ADVERTISEMENT

ಮತ್ತೆ ಕಣ್ಣೀರು ತರಿಸಲಿದೆಯೇ ಈರುಳ್ಳಿ?

ಎರಡು ವಾರಗಳಿಂದ ಬೆಲೆ ಏರುಮುಖ, ಕೆಜಿಗೆ ₹35ರಿಂದ ₹40

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 15:45 IST
Last Updated 21 ಸೆಪ್ಟೆಂಬರ್ 2020, 15:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಎರಡು ವಾರಗಳಿಂದೀಚೆಗೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರುಮುಖವಾಗಿ ಸಾಗುತ್ತಿದ್ದು, ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. ‌

ಕಳೆದ ವರ್ಷದ ಅಕ್ಟೋಬರ್– ನವೆಂಬರ್‌ನಲ್ಲಿ ಈರುಳ್ಳಿ ಬೆಲೆ ಕೆಜಿಗೆ ₹100 ದಾಟಿ, ಗ್ರಾಹಕರನ್ನು ಕಂಗಾಲಾಗಿಸಿತ್ತು. ಈಗಿನ ಧಾರಣೆಯ ಲಕ್ಷಣ ನೋಡಿದರೆ, ಬೆಲೆ ಮತ್ತೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.

ಗಾತ್ರದಲ್ಲಿ ದೊಡ್ಡದಾಗಿರುವ ಉತ್ತಮ ಗುಣಮಟ್ಟದ ಈರುಳ್ಳಿಗೆ ಹೊರ ಮಾರುಕಟ್ಟೆಯಲ್ಲಿ ₹35ರಿಂದ ₹40ರವರೆಗೆ ಬೆಲೆ ಇದೆ. ಚಿಕ್ಕ ಗಾತ್ರದ, ಎರಡನೇ ದರ್ಜೆ ಈರುಳ್ಳಿಯನ್ನು ₹25ರಿಂದ ₹35ರ ಬೆಲೆಗೆ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ. ನಗರದ ಹಾಪ್‌ ಕಾಮ್ಸ್‌ ಮಳಿಗೆಯಲ್ಲಿ ಕೆಜಿಗೆ ₹30ರಿಂದ ₹35 ಇದೆ.

ADVERTISEMENT

‘ಈರುಳ್ಳಿ ಬೆಳೆಯುವ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಮಾರುಕಟ್ಟೆಗೆ ಗುಣಮಟ್ಟದ ಈರುಳ್ಳಿ ಬರುತ್ತಿಲ್ಲ. ಆವಕ ಪ್ರಮಾಣ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಬೆಲೆ ಹೆಚ್ಚಾಗಿದೆ. ಮೂರು ವಾರಗಳಿಂದ ಏರು ಮುಖವಾಗಿ ಸಾಗುತ್ತಿದೆ. ಹೀಗೆ ಮುಂದುವರಿದರೆ ಬೆಲೆ ಇನ್ನಷ್ಟು ಹೆಚ್ಚಾಗಬಹುದು’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಎರಡು ಮೂರು ವಾರಗಳಿಂದ ಕೆಜಿಗೆ ₹30–₹35ರಷ್ಟಿದ್ದ ಟೊಮೆಟೊ ಬೆಲೆ ₹10 ಕಡಿಮೆಯಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಸೋಮವಾರ ಕೆಜಿಗೆ ₹20 ಇತ್ತು. ಉಳಿದ ತರಕಾರಿಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ‌‌‌

ಹಣ್ಣುಗಳ ಪೈಕಿ ದಾಳಿಂಬೆ ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ₹80ರಿಂದ ₹100ರವರೆಗಿದ್ದ ಕೆಜಿ ದಾಳಿಂಬೆ ಬೆಲೆ ಈಗ ₹100ರಿಂದ ₹140ರ ವರೆಗೆ ಇದೆ. ಮಾರುಕಟ್ಟೆಗೆ ದಾಳಿಂಬೆ ಹೆಚ್ಚು ಬರುತ್ತಿಲ್ಲ ಎಂಬುದು ಬೆಲೆ ಏರಿಕೆಗೆ ಹಣ್ಣುಗಳ ವ್ಯಾಪಾರಿಗಳು ನೀಡುವ ಕಾರಣ. ‌ಉಳಿದ ಹಣ್ಣುಗಳ ಧಾರಣೆ ಸ್ಥಿರವಾಗಿದೆ.

ಹೂವುಗಳು ಅಗ್ಗ: ಮಹಾಲಯ ಅಮಾವಸ್ಯೆ ಸಮಯದಲ್ಲಿ ಕೊಂಚ ಚೇತರಿಸಿಕೊಂಡಿದ್ದ ಹೂವಿನ ದರ ನಂತರ ಭಾರಿ ಪ್ರಮಾಣದಲ್ಲಿ ಕುಸಿದಿದೆ. ನಗರದ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕನಕಾಂಬರ ಕೆಜಿಗೆ ₹400 ಇದೆ. ಕಳೆದ ವಾರ ಕೆಜಿಎಗೆ ₹240 ಇದ್ದ ಮಲ್ಲಿಗೆಯ ಬೆಲೆ ಕೇವಲ ₹40ಕ್ಕೆ ಕುಸಿದೆ. ಸುಂಗಧರಾಜ ಹೂವಿಗೆ ₹10–₹20 ಇದೆ. ಚೆಂಡು ಹೂವು ₹20ಕ್ಕೆ ಮಾರಾಟವಾಗುತ್ತಿದೆ.

‌ಈಗ ಅಮಾವಾಸ್ಯೆ ಸಂದರ್ಭದಲ್ಲಿ ಮಾತ್ರ ಹೂವುಗಳಿಗೆ ಬೇಡಿಕೆ ಕಂಡು ಬರುತ್ತದೆ. ದಸರಾ ಆರಂಭವಾಗುವವರೆಗೂ ಇದೇ ಸ್ಥಿತಿ ಇರಲಿದೆ. ನವರಾತ್ರಿ ಸಮಯದಲ್ಲಿ ಹೂವುಗಳಿಗೆ ಬೇಡಿಕೆ ಇರಲಿರುವುದರಿಂದ ಬೆಲೆ ಹೆಚ್ಚಾಗಲಿದೆ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಂಸದ ಮಾರುಕಟ್ಟೆಯಲ್ಲಿ ಚಿಕನ್‌, ಮಟನ್‌ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.