
ಚಾಮರಾಜನಗರ: ‘ಹಾಡಿಗಳಿಗೆ ವಿದ್ಯುತ್ ಸಂಪರ್ಕ, ರಸ್ತೆ, ಕುಡಿಯುವ ನೀರಿನ ಸಂಪರ್ಕ ಸೇರಿದಂತೆ ಮೂಲಸೌಲಭ್ಯಗಳನ್ನು ಒದಗಿಸಲು ಸರ್ಕಾರ ಮುಂದಾಗಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ನಿಯಮಗಳ ನೆಪವೊಡ್ಡಿ ಕಾಮಗಾರಿಗಳಿಗೆ ಅಡ್ಡಿಪಡಿಸುವುದು ಸರಿಯಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹರಿಹಾಯ್ದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ, ಅರಣ್ಯ, ಕುಡಿಯುವ ನೀರು ಹಾಗೂ ಇತರ ವಿಷಯಗಳಿಗೆ ಸಂಬಂಧಪಟ್ಟಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ‘ಮೈಸೂರು ಜಿಲ್ಲೆಯಲ್ಲಿರುವ ಹಾಡಿಗಳ ಅಭಿವೃದ್ಧಿಗೆ ಅಲ್ಲಿನ ಅಧಿಕಾರಿಗಳು ಅಡ್ಡಿಪಡಿಸುತ್ತಿಲ್ಲ; ಆದರೆ, ಚಾಮರಾಜನಗರ ಜಿಲ್ಲೆಯಲ್ಲಿ ಮಾತ್ರ ಸಮಸ್ಯೆ ಉದ್ಭವಿಸಿದೆ. ನಿಯಮಗಳು ಅಡ್ಡಿಯಾದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಬೇಕು, ಹಾಡಿಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು’ ಎಂದು ಸೂಚಿಸಿದರು.
ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್ ಭಾಸ್ಕರ್ ಮಾತನಾಡಿ, ‘ಅರಣ್ಯ ಹಕ್ಕು ಕಾಯ್ದೆಯಡಿ ಹಾಡಿಗಳಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್ ಸಹಿತ ಮೂಲಸೌಲಭ್ಯ ಕಲ್ಪಿಸಲು ಅವಕಾಶವಿದೆ. ಮೀಸಲು ಅರಣ್ಯದೊಳಗೂ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮತಿ ನೀಡಲು ಡಿಸಿಎಫ್‌ಗೆ ಅಧಿಕಾರವಿದೆ. ಆದರೆ, ವನ್ಯಜೀವಿ ವಲಯದಲ್ಲಿ ಕಾಮಗಾರಿಗಳಿಗೆ ವನ್ಯಜೀವಿ ಮಂಡಳಿಯ ಅನುಮತಿ ಅಗತ್ಯವಾಗಿ ಬೇಕಾಗುತ್ತದೆ ಎಂದರು.
ಬೇಡಗುಳಿ ಹಾಗೂ ಕೆ.ಗುಡಿ ಹಾಡಿಗಳಿಗೆ ಮೂಲಸೌಲಭ್ಯ ಕಲ್ಪಿಸಲು ಅಡ್ಡಿಯಾಗಿರುವ ತಾಂತ್ರಿಕ ತೊಡಕುಗಳನ್ನು ನಿವಾರಿಸಲಾಗುತ್ತಿದೆ. ಹಾಡಿಗಳಲ್ಲಿ ಈಗಾಗಲೇ ರಸ್ತೆಗಳು ಹಾದುಹೋಗಿದ್ದರೆ 1984ಕ್ಕೂ ಮುನ್ನವೇ ರಸ್ತೆಗಳು ನಿರ್ಮಾಣವಾಗಿವೆ ಎಂಬ ದಾಖಲೆಗಳನ್ನು ಸಂಗ್ರಹಿಸಿ ಹೊಸದಾಗಿ ಪ್ರಸ್ತಾವ ಸಲ್ಲಿಸಿ ರಾಜ್ಯ ವನ್ಯಜೀವಿ ಮಂಡಳಿಯಿಂದ ಒಪ್ಪಿಗೆ ಪಡೆದು ಅಭಿವೃದ್ಧಿ ಕಾಮಗಾರಿ ಮಾಡಲು ನಿರ್ಧರಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸಚಿವರಿಗೆ ತಿಳಿಸಿದರು.
ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಿ: ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ತಡೆಯಲು ಅಗತ್ಯ ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳಬೇಕು. ಕಾಡುಪ್ರಾಣಿಗಳು ಅರಣ್ಯದಿಂದ ಹೊರಬಂದು ಜನವಸತಿ, ಜಮೀನು ಪ್ರದೇಶಗಳಿಗೆ ನುಗ್ಗುತ್ತಿದ್ದು ಜನರು ಭಯಬೀತರಾಗಿದ್ದಾರೆ. ಜನ ಹಾಗೂ ಜಾನುವಾರು ರಕ್ಷಣೆ ಆಗಬೇಕು. ಇದಕ್ಕೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಪ್ರಾಣಿಗಳ ಚಲನ ವಲನ ಮೇಲೆ ನಿಗಾ ಇಡಲು ಪ್ರತಿ ವನ್ಯಜೀವಿ ವಿಭಾಗಕ್ಕೆ ಥರ್ಮಲ್ ಡ್ರೋನ್‌ಗಳ ಅವಶ್ಯಕತೆಯಿದ್ದು, ಜಿಲ್ಲೆಗೆ ಪ್ರತ್ಯೇಕ ಚಿರತೆ ಟಾಸ್ಕ್ ಪೋರ್ಸ್ ಸಮಿತಿ ರಚಿಸಬೇಕು. ಇದರಿಂದ ಮಾನವ ಪ್ರಾಣಿ ಸಂಘರ್ಷವನ್ನು ಪರಿಣಾಮಕಾರಿಯಾಗಿ ತಡೆಯಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.
ಪ್ರತಿಕ್ರಿಯಿಸಿದ ಸಚಿವರು ‘ಥರ್ಮಲ್ ಡ್ರೋನ್ ಖರೀದಿಸುವಂತೆ, ಚಿರತೆ ಟಾಸ್ಕ್ ಪೋರ್ಸ್ ರಚನೆಗೆ ಕೂಡಲೇ ಪ್ರಸ್ತಾವ ಸಲ್ಲಿಸುವಂತೆ ನಿರ್ದೇಶನ ನೀಡಿದರು. ಕಾಡಂಚಿನ ಗ್ರಾಮಗಳ ಜನರಿಗೆ ಪರಿಹಾರ ಹಾಗೂ ಸೌಲಭ್ಯ ಒದಗಿಸಲು ವಿಳಂಬ ಮಾಡಬಾರದು. ಅರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮಗಳಿಗೆ ಅಧಿಕಾರಿಗಳು ಭೇಟಿನೀಡಿ ಸಮಸ್ಯೆ ಆಲಿಸಿ, ಧೈರ್ಯ ತುಂಬಿ ಜಾಗೃತಿ ಮೂಡಿಸಬೇಕು. ಪ್ರಾಣಿಗಳು ಜನವಸತಿ ಪ್ರದೇಶ ಹಾಗೂ ಕೃಷಿಭೂಮಿಗೆ ಬಾರದಂತೆ ನೋಡಿಕೊಳ್ಳಲು ಕಣ್ಗಾವಲು ಇಡಬೇಕು ಎಂದು ಸಚಿವರು ತಿಳಿಸಿದರು.
ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ ಅರಣ್ಯದ ಸಮೀಪದ ಗ್ರಾಮೀಣ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ದಾಳಿಯಾದ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಬೇಕು. ವಿದ್ಯುತ್, ಕುಡಿಯುವ ನೀರಿನ ಕಾಮಗಾರಿಗಳು ವಿಳಂಬವಾಗದಂತೆ ನೋಡಿಕೊಳ್ಳಬೇಕು ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್, ಎಸ್‌ಪಿ ಬಿ.ಟಿ.ಕವಿತಾ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಕಾವೇರಿ ವನ್ಯಜೀವಿ ವಿಭಾಗದ ಉಪ ಸಂರಕ್ಷಣಾಧಿಕಾರಿ ಸುರೇಂದ್ರ ಇದ್ದರು.
ಶಾಸಕ ಎಆರ್‌ಕೆ ಆಕ್ರೋಶ
‘ಆದಿವಾಸಿಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕು ಹಾಡಿಗಳಲ್ಲಿ ಬೆಳಕು ಮೂಡಬೇಕು ಎಂಬ ಸದುದ್ದೇಶದಿಂದ ರಾಜ್ಯ ಸರ್ಕಾರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ನಿಯಮಗಳ ನೆಪವೊಡ್ಡಿ ಅಡ್ಡಿಪಡಿಸುತ್ತಿರುವುದು ಖಂಡನೀಯ. ಅರಣ್ಯದೊಳಗೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಸಲು ಕಾನೂನು ಅಡ್ಡಿಯಾಗುವುದಿಲ್ಲ; ಆದರೆ ಹಾಡಿಗಳಿಗೆ ಮೂಲಸೌಲಭ್ಯ ಕಲ್ಪಿಸಲು ಮಾತ್ರ ಕಾನೂನುಗಳು ಅಡ್ಡಿಯಾಗುತ್ತಿರುವುದು ವಿಪರ್ಯಾಸ’ ಎಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು. ‘ಪ್ರಜಾವಾಣಿ’ ವರದಿ ಪ್ರತಿಧ್ವನಿ: ‘ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನಬೆಟ್ಟದಲ್ಲಿ ದಶಕಗಳಿಂದ ನೆಲೆಸಿರುವ ಸೋಲಿಗರನ್ನು ಒಕ್ಕಲೆಬ್ಬಿಸುವ ಯತ್ನ ನಡೆಯುತ್ತಿದ್ದು ನೋಟಿಸ್ ನೀಡಲಾಗಿದೆ. ಸೋಲಿಗರ ಆತಂಕ ವ್ಯಕ್ತಪಡಿಸಿರುವ ಕುರಿತು ‘ಪ್ರಜಾವಾಣಿ’ಯಲ್ಲಿ ಸುದ್ದಿ ಪ್ರಕಟವಾಗಿದ್ದು ಅಧಿಕಾರಿಗಳು ನೆರವಿಗೆ ಧಾವಿಸಬೇಕು. ಭೂಮಿ ಮಂಜೂರಾತಿ ದಾಖಲೆಗಳಿದ್ದರೂ ಅನಗತ್ಯ ತೊಂದರೆ ನೀಡುವುದು ಸರಿಯಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.