವುಗಳ ಧಾರಣೆಯೂ ತುಂಬಾ ಕಡಿಮೆಯಾಗಿದೆ.  ‘ಶುಭ ಸಮಾರಂಭಗಳು ಇಲ್ಲದಿರುವುದರಿಂದ ಹೂವಿಗೆ ಬೇಡಿಕೆ ಇಲ್ಲ. ಸಂಕ್ರಾಂತಿ ಸಮಯದಲ್ಲಿ ಎರಡು ಮೂರು ದಿನಗಳ ಕಾಲ ಬೆಲೆ ಹೆಚ್ಚಲಿದೆ’ ಎಂದು ವ್ಯಾಪಾರಿಗಳು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.