ಕೊಳ್ಳೇಗಾಲ: ಇಲ್ಲಿನ ಡಾ.ಬಿ.ಆರ್ ಅಂಬೇಡ್ಕರ್ ಭವನವನ್ನು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ ಮಹದೇವಪ್ಪ ಹಾಗೂ ಶಾಸಕ ಎ.ಆರ್.ಕೃಷ್ಣಮೂರ್ತಿ ಶನಿವಾರ ವೀಕ್ಷಣೆ ಮಾಡಿದರು.
ಸುಮಾರು 21 ವರ್ಷಗಳಿಂದ ಅಂಬೇಡ್ಕರ್ ಭವನ ಕಾಮಗಾರಿ ನನೆಗುದ್ದಿಗೆ ಬಿದ್ದಿದ್ದು, ಕಾಮಗಾರಿ ಮುಕ್ತಾಯ ಮಾಡಿ ಭೀಮ ನಗರದ ಜನರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ವೀಕ್ಷಣೆ ಮಾಡಿ ಅಧಿಕಾರಿಗಳು, ಅಂಬೇಡ್ಕರ್ ಸ್ಮಾರಕ ಸಂಘದವರ ಜೊತೆ ಚರ್ಚೆ ನಡೆಸಿದರು.
ನಂತರ ಮಾತನಾಡಿದ ಸಚಿವ ಎಚ್.ಸಿ ಮಹದೇವಪ್ಪ, ‘ಈಗಾಗಲೇ ಅಂಬೇಡ್ಕರ್ ಭವನ ಕಾಮಗಾರಿಗೆ ₹3 ಕೋಟಿ ಅನುದಾನ ನೀಡಿದ್ದು, ₹90 ಲಕ್ಷ ಅನುದಾನ ಬಿಡುಗಡೆಯಾಗಿ ಕಾಮಗಾರಿ ನಡೆಯುತ್ತಿದೆ. ಉಳಿದ ₹2.10 ಲಕ್ಷ ಕೋಟಿ ಅನುದಾನ ಶೀಘ್ರವೇ ಬಿಡುಗಡೆ ಮಾಡಲಾಗುವುದು. ಇನ್ನೂ ಹೆಚ್ಚು ಅನುದಾನ ಬೇಕಾದರೆ ಮತ್ತೆ ₹1 ಕೋಟಿ ನೀಡುತ್ತೇನೆ. ಆದರೆ 21 ವರ್ಷಗಳಿಂದಲೂ ಸಹ ಈ ಕಾಮಗಾರಿ ಕುಂಠಿತದಿಂದ ಇರುವುದು ದುರಂತದ ವಿಷಯ’ ಎಂದರು,.
ನಮ್ಮ ಸಮುದಾಯದವರು ಇಷ್ಟು ಹಿಂದೆ ಉಳಿದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಈಗಾಗಲೇ ನೀವು ಹೊಸ ಸಂಘ ರೂಪಿಸಿ ಅಧ್ಯಕ್ಷರು ಉಪಾಧ್ಯಕ್ಷರ ಆಯ್ಕೆ ಮಾಡಿದ್ದೀರಿ. ಧೈರ್ಯವಾಗಿ ಕೆಲಸ ಕಾರ್ಯ ಮುಂದುವರಿಸಿ ನಿಮ್ಮ ಜೊತೆ ನಾನಿರುತ್ತೇನೆ. ಭವನ ಕಾಮಗಾರಿ ಮುಕ್ತಾಯವಾಗಿ ಉದ್ಘಾಟನೆ ಮಾಡಲು ಶಾಸಕರ ಸಹಕಾರ ಸಂಪೂರ್ಣ ಇದೆ ಎಂದರು.
ಸ್ಥಳದಲ್ಲಿದ್ದ ಲ್ಯಾಂಡ್ ಆರ್ಮಿ ಎಂಜಿನಿಯರ್ ಚಿಕ್ಕಲಿಂಗಯ್ಯ ಅವರನ್ನು ಕರೆದು, ಕಾಮಗಾರಿ ಏಕೆ ತಡವಾಗಿ ಮಾಡುತ್ತಿದ್ದೀರಾ. ಅನುದಾನ ಬಿಡುಗಡೆಯಾಗಿದೆ. ಶೀಘ್ರವೇ ಮುಕ್ತಾಯ ಮಾಡಬೇಕು ಎಂದು ಸೂಚಿಸಿದರು.
ಇದಕ್ಕೆ ಉತ್ತರಿಸಿದ ಎಇಇ ಎಂಜಿನಿಯರ್ ಚಿಕ್ಕಲಿಂಗಯ್ಯ, ‘ಈಗಾಗಲೇ ಕಾಮಗಾರಿ ಲೋಪವಾಗಿದೆ ಎಂದು ವ್ಯಕ್ತಿಯೊಬ್ಬರು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಹಾಗಾಗಿ ಕಾಮಗಾರಿ ಮಾಡಲು ತೊಂದರೆಯಾಗುತ್ತದೆ’ ಎಂದು ಉತ್ತರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ನೀವು ಮಾಡುವುದಾದರೆ ಮಾಡಿ. ಇಲ್ಲದಿದ್ದರೆ ಉಳಿದ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿ ಅಲ್ಲಿ ನಾನು ಮಾಡಿಸುತ್ತೇನೆ’ ಎಂದರು.
ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್, ಸದಸ್ಯ ಮಂಜುನಾಥ್, ಆನಂದ್, ಸ್ವಾಮಿ ನಂಜಪ್ಪ, ರಾಘವೇಂದ್ರ, ಶಾಂತರಾಜು, ಮುಖಂಡ ರಮೇಶ್, ಚಿಕ್ಕ ಮಾಳಿಗೆ, ನಟರಾಜು, ಗುರುಮೂರ್ತಿ, ನಾಗರಾಜು, ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಆನಂದ್ ಮೂರ್ತಿ, ಉಪಾಧ್ಯಕ್ಷ ಕಿರಣ್, ಕಾರ್ಯದರ್ಶಿ ಪಾಪಣ್ಣ ಸಹ ಕಾರ್ಯದರ್ಶಿ ಶಶಿಕುಮಾರ್, ಖಜಾಂಚಿ ರಾಜೇಶ್, ಡಿವೈಎಸ್ಪಿ ಧರ್ಮೇಂದ್ರ, ಪಿಎಸ್ಐ ವರ್ಷ, ಸುಪ್ರೀತ್ ಇದ್ದರು.
‘ಭವನ ನಿರ್ಮಾಣಕ್ಕೆ ಸಹಕಾರ’
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ ‘ಭವನ ನಿರ್ಮಾಣಕ್ಕೆ ನಮ್ಮ ಸಹಕಾರ ಸಂಪೂರ್ಣ ಇದೆ. ಯಾರೇ ಅಡ್ಡಿ ಬಂದರು ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಕೆಲಸವನ್ನು ನೀವು ಮಾಡಿ. ಸಮುದಾಯದ ಏಳಿಗೆಗೆ ಪ್ರತಿಯೊಬ್ಬರು ಶ್ರಮಿಸಬೇಕು ಹಾಗೂ ಬೆಂಬಲವಾಗಿ ನಿಂತುಕೊಳ್ಳಬೇಕುಠ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.