ಚಾಮರಾಜನಗರ: ಏರುಗತಿಯಲ್ಲಿ ಸಾಗಿದ್ದ ಟೊಮೆಟೊ ದರ ಇಳಿಕೆಯ ಹಾದಿ ಹಿಡಿದಿದ್ದು ಮಾರುಕಟ್ಟೆಯಲ್ಲಿ ಕೆ.ಜಿಗೆ 30ಕ್ಕೆ ಮಾರಾಟವಾಗುತ್ತಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಪೂರೈಕೆಯಾಗುತ್ತಿರುವುದು, ಮಳೆ ಪ್ರಮಾಣ ಇಳಿಮುಖವಾಗಿರುವುದು ಹಾಗೂ ಆಷಾಢ ಮಾಡದ ಪರಿಣಾಮ ದರ ಇಳಿಮುಖವಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.
ಟೊಮೆಟೊ ಕಳೆದವಾರ ₹40 ರಿಂದ ₹50ಕ್ಕೆ ಏರಿಕೆಯಾಗಿ ಗ್ರಾಹಕರ ಜೇಬಿಗೆ ಹೊರೆಯಾಗಿತ್ತು. ದರ ಮತ್ತಷ್ಟು ಹೆಚ್ಚಾಗಬಹುದು ಎಂಬ ಆತಂಕದಲ್ಲಿದ್ದ ಗ್ರಾಹಕರು ಇದೀಗ ಸ್ವಲ್ಪ ನಿರಾಳರಾಗಿದ್ದಾರೆ. ಮಾರುಕಟ್ಟೆಗೆ ಹೆಚ್ಚಿನ ಟೊಮೆಟೊ ಬಂದರೆ ಬೆಲೆ ಇನ್ನೂ ಇಳಿಕೆಯಾಗುವ ಸಾಧ್ಯತೆಗಳು ಇವೆ ಎನ್ನುತ್ತಾರೆ ವ್ಯಾಪಾರಿಗಳು.
ಆಷಾಢ ಮಾಸದಲ್ಲಿ ಸಾಮಾನ್ಯವಾಗಿ ಶುಭ ಸಮಾರಂಭಗಳು, ಕಾರ್ಯಕ್ರಮಗಳು ನಡೆಯದ ಹಿನ್ನೆಲೆಯಲ್ಲಿ ತರಕಾರಿಗಳ ದರ ಕಡಿಮೆಯಾಗುತ್ತದೆ. ಕೆಲವೇ ದಿನಗಳಲ್ಲಿ ಶ್ರಾವಣ ಮಾಸ ಆರಂಭವಾಗುತ್ತಿದ್ದು ಮತ್ತೆ ತರಕಾರಿಗಳ ದರ ಹೆಚ್ಚಾಗಲಿದೆ ಎನ್ನುತ್ತಾರೆ ವ್ಯಾಪಾರಿಗಳು.
ಈರುಳ್ಳಿ ದರ ಬಹುತೇಕ ಸ್ಥಿರವಾಗಿದ್ದು ಕೆ.ಜಿಗೆ ₹40 ರಿಂದ ₹50ಕ್ಕೆ ಮಾರಾಟವಾಗುತ್ತಿದೆ. ಸಗಟು ಮಾರುಕಟ್ಟೆಯಲ್ಲಿ ಎರಡೂವರೆ ಕೆ.ಜಿ ಈರುಳ್ಳಿಗೆ ₹100ಇದ್ದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹50 ಇದೆ.
ಕ್ಯಾರೆಟ್ ಸ್ವಲ್ಪ ದುಬಾರಿಯಾಗಿದ್ದು ಗುಣಮಟ್ಟ ಹಾಗೂ ಗಾತ್ರಕ್ಕೆ ಅನುಗುಣವಾಗಿ ಕೆ.ಜಿಗೆ ₹60 ರಿಂದ ₹80 ದರ ಇದೆ. ಎರಡು ವಾರಗಳ ಹಿಂದೆ ಕ್ಯಾರೆಟ್ ಕೆಜಿಗೆ ₹40 ಇತ್ತು. ಬೀನ್ಸ್ ಹಾಗೂ ಹೀರೇಕಾಯಿ ಅಲ್ಪ ಇಳಿಕೆಯಾಗಿದ್ದು ಕೆ.ಜಿಗೆ ₹40ಕ್ಕೆ ಸಿಗುತ್ತಿದೆ. ಹಾಗಲಕಾಯಿ ಹಾಗೂ ಗೆಡ್ಡೆಕೋಸು ದರ ಇಳಿಕೆಯಾಗಿಲ್ಲ. ಎರಡೂ ತರಕಾರಿಗಳು ಕೆ.ಜಿಗೆ ₹80 ಇದೆ.
ನುಗ್ಗೆ ಸ್ವಲ್ಪ ಅಗ್ಗ:
ವಾರದ ಹಿಂದೆ ಕೆ.ಜಿಗೆ ₹200 ಮುಟ್ಟಿದ್ದ ನುಗ್ಗೆಕಾಯಿ ಈ ವಾರ ₹120ಕ್ಕೆ ಇಳಿದಿದೆ. ದರ ಹೆಚ್ಚಾದ ಕೂಡಲೇ ಮಾರುಕಟ್ಟೆಗೆ ಭಾರಿ ಪ್ರಮಾಣದ ನುಗ್ಗೆ ನಸುಳಿದ್ದರಿಂದ ದರ ಕುಸಿತವಾಗಿದೆ. ಮಾರುಕಟ್ಟೆಗೆ ಅವರೇಕಾಯಿ ಆವಕ ಆರಂಭವಾಗಿದ್ದು ಸದ್ಯ ಕೆ.ಜಿಗೆ ₹40 ಇದೆ. ಮುಂದಿನ ತಿಂಗಳು ಪೂರೈಕೆ ಹೆಚ್ಚಾಗಲಿದೆ ಎನ್ನುತ್ತಾರೆ ವ್ಯಾಪಾರಿಗಳು.
ಮಾವಿನ ಸೀಸನ್ ಬಹುತೇಕ ಮುಗಿದಿದ್ದು ಅಲ್ಲಲ್ಲಿ ತೋತಾಪುರಿ ಮಾತ್ರ ಸಿಗುತ್ತಿದೆ. ಸೇಬು ₹200, ದಾಳಿಂಬೆ ₹160 ರಿಂದ ₹200, ದ್ರಾಕ್ಷಿ ₹80ರಿಂದ ₹120, ಏಲಕ್ಕಿ ಬಾಳೆಹಣ್ಣು ₹70 ರಿಂದ ₹80, ಪಚ್ಚಬಾಳೆ ₹40 ಇದೆ.
ಹೂ ದರ ಏರಿಕೆಗೆ ದಿನಗಣನೆ:
ಕೆಲವೇ ದಿನಗಳಲ್ಲಿ ಆಷಾಢ ಮಾಸ ಮುಗಿದು ಶ್ರಾವಣ ಮಾಸ ಆರಂಭವಾಗುತ್ತಿದ್ದು ಸಾಲು ಸಾಲು ಹಬ್ಬಗಳು ಬರುವ ಹಿನ್ನೆಲೆಯಲ್ಲಿ ಹೂವಿನ ದರ ಹೆಚ್ಚಾಗಲಿದೆ. ಆಷಾಢದಲ್ಲಿ ಕಳೆಗುಂದಿದ್ದ ಹೂ ಮಾರುಕಟ್ಟೆ ಶ್ರಾವಣ ಮಾಸದಲ್ಲಿ ಕಳೆ ತುಂಬಿಕೊಳ್ಳಲಿದ್ದು ಉತ್ತಮ ವ್ಯಾಪಾರದ ನಿರೀಕ್ಷೆ ಇದೆ ಎನ್ನುತ್ತಾರೆ ಚೆನ್ನಾಪುರದ ಮೊಳೆ ರಸ್ತೆಯ ಹೂವಿನ ವ್ಯಾಪಾರಿಗಳು.
ತರಕಾರಿ ದರ
ಟೊಮೊಟೊ;₹30
ಬೀನ್ಸ್;₹40
ಕ್ಯಾರೆಟ್;₹60ರಿಂದ₹80
ಹೀರೇಕಾಯಿ;₹40
ಬದನೆಕಾಯಿ; ₹30–₹40
ಎಲೆಕೋಸು; ₹30–₹40
ಬೀಟ್‌ರೂಟ್; ₹30 ₹40
ಮೂಲಂಗಿ;₹30–₹40
ಹಾಗಲಕಾಯಿ;₹80
ಗೆಡ್ಎಕೋಸು;₹80
ಶುಂಠಿ;₹120
ಕ್ಯಾಪ್ಸಿಕಂ;₹80
ಹಸಿಮೆಣಸು;₹80
ಬೆಳ್ಳುಳ್ಳಿ;₹160–₹200
ಆಲೂಗಡ್ಡೆ;₹50
ಈರುಳ್ಳಿ;₹45–₹50
ನುಗ್ಗೆಕಾಯಿ;₹120
ಚವಳಿಕಾಯಿ;₹40
ಹೂಕೋಸು;₹40
ಅವರೆಕಾಯಿ;₹40
ಹಣ್ಣುಗಳ ದರ
ಸೇಬು;₹200
ದಾಳಿಂಬೆ;₹160;₹200
ಮೋಸಂಬಿ;₹80
ಕಿತ್ತಳೆ;₹100–₹140
ದ್ರಾಕ್ಷಿ;₹80–₹120
ಏಲಕ್ಕಿ ಬಾಳೆ;₹70–₹80
ಪಚ್ಚಬಾಳೆ;₹40
ಹೂವಿನ ದರ (ಕೆ.ಜಿಗಳಲ್ಲಿ)
ಸೇವಂತಿಗೆ;₹120
ಗುಲಾಬಿ;₹120
ಚೆಂಡು ಹೂ;₹20
ಸುಗಂಧರಾಜ;₹40
ಸಣ್ಣ ಮಲ್ಲಿಗೆ;₹120
ಮಲ್ಲಿಗೆ;₹240
ಕನಕಾಂಬರ;₹800
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.