ADVERTISEMENT

ದಿಗ್ಬಂಧನ: ತರಕಾರಿ, ಹಣ್ಣಿನ ಧಾರಣೆ ಗಗನಕ್ಕೆ

ಐದು ದಿನಗಳಿಂದ ಮಾರುಕಟ್ಟೆಗೆ ಬಂದಿಲ್ಲ ಹೂವು, ಮೊಟ್ಟೆಯ ಬೆಲೆಯೂ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 15:23 IST
Last Updated 30 ಮಾರ್ಚ್ 2020, 15:23 IST
ಚಾಮರಾಜನಗರದ ನ್ಯಾಯಾಲಯ ರಸ್ತೆಯಲ್ಲಿರುವ ಹಾಪ್‌ಕಾಮ್ಸ್‌ ಮಳಿಗೆಯಲ್ಲಿ ತರಕಾರಿ ಖರೀದಿಯಲ್ಲಿ ನಿರತರಾಗಿರುವ ಜನ
ಚಾಮರಾಜನಗರದ ನ್ಯಾಯಾಲಯ ರಸ್ತೆಯಲ್ಲಿರುವ ಹಾಪ್‌ಕಾಮ್ಸ್‌ ಮಳಿಗೆಯಲ್ಲಿ ತರಕಾರಿ ಖರೀದಿಯಲ್ಲಿ ನಿರತರಾಗಿರುವ ಜನ   

ಚಾಮರಾಜನಗರ: ಕೊರೊನಾ ವೈರಸ್‌ ಕಾರಣಕ್ಕೆ ಹೇರಲಾಗಿರುವ ದಿಗ್ಬಂಧನದ ಕಾರಣಕ್ಕೆ ಮಾರುಕಟ್ಟೆಯಲ್ಲಿ ಬಹುತೇಕ ತರಕಾರಿ ಹಾಗೂ ಹಣ್ಣಿನ ಬೆಲೆ ಏರಿಕೆಯಾಗಿದೆ.

ಆದರೆ, ಎಪಿಎಂಸಿ ಮಾರುಕಟ್ಟೆಗಳಲ್ಲಿ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೇ ಅವರು ಕಂಗಾಲಾಗುವಂತಾಗಿದೆ.ಹಾಪ್‌ಕಾಮ್ಸ್‌ನಲ್ಲಿ ಒಂದು ದರವಿದ್ದರೆ, ಹೊರ ಮಾರುಕಟ್ಟೆ ಹಾಗೂ ತಳ್ಳುಗಾಡಿಗಳಲ್ಲಿ ಅದಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರು ಅನಿವಾರ್ಯವಾಗಿ ವ್ಯಾಪಾರಿಗಳು ಹೇಳಿದ ಬೆಲೆಯನ್ನು ನೀಡಿ ಖರೀದಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊವನ್ನು ₹2ಗೆ ಕೇಳುವವರೇ ಇಲ್ಲ. ಆದರೆ ಹೊರಗಡೆ ಕೆಜಿಗೆ ₹20ರವರೆಗೆ ಬೆಲೆ ಇದೆ. ಇತರ ತರಕಾರಿಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

ADVERTISEMENT

ಹಾಪ್‌ಕಾಮ್ಸ್‌ನಲ್ಲಿಟೊಮೆಟೊ, ಗೋರಿಕಾಯಿ, ಹೀರೆಕಾಯಿ, ಈರುಳ್ಳಿಗಳ ಬೆಲೆ ಕೆಜಿಗೆ ₹5, ಆಲೂಗೆಡ್ಡೆ ₹10, ಬೆಳ್ಳುಳ್ಳಿ₹20, ಶುಂಠಿ₹40ಹೆಚ್ಚಳವಾಗಿದೆ.ಬೀನ್ಸ್‌ ಬೆಲೆ ₹10 ಕುಸಿದಿದೆ. ಕಳೆದವಾರ ₹30 ಇದ್ದ ಬದನೆಕಾಯಿ, ಈ ವಾರ ₹25 ಆಗಿದೆ.

ಹಣ್ಣುಗಳ ಪೈಕಿ ಸೇಬಿನ ಬೆಲೆ ₹20 ಹೆಚ್ಚಾಗಿದೆ. ಕೆಜಿ ಸೇಬಿಗೆ ₹160 ಹೇಳುತ್ತಿದ್ದಾರೆ. ಏಲಕ್ಕಿ ಬಾಳೆಯ ಬೆಲೆ ₹5ರಿಂದ ₹10ರಷ್ಟು ಹೆಚ್ಚಾಗಿದೆ. ಕಲ್ಲಂಗಡಿ₹5 ಕಡಿಮೆಯಾಗಿದೆ.

ಅಗತ್ಯವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಿರುವುದರಿಂದ ಜನರು ತರಕಾರಿ, ಹಣ್ಣುಗಳನ್ನು ಖರೀದಿಗೆ ಮುಗಿಬೀಳುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ವ್ಯಾಪಾರಿಗಳು ಹೆಚ್ಚಿನ ಬೆಲೆ ಹೇಳುತ್ತಿದ್ದಾರೆ ಎಂಬುದು ಸಾರ್ವಜನಿಕರ ದೂರು.

ಮಾಂಸ ಮಾರುಕಟ್ಟೆಯಲ್ಲಿ ಚಿಕನ್‌ ಹಾಗೂ ಮೀನುಗಳ ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದಿಲ್ಲ. ಕೆಲವು ವಾರಗಳಿಂದ ಇಳಿಮುಖವಾಗಿದ್ದ ಮೊಟ್ಟೆ ಧಾರಣೆ ಈ ವಾರ ಗಣನೀಯವಾಗಿ ಚೇತರಿಸಿಕೊಂಡಿದೆ.ಕಳೆದ ವಾರ 100 ಮೊಟ್ಟೆಯ ಬೆಲೆ ₹235 ಇತ್ತು.

‘ಕೊರೊನಾ ಭೀತಿಯಿಂದ ಅನೇಕ ಕಡೆ ಮೊಟ್ಟೆ ವ್ಯಾಪಾರ ಕಡಿಮೆಗೊಳಿಸಲಾಗಿದೆ. ಅಲ್ಲದೆ, ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿರುವುದರಿಂದ ಸಂಗ್ರಹವಿರುವ ಮೊಟ್ಟೆಗೆ ಬೇಡಿಕೆ ಬಂದಿದೆ. ಜೊತೆಗೆ ಬಿಡಿ ಮೊಟ್ಟೆ ವ್ಯಾಪಾರಿಗಳು ದಿನಸಿ ಅಂಗಡಿಗಳಿಗೆ ಮೊಟ್ಟೆಯನ್ನು ನೀಡುತ್ತಿದ್ದಾರೆ. ಇದರಿಂದಾಗಿ ಗ್ರಾಹಕರು ದಿನಸಿ ಅಂಗಡಿಗಳಲ್ಲೇ ಮೊಟ್ಟೆ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ದರದಲ್ಲಿ ಹೆಚ್ಚಳವಾಗಿದೆ’ ಎಂದು ಹೇಳುತ್ತಾರೆ ಮೊಟ್ಟೆ ವ್ಯಾಪಾರಿಗಳು.

ಹೂವಿನ ಮಾರಾಟಕ್ಕೆ ಪೆಟ್ಟು

ಜಿಲ್ಲೆಯಾದ್ಯಂದ ದಿಗ್ಬಂಧನ ಹೇರಿದ ನಂತೆ ಹೂವಿನ ವ್ಯಾಪಾರಿಗಳು ಮಾರಾಟವನ್ನೇ ನಿಲ್ಲಿಸಿದ್ದಾರೆ. ಮಾರುಕಟ್ಟೆಗೆ ಯಾವ ಹೂವುಗಳೂ ಬರುತ್ತಿಲ್ಲ.

‘ಎಲ್ಲೆಡೆ ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ನಿರ್ಬಂಧ ವಿಧಿಸಿರುವುದರಿಂದ ರೈತರು ಹೂವುಗಳನ್ನು ಮಾರುಕಟ್ಟೆಗೆ ತರುತ್ತಿಲ್ಲ. ಇದರ ಪರಿಣಾಮ ಹೂವುಗಳ ಮಾರಾಟವನ್ನು ನಿಲ್ಲಿಸಿದ್ದೇವೆ. ಹೊರಗಡೆ ಬೇಡಿಕೆಯೂ ಇಲ್ಲ’ ಎಂದು ಬಿಡಿ ಹೂವುಗಳ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.