ADVERTISEMENT

ಚಾಮರಾಜನಗರ: ತರಕಾರಿಗಳು, ಹೂವಿನ ಬೆಲೆ ಕುಸಿತ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 4:15 IST
Last Updated 21 ಸೆಪ್ಟೆಂಬರ್ 2021, 4:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ನಗರದ ಮಾರುಕಟ್ಟೆಯಲ್ಲಿ ಈ ವಾರ ಹೆಚ್ಚಿನತರಕಾರಿಗಳ ಬೆಲೆ ಇಳಿಮುಖವಾಗಿದೆ. ಹೂವಿನ ಧಾರಣೆ ಮತ್ತಷ್ಟು ಕುಸಿದಿದೆ. ಕೆಲವು ಹಣ್ಣುಗಳ ಬೆಲೆಯಲ್ಲಿ ಏರಿಳಿತ‌ ಕಂಡು ಬಂದಿದೆ.

ತರಕಾರಿ ಮಾರುಕಟ್ಟೆಯಲ್ಲಿ ಎರಡು ಮೂರು ವಾರಗಳಿಂದ ಏರು‌ಮುಖವಾಗಿ ಸಾಗಿದ್ದ ಬೀನ್ಸ್ ಬೆಲೆ ಈ ವಾರ ಏಕಾಏಕಿ ಕುಸಿದಿದೆ. ಹಾಪ್ ಕಾಮ್ಸ್‌ನಲ್ಲಿ ಕಳೆದ ವಾರದ ಆರಂಭದಲ್ಲಿ ₹60 ಇದ್ದ ಬೀನ್ಸ್ ಬೆಲೆ, ಸೋಮವಾರ ₹30ಗೆ ಕುಸಿದಿತ್ತು.

ಉಳಿದಂತೆ ಟೊಮೆಟೊ ಬೆಲೆ ಕೆಜಿಗೆ ₹5, ಕ್ಯಾರೆಟ್‌ ಕೆಜಿಗೆ ₹10, ಈರುಳ್ಳಿ ₹5, ಬೆಳ್ಳುಳ್ಳಿ ₹20, ಹಸಿಮೆಣಸಿನ ಕಾಯಿ ₹10 ಕಡಿಮೆಯಾಗಿದೆ. ಕಳೆದ ವಾರ ಇವುಗಳ ಬೆಲೆ ಕ್ರಮವಾಗಿ ಕೆಜಿಗೆ ₹20, ₹40, ₹30, ₹80 ಹಾಗೂ ₹40 ಇತ್ತು.

ADVERTISEMENT

ಬೀನ್ಸ್‌, ಕ್ಯಾರೆಟ್‌, ಟೊಮೆಟೊ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಹಾಗಾಗಿ ಬೆಲೆಯಲ್ಲಿ ಇಳಿಮುಖವಾಗಿದೆ. ಉಳಿದ ತರಕಾರಿಗಳಿಗೂ ಬೇಡಿಕೆ ಕಡಿಮೆಯಾಗಿರುವುದರಿಂದ ಧಾರಣೆ ಕುಸಿದಿದೆ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಹಣ್ಣುಗಳ ಪೈಕಿ ದಾಳಿಂಬೆ ₹20 ತುಟ್ಟಿಯಾಗಿದೆ. ಕಿತ್ತಳೆ ₹10 ಅಗ್ಗವಾಗಿದೆ. ಕಳೆದವಾರ ಕೆಜಿಗೆ ₹100–₹120ರಷ್ಟಿದ್ದ ದಾಳಿಂಬೆ ಬೆಲೆ ಸೋಮವಾರ ₹140 ಇತ್ತು. ಕಿತ್ತಳೆ ಬೆಲೆ ಕಳೆದವಾರ ₹80 ಇತ್ತು. ಅದೀಗ ₹70ಕ್ಕೆ ಇಳಿದಿದೆ.

ಉಳಿದಂತೆ ಸೇಬು (₹100), ಮೂಸಂಬಿ (₹60), ದ್ರಾಕ್ಷಿ (₹120) ಏಲಕ್ಕಿ ಬಾಳೆ (₹40) ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ಮಾಂಸದ ಮಾರುಕಟ್ಟೆಯಲ್ಲಿ (ಚಿಲ್ಲರೆ) ಕೆಜಿ ಮಟನ್‌ ಬೆಲೆ ₹560 ಇದೆ. ಚಿಕನ್‌ ಬೆಲೆ ₹200–₹220ರವರೆಗೆ ಇದೆ.

ಹೂವಿನ ಬೆಲೆ ಮತ್ತಷ್ಟು ಕುಸಿತ: ಬಿಡಿಹೂವಿನ ಮಾರುಟ್ಟೆಯಲ್ಲಿ ಹೂವಿನ ಧಾರಣೆ ಈ ವಾರ ಮತ್ತಷ್ಟು ಕುಸಿದಿದೆ. ಬೇಡಿಕೆ ಹೆಚ್ಚಾಗಲು ನವರಾತ್ರಿವರೆಗೂ ಕಾಯಬೇಕು ಎಂದು ಹೇಳುತ್ತಾರೆ ವ್ಯಾಪಾರಿಗಳು.

ಕೆಜಿಗೆ ₹600 ಇದ್ದ ಕನಕಾಂಬರ ₹400ಕ್ಕೆ ಇಳಿದಿದೆ. ಸೇವಂತಿಗೆಗೂ ಬೇಡಿಕೆ ಕುಸಿದಿದ್ದು, ಕೆಜಿಗೆ ₹30ರಂತೆ ಸೋಮವಾರ ಮಾರಾಟವಾಗಿದೆ. ಚೆಂಡು ಹೂವನ್ನು ಕೇಳುವವರೆ ಇಲ್ಲದಂತಾಗಿದೆ. ಕೆಜಿಗೆ ₹10 ಬೆಲೆ ಇದೆ. ಮಲ್ಲಿಗೆ ಮಾರುಕಟ್ಟೆಗೆ ಬರುತ್ತಿಲ್ಲ. ಕಾಕಡದ ಬೆಲೆ ಕೆಜಿಗೆ ₹60 ಇದೆ.

‘ಈ ವಾರ ಹೂವುಗಳ ಬೆಲೆ ಮತ್ತಷ್ಟು ಇಳಿದಿದೆ. ಇನ್ನೆರಡು ವಾರ ಇದೇ ಪರಿಸ್ಥಿತಿ ಇರಬಹುದು. ದಸರಾ ಸಮಯದಲ್ಲಿ ಬೇಡಿಕೆ ಹೆಚ್ಚಾಗುತ್ತದೆ. ಆಗ ಬೆಲೆಯೂ ಏರಿಕೆಯಾಗಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.