ADVERTISEMENT

ವೈದ್ಯಕೀಯ ಕಾಲೇಜು: ಶೇ 80ರಷ್ಟು ಹಾಜರಾತಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 15:33 IST
Last Updated 3 ಡಿಸೆಂಬರ್ 2020, 15:33 IST
ಚಾಮರಾಜನಗರ ವೈದ್ಯಕೀಯ ಕಾಲೇಜಿನ ನೋಟ
ಚಾಮರಾಜನಗರ ವೈದ್ಯಕೀಯ ಕಾಲೇಜಿನ ನೋಟ   

ಚಾಮರಾಜನಗರ: ಎಂಟು ತಿಂಗಳ ಬಳಿಕ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಖ್ಯೆ ಮತ್ತೆ ತೆರೆದಿದ್ದು, ಮೊದಲ ಎರಡು ದಿನ ಶೇ 80ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

ಮಾರ್ಚ್‌ನಲ್ಲಿ ಕೋವಿಡ್‌ ಹಾವಳಿ ಆರಂಭಗೊಂಡ ನಂತರ ರಾಜ್ಯದಾದ್ಯಂತ ತಗರತಿಗಳನ್ನು ಸ್ಥಗಿತಗೊಳಿಸಲಾಗಿತ್ತು. ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಡಿ.1ರಿಂದ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿತ್ತು.

ಯಡಬೆಟ್ಟದಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ 600 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಮೊದಲ ಎರಡು ದಿನ ಶೇ 80ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ಸಂಸ್ಥೆಯ ಡೀನ್‌ ಹಾಗೂ ನಿರ್ದೇಶಕ ಡಾ.ಸಂಜೀವ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ಗುರುವಾರ ಕನಕದಾಸ ಜಯಂತಿ ಪ್ರಯುಕ್ತ ಕಾಲೇಜಿಗೆ ರಜೆ ಇತ್ತು.

ADVERTISEMENT

ಬಹುತೇಕ ವಿದ್ಯಾರ್ಥಿಗಳು ಬಂದಿದ್ದಾರೆ. ದೂರದ ಊರಿನ ವಿದ್ಯಾರ್ಥಿಗಳು ಇನ್ನಷ್ಟೇ ಬರಬೇಕಿದೆ. ಒಂದು ವಾರದ ಒಳಗಾಗಿ ಎಲ್ಲರೂ ಬರುವ ನಿರೀಕ್ಷೆ ಇದೆ ಎಂದು ಅವರು ಮಾಹಿತಿ ನೀಡಿದರು.

‘ಆಫ್‌ ಲೈನ್ ಹಾಗೂ ಆನ್‌ಲೈನ್‌ ಮಾಡುವುದಕ್ಕೆ ಅವಕಾಶ ಇದೆ. ಆದರೆ, ವೈದ್ಯಕೀಯ ವಿಷಯಗಳ ಪ್ರಯೋಗಾಲಯದ ತರಗತಿಗಳನ್ನು ಆನ್‌ಲೈನ್‌ನಲ್ಲಿ ಮಾಡುವುದು ಕಷ್ಟ. ವಿದ್ಯಾರ್ಥಿಗಳು ತರಗತಿಗಳಲ್ಲಿ ಇದ್ದಾರೆ ಬೋಧನೆ ಪ‍ರಿಣಾಮಕಾರಿಯಾಗಿರುತ್ತದೆ’ ಎಂದು ಡಾ.ಸಂಜೀವ್‌ ಅವರು ತಿಳಿಸಿದರು.

ಕಾಲೇಜಿಗೆ ಬರುವಾಗ ಕೋವಿಡ್‌ ಪರೀಕ್ಷೆಗೆ ಮಾಡಿಸಿ, ವರದಿ ತರುವುದು ಕಡ್ಡಾಯವಾಗಿತ್ತು. ಕೆಲವರು ಮಾಡಿಸಿದ್ದರೆ, ಇನ್ನು ಕೆಲಸವರಿಗೆ ಕಾಲೇಜಿನಲ್ಲೇ ಮಾಡಿಸಲಾಗಿದೆ.

ಪ್ರಥಮ ವರ್ಷಕ್ಕೆ ಪ್ರವೇಶ: ಈ ಮಧ್ಯೆ, 2020–21ನೇ ಸಾಲಿನ ಎಂಬಿಬಿಎಸ್‌ ಕೋರ್ಸ್‌ಗೆ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದ್ದು, ಕೌನ್ಸೆಲಿಂಗ್‌ ನಡೆಯುತ್ತಿದೆ.

ಚಾಮರಾಜನಗರ ವೈದ್ಯಕೀಯ ಕಾಲೇಜಿಗೆ 150 ಸೀಟುಗಳು ಲಭ್ಯವಿದ್ದು, ಈಗಾಗಲೇ 10 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಎಂದು ಡಾ.ಸಂಜೀವ್‌ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.