ADVERTISEMENT

ಚಾಮರಾಜನಗರದಿಂದ ಸ್ಪರ್ಧೆ ಮಾಡುವ ಬಗ್ಗೆ ಪಕ್ಷ ತೀರ್ಮಾನಿಸುತ್ತದೆ: ವಿ. ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 14:55 IST
Last Updated 17 ಮಾರ್ಚ್ 2023, 14:55 IST
ವಿ.ಸೋಮಣ್ಣ
ವಿ.ಸೋಮಣ್ಣ   

ಕೊಳ್ಳೇಗಾಲ: 'ಚಾಮರಾಜನಗರ ಜಿಲ್ಲೆ ಮೇಲೆ ನನಗೆ ಅಪಾರವಾದ ಗೌರವ, ಆತ್ಮೀಯತೆ ಇದೆ. ಅರ್ಹತೆ ಇರುವ ನೂರಾರು ಜನ ಇದ್ದಾರೆ. ಅವಕಾಶಗಳು ಯಾರಿಗೆ ಸಿಕ್ಕಿಲ್ಲವೋ ಅವರಿಗೆ ಸಿಗಬೇಕಾಗುತ್ತದೆ. ಪಕ್ಷ ಎಲ್ಲವನ್ನೂ ತೀರ್ಮಾನ ಮಾಡುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶುಕ್ರವಾರ ಹೇಳಿದರು.

ತಾಲ್ಲೂಕಿನ ಸತ್ತೇಗಾಲದ ಹ್ಯಾಂಡ್ ಪೋಸ್ಟ್ ಬಳಿ ಚಾಮರಾಜನಗರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ‘ನನ್ನ ತಂದೆ ಮತ್ತು ತಾಯಿ ನಂತರ ಈ ಜಿಲ್ಲೆಯ ಜನರನ್ನು ನಾನು ಹೆಚ್ಚು ಗೌರವಿಸುತ್ತೇನೆ. ಚಾಮರಾಜನಗರ, ತುಮಕೂರು, ಗೋವಿಂದರಾಜ ನಗರ ಸೇರಿದಂತೆ ಅನೇಕ ಕಡೆ ಅಭಿಮಾನಿಗಳು ಚುನಾವಣೆಗೆ ನಿಲ್ಲಿ ಎಂದು ಒತ್ತಾಯ ಮಾಡುತ್ತಿದ್ದಾರೆ’ ಎಂದರು.

‘ಏಳು ಬಾರಿ ಶಾಸಕನಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. 45 ವರ್ಷಗಳಿಂದ ರಾಜಕೀಯದಲ್ಲಿ ಸೇವೆ ಮಾಡಿದ್ದೇನೆ. ಒಂದು ವರ್ಷ ಮೂರು ತಿಂಗಳಿಂದ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. ಜಿಲ್ಲೆಯನ್ನು ಮುಖ್ಯವಾಹಿನಿಗೆ ತಲುಪಿಸಬೇಕು ಎಂಬುದು ನನ್ನ ಉದ್ದೇಶ. ನನ್ನ ಕೈಲಾದ ಕೆಲಸ ಮಾಡಿದ್ದೇನೆ. ಮಾದಪ್ಪ ಇದ್ದಾನೆ. ಬಿಳಿಗಿರಿರಂಗನಾಥ ಇದ್ದಾನೆ, ಹಿಮವದ್‌ ಗೋಪಾಲಸ್ವಾಮಿ ಸೇರಿದಂತೆ ಹಲವು ದೇವರು ಇದ್ದಾರೆ. ಅವರು ಏನು ಸಂದೇಶ ಕೊಡುತ್ತಾರೆಯೋ ಅದರಂತೆ ನಡೆಯಲಿದೆ’ ಎಂದರು.

ADVERTISEMENT

‘ರಾಜ್ಯದ ವಿವಿಧ ಕಡೆ ವಿಜಯಸಂಕಲ್ಪ ಯಾತ್ರೆ ಅದ್ದೂರಿಯಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಗೆ ಅನಾರೋಗ್ಯದ ಕಾರಣದಿಂದ ಬಂದಿರಲಿಲ್ಲ. ಈಗ 108 ಅಡಿ ಎತ್ತರದ ಮಹದೇಶ್ವರಸ್ವಾಮಿ ಪ್ರತಿಮೆಯನ್ನು ಉದ್ಘಾಟನೆ ಮಾಡಲು ಬಂದಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಉದ್ಘಾಟನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿ.ಎಸ್ ಯಡಿಯೂರಪ್ಪ, ಆರ್.ಅಶೋಕ, ಸಿ.ಸಿ ಪಾಟೀಲ, ಶಶಿಕಲಾ ಜೊಲ್ಲೆ ಸೇರಿದಂತೆ ಅನೇಕರನ್ನು ಆಹ್ವಾನಿಸಿದ್ದೇನೆ. ಯಾರನ್ನೆಲ್ಲ ಕರೆಸಬೇಕು ಎಂದು ಮಾದಪ್ಪನಿಗೆ ಇದೆಯೋ ಅವರನ್ನೆಲ್ಲ ಕರೆಸುತ್ತಾನೆ. ಎಲ್ಲ ಕಾಮಗಾರಿಗಳೂ ಮುಕ್ತಾಯವಾಗಿದೆ. ಮ್ಯೂಸಿಯಂ ಕಾಮಗಾರಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಅದು ಮುಕ್ತಾಯವಾಗಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಾಸಕ ಎನ್.ಮಹೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ. ದತ್ತೇಶ್ ಕುಮಾರ್ ಇತರ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.