
ಗುಂಡ್ಲುಪೇಟೆ: ‘ಪಟ್ಟಣದ ಅಭಿವೃದ್ಧಿಗೆ ತಳ ಹಂತದಿಂದ ಯೋಜನೆ ರೂಪಿಸಬೇಕು’ ಎಂದು ಕರ್ನಾಟಕ ರಾಜ್ಯ ವಿಕೇಂದ್ರಿಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ ಹೇಳಿದರು.
ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ನೂರು ಜನಸಂಖ್ಯೆಗೆ ಇಬ್ಬರು ಸದಸ್ಯರನ್ನು ನೇಮಿಸಿ, ಆಯ ವಾರ್ಡಿನಲ್ಲಿ ಏನು ಕೆಲಸ ಆಗಬೇಕು ಎಂದು ಪರಿಶೀಲಿಸಿ, ಮಾಹಿತಿ ಸಂಗ್ರಹಿಸಬೇಕು. ಆ ಮಾಹಿತಿಯನ್ನು ಡಿ.6ರೊಳಗೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಗತ್ಯವಿರುವ ಸೌಲಭ್ಯ ಕುರಿತು ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಯೋಜನೆ ಮತ್ತು ಅಭಿವೃದ್ಧಿ ಯೋಜನೆ ಕಮಿಟಿಯಲ್ಲಿ ಮಂಡಿಸಲಾಗುವುದು. ಮಹಾತ್ಮ ಗಾಂಧೀಜಿ ತತ್ವದನ್ವಯ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದರು.
ಪಟ್ಟಣದ ವಾರ್ಡ್ ವ್ಯಾಪ್ತಿಯಲ್ಲಿ ಕಮಿಟಿ ರಚನೆ ಮಾಡಿ, ವಾರ್ಡ್, ಬಡಾವಣೆಗಳಲ್ಲಿ ಮೂಲ ಸೌಕರ್ಯ ಒದಗಿಸಲು ಮಾಹಿತಿ ಪಡೆಯಬೇಕು. ಇದರಿಂದ ಪಟ್ಟಣ ಅಭಿವೃದ್ಧಿ ಪಡಿಸಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ಶಾಸಕ ಎಚ್.ಎಂ.ಗಣೇಶಪ್ರಸಾದ್ ಮಾತನಾಡಿ, ಪಟ್ಟಣದ 23 ವಾರ್ಡ್‍ಗಳ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿ ಪಟ್ಟಣ ಅಭಿವೃದ್ಧಿ ಪಡಿಸಲು ಸಹಕಾರ ನೀಡಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ, ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ಎಲ್ಲಾ ಮೂಲ ಸೌಕರ್ಯ ಒದಗಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
‘ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ವಹಿಸಬೇಕು. ವಾಹನಗಳು ದುರಸ್ತಿಯಾದರೆ ತುರ್ತಾಗಿ ದುರಸ್ತಿ ಪಡಿಸಬೇಕು. ಎಲ್ಲಾ ವಾರ್ಡ್‌ಗಳಲ್ಲಿ ಹಸಿ-ಒಣ ಕಸ ಸಂಗ್ರಹಣೆ ಮಾಡಬೇಕು. ಎಲ್ಲಾ ವಾಣಿಜ್ಯ ಮಳಿಗೆಗಳ ಬಾಡಿಗೆ ಹಾಗೂ ತೆರಿಗೆ ವಸೂಲಾತಿ, ನೀರಿನ ತೆರಿಗೆ, ಆಸ್ತಿ ತೆರಿಗೆ ಉದ್ದಿಮೆ ಪರವಾನಿಗೆ ಶುಲ್ಕ, ಕಟ್ಟಡ ನಿರ್ಮಾಣ ಶುಲ್ಕ ಇತರೆ ಎಲ್ಲಾ ವರ್ಗಗಳಿಂದ ಬರುವ ಆದಾಯವನ್ನು ನಿಗದಿತ ಸಮಯದಲ್ಲಿ ವಸೂಲಾತಿ ಮಾಡಬೇಕು. ಆ ಅನುದಾನದಿಂದ ಪಟ್ಟಣ ಅಭಿವೃದ್ಧಿ ಪಡಿಸಲು ಶ್ರಮಿಸಬೇಕೆಂದು’ ಸೂಚನೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಶರವಣ ಮಾತನಾಡಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಟ್ಟಣ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ತೊಂದರೆ, ಬೀದಿ ದೀಪ ನಿರ್ವಹಣೆ ಒಳಚರಂಡಿ ವ್ಯವಸ್ಥೆಗೆ ತುರ್ತಾಗಿ ಸ್ಪಂದಿಸಲು ಸಹಾಯವಾಣಿ: 9480229054 ಹಾಗೂ ಸಾರ್ವಜನಿಕರು ತಮ್ಮ ದೂರುಗಳನ್ನು ವಾಟ್ಸ್ ಆ್ಯಪ್ ಸಂಖ್ಯೆಗೆ ದೂರು ಸಲ್ಲಿಸಿ ಪರಿಹರಿಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಸುಧಾ.ಎಂ.ವಿ, ತಹಶೀಲ್ದಾರ್ ತನ್ಮಯ್, ಪುರಸಭೆ ಮಾಜಿ ಅಧ್ಯಕ್ಷ ಶಶಿಧರ್ ಪಿ.ದೀಪು, ಮಧುಸೂಧನ್, ಮಾಜಿ ಉಪಾಧ್ಯಕ್ಷ ಶ್ರೀನಿವಾಸ ಕಣ್ಣಪ್ಪ, ಅಣ್ಣಯ್ಯಸ್ವಾಮಿ, ಮಹಮ್ಮದ್ ಇಲಿಯಾಸ್, ರಾಜಗೋಪಾಲ್, ಸುರೇಶ್ ಕಾರ್ಗಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.