ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟವು (ಚಾಮುಲ್) ಉತ್ಪಾದಕರಿಂದ ಹಾಲು ಖರೀದಿಸುವ ದರವನ್ನು ಲೀಟರ್‌ಗೆ ₹2 ಹೆಚ್ಚಿಸಿದೆ. ಪರಿಷ್ಕೃತ ದರ ಗುರುವಾರದಿಂದಲೇ (ಡಿ.1) ಜಾರಿಗೆ ಬಂದಿದೆ.
ಇತ್ತೀಚೆಗಷ್ಟೆ ಕೆಎಂಎಫ್ ಹಾಲು ಮತ್ತು ಮೊಸರಿನ ಮಾರಾಟ ದರವನ್ನುಲೀಟರ್‌ಗೆ ₹2ರಷ್ಟು ಹೆಚ್ಚಿಸಿತ್ತು. ಆ ಹಣವನ್ನು ಹಾಲು ಉತ್ಪಾದಕರಿಗೆ ನೀಡುವುದಾಗಿ ಹೇಳಿತ್ತು. ಅದರಂತೆ ವಿವಿಧ ಜಿಲ್ಲೆಗಳ ಹಾಲೂ ಒಕ್ಕೂಟಗಳು ಖರೀದಿ ದರವನ್ನು ಪರಿಷ್ಕರಣೆ ಮಾಡುತ್ತಿದ್ದು, ಚಾಮುಲ್ ಕೂಡ ಅವುಗಳನ್ನೇ ಅನುಸರಿಸಿದೆ.
ಇದುವರೆಗೂ ಹಾಲು ಉತ್ಪಾದಕರು ಒಂದು ಲೀಟರ್ ಗುಣಮಟ್ಟದ ಹಾಲಿಗೆ (ಶೇ 4.0 ಜಿಡ್ಡು ಮತ್ತು ಶೇ 8.5 ಜಿಡ್ಡೇತರ ಘನಾಂಶ) ₹28.85 ಪಡೆಯುತ್ತಿದ್ದರು. ಗುರುವಾರದಿಂದ ಇದು ₹30.85ಕ್ಕೆ ಏರಲಿದೆ. ಚಾಮುಲ್ ಹಾಲು ಉತ್ಪಾದಕರ ಸಂಘಗಳಿಂದ ಒಂದು ಲೀಟರ್ ಹಾಲನ್ನು ₹30.45 ನೀಡಿ ಖರೀದಿಸುತ್ತಿತ್ತು. ಇನ್ನು ₹32.45 ನೀಡಲಿದೆ.
‘ಇತ್ತೀಚಿನ ದಿನಗಳಲ್ಲಿ ಉತ್ಪಾದನಾ ವೆಚ್ಚ ಅಧಿಕವಾಗಿರುವುದಲ್ಲದೇ ರಾಸುಗಳಲ್ಲಿ ಚರ್ಮಗಂಟು ರೋಗ ಹರಡುತ್ತಿರುವುದರಿಂದ ಹಾಲಿನ ಇಳುವರಿ ಕುಂಠಿತವಾಗಿರುತ್ತದೆ. ಪರಿಣಾಮ ಒಕ್ಕೂಟದ ಹಾಲಿನ ಶೇಖರಣೆ ಗಣನೀಯವಾಗಿ ಕಡಿಮೆಯಾಗಿರುವುದನ್ನು ಮನಗಂಡು ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದಹಾಲು ಉತ್ಪಾದದಕರಿಗೆ ಪ್ರತಿ ಲೀಟರ್‌ಗೆ ₹2 ಹೆಚ್ಚಿಸಲಾಗಿದೆ’ ಎಂದು ಚಾಮುಲ್ ಅಧ್ಯಕ್ಷ ವೈ.ಸಿ.ನಾಗೇಂದ್ರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಜಿಲ್ಲೆಯಲ್ಲಿ465 ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಪ್ರತಿದಿನ ಸರಾಸರಿ 2.10 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಪ್ರತಿ ದಿನ ಚಾಮರಾಜನಗರ ವ್ಯಾಪ್ತಿಯಲ್ಲಿ 40 ಸಾವಿರ ಲೀಟರ್ ಹಾಲು, 9,000 ಲೀಟರ್ ಮೊಸರು ಹಾಗೂ ದೇಶದ ವಿವಿಧ ಭಾಗಗಳಿಗೆ 50 ಸಾವಿರ ಲೀಟರ್ ಯು.ಎಚ್.ಟಿ ಹಾಲನ್ನು ಮಾರಾಟ ಮಾಡಲಾಗುತ್ತಿದೆ. ತಮಿಳುನಾಡಿನ ಕೊಯಮತ್ತೂರು ಮತ್ತು ನೀಲಗಿರಿ ಜಿಲ್ಲೆಗಳಲ್ಲಿ ಪ್ರತಿ ದಿನ 10 ಸಾವಿರ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.