ADVERTISEMENT

ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ| ಶಕ್ತಿ ಕುಂದುವ ಭಯಕ್ಕೆ ಪುರುಷರ ಹಿಂದೇಟು

2 ವರ್ಷಗಳಲ್ಲಿ ಇಬ್ಬರಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ, ಪತ್ನಿಯರಿಂದ ವಿರೋಧ

ಸೂರ್ಯನಾರಾಯಣ ವಿ
Published 17 ಫೆಬ್ರುವರಿ 2020, 19:45 IST
Last Updated 17 ಫೆಬ್ರುವರಿ 2020, 19:45 IST
ಎಂ.ಸಿ.ರವಿ
ಎಂ.ಸಿ.ರವಿ   

ಚಾಮರಾಜನಗರ: ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ (ನಾನ್‌ ಸ್ಕಾಲ್‌ಪಲ್‌ ವ್ಯಾಸೆಕ್ಟಮಿ–ಎನ್‌ಎಸ್‌ವಿ) ಎಂದರೆ ಜಿಲ್ಲೆಯ ಪುರುಷರು ಹೌಹಾರುತ್ತಾರೆ. ಎರಡು ವರ್ಷಗಳಲ್ಲಿ ಇಡೀ ಜಿಲ್ಲೆಯಲ್ಲಿ ಇಬ್ಬರು ಮಾತ್ರ (2018–19ರಲ್ಲಿ ಒಬ್ಬರು ಹಾಗೂ 2019–20ರಲ್ಲಿ ಒಬ್ಬರು) ಎನ್‌ಎಸ್‌ವಿ ಮಾಡಿಸಿಕೊಂಡಿದ್ದಾರೆ. 2017ರಲ್ಲಿ ಐವರು ಈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಲೈಂಗಿಕ ಶಕ್ತಿ ಎಲ್ಲಿ ಕುಂದಿ ಹೋಗುವುದೋ ಎಂಬ ಭಯದ ಜೊತೆಗೆ ಭವಿಷ್ಯದಲ್ಲಿ ನಿಶ್ಯಕ್ತಿ ಉಂಟಾಗಬಹುದು ಎಂಬ ಹೆದರಿಕೆಯೂ ಪುರುಷರನ್ನು ಕಾಡುತ್ತಿದೆ.

ಜಾಗೃತಿ ಕಾರ್ಯಕ್ರಮ, ಸತತ ಪ್ರಯತ್ನ ನಂತರವೂ ಎನ್‌ಎಸ್‌ವಿಗೆ ಹಿಂದೇಟು ಹಾಕುತ್ತಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ADVERTISEMENT

2019–20ರಲ್ಲಿ (ಜನವರಿವರೆಗೆ) ಜಿಲ್ಲೆಯಾದ್ಯಂತ 2,713 ಮಂದಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಇವರಲ್ಲಿ 2,712 ಮಂದಿ ಮಹಿಳೆಯರು. 2018–19ರಲ್ಲಿ 3,616 ಮಂದಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ಅವರಲ್ಲಿ 3,615 ಸ್ತ್ರೀಯರು ಇದ್ದಾರೆ.

ಪತ್ನಿಯರಿಂದಲೇ ವಿರೋಧ: ಮಹಿಳೆಯರ ಶಸ್ತ್ರ ಚಿಕಿತ್ಸೆಗೆ ಹೋಲಿಸಿದರೆ ಪುರುಷರಿಗೆ ಮಾಡಲಾಗುವ ಎನ್‌ಎಸ್‌ವಿ ಅತ್ಯಂತ ಸರಳ. ಐದರಿಂದ 10 ನಿಮಿಷಗಳಲ್ಲಿ ಶಸ್ತ್ರಕ್ರಿಯೆ ಮುಗಿದು ಹೋಗುತ್ತದೆ. ಅರವಳಿಕೆ,ಬ್ಲೇಡ್‌ ಬಳಕೆ, ಗಾಯ, ಹೊಲಿಗೆ ಯಾವುದೂ ಇಲ್ಲ. ಶಸ್ತ್ರಕ್ರಿಯೆ ಮಾಡಿಸಿಕೊಂಡ ನಂತರದ ಒಂದು ಗಂಟೆಯಲ್ಲಿ ಎಂದಿನಂತೆ ಕೆಲಸ ಮಾಡಬಹುದು. ಹಾಗಿದ್ದರೂ,ಪುರುಷರು ಒಪ್ಪುತ್ತಿಲ್ಲ.

ವ್ಯಾಸೆಕ್ಟಮಿ ಮಾಡಿಸಿಕೊಳ್ಳುವುದನ್ನು ಅವರ ಪತ್ನಿಯರು ವಿರೋಧಿಸುತ್ತಿರುವುದು ಆರೋಗ್ಯ ಅಧಿಕಾರಿಗಳನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಮಹಿಳೆಯರೇ ವೈದ್ಯರ ಮುಂದೆ ಪತಿಯರ ಬದಲಿಗೆ ತಮಗೇ ಶಸ್ತ್ರಕ್ರಿಯೆ ಮಾಡುವಂತೆ ಮನವಿ ಮಾಡಿಕೊಂಡ ಹಲವು ನಿದರ್ಶನಗಳೂ ಜಿಲ್ಲೆಯಲ್ಲಿ ನಡೆದಿವೆ.

‘ಎನ್‌ಎಸ್‌ವಿ ಮಾಡಿಸಿಕೊಂಡರೆ ಪುರುಷರಲ್ಲಿ ಯಾವುದೇ ಸಮಸ್ಯೆ ಕಾಡುವುದಿಲ್ಲ. ಲೈಂಗಿಕ ಶಕ್ತಿಗೂ ತೊಂದರೆಯಾಗುವುದಿಲ್ಲ.ಈ ಬಗ್ಗೆ ಅರಿವು ಮೂಡಿಸಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದೇವೆ. ಮನೆ ಮನೆಗೆ ಹೋಗಿ ಮನವೊಲಿಸುವ ಕೆಲಸ ಮಾಡುತ್ತಿದ್ದೇವೆ. ಹಾಗಿದ್ದರೂ ಪುರುಷರಲ್ಲಿರುವ ಭಯ ಹೋಗುತ್ತಿಲ್ಲ’ ಎಂದು ಜಿಲ್ಲಾ ‌ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲವು ಬಾರಿ ಮಹಿಳೆಯರಿಗೆ ಸಂತಾನಹರಣಶಕ್ತಿ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇರುತ್ತದೆ. ಅಂತಹ ಸಂದರ್ಭದಲ್ಲಿ ಅವರ ಪತಿ ಇದನ್ನು ಮಾಡಿಸಿಕೊಳ್ಳುವುದು ಹೆಚ್ಚು ಸೂಕ್ತ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.