ADVERTISEMENT

ಕ್ಷೇತ್ರಕ್ಕೆ ಮೂಲಸೌಕರ್ಯ ಕಲ್ಪಿಸುವುದೇ ಗುರಿ

ಎಲ್ಲ ಜಾತಿಯವರನ್ನು ವಿಶ್ವಾಸಕ್ಕೆ ಪಡೆದು ಅಭಿವೃದ್ಧಿ: ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನ್‌ ಕುಮಾರ್‌

ಸೂರ್ಯನಾರಾಯಣ ವಿ
Published 6 ಸೆಪ್ಟೆಂಬರ್ 2018, 15:33 IST
Last Updated 6 ಸೆಪ್ಟೆಂಬರ್ 2018, 15:33 IST
ಸಿ.ಎಸ್‌. ನಿರಂಜನ್‌ ಕುಮಾರ್‌
ಸಿ.ಎಸ್‌. ನಿರಂಜನ್‌ ಕುಮಾರ್‌   

ಸತತವಾಗಿ ಮೂರು ಸೋಲಿನ ನಂತರ ಗೆಲುವಿನ ಸಿಹಿ ಕಂಡಿರುವ ಗುಂಡ್ಲುಪೇಟೆ ಶಾಸಕ ಸಿ.ಎಸ್‌. ನಿರಂಜನ್‌ಕುಮಾರ್‌ ಅವರುಬಿಜೆಪಿಯ ಯುವ ನೇತಾರರಲ್ಲಿ ಒಬ್ಬರು. ಅರಣ್ಯ ಪ್ರದೇಶದಿಂದ ಕೂಡಿದ ಗಡಿ ತಾಲ್ಲೂಕನ್ನು ಪ್ರತಿನಿಧಿಸುತ್ತಿರುವ ಅವರ ಮುಂದೆ ಸಾಕಷ್ಟು ಸವಾಲುಗಳು ಇವೆ. ಬೇರೆ ಪಕ್ಷಗಳ ಮುಖಂಡರು ಅವರ ಮೇಲೆ ವಿವಿಧ ಆರೋಪಗಳನ್ನು ಮಾಡುತ್ತಿದ್ದಾರೆ. ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಾಕಿಕೊಂಡಿರುವ ಯೋಜನೆ ಮತ್ತು ತಮ್ಮ ಮೇಲೆ ಬಂದಿರುವ ಆರೋಪಗಳ ಬಗ್ಗೆ ಅವರು ‘ಪ್ರಜಾವಾಣಿ’ಯೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ.

* ಕ್ಷೇತ್ರದ ಅಭಿವೃದ್ಧಿಗೆ ಏನು ಯೋಜನೆ ಹಾಕಿಕೊಂಡಿದ್ದೀರಿ?

ಉ: 25 ವರ್ಷಗಳಿಂದ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ. ಹಳ್ಳಿಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ರಸ್ತೆಗಳು ಸರಿ ಇಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರು ವಾಸಿಸುತ್ತಿರುವ ಕಾಲೊನಿಗಳಿಗೆ ಕಾಂಕ್ರೀಟ್‌ ರಸ್ತೆ ನಿರ್ಮಿಸಬೇಕಿದೆ. ಕುಡಿಯುವ ನೀರಿನ ಸಮಸ್ಯೆ ಇದೆ. ಕೆಲವು ಗ್ರಾಮಗಳಲ್ಲಿ ನೀರಿನ ಟ್ಯಾಂಕ್‌ಗಳ ಅವಶ್ಯಕತೆ ಇದೆ. ಇನ್ನೂ ಕೆಲವೆಡೆ ಪೈಪ್‌ಲೈನ್‌ಗಳನ್ನು ಅಳವಡಿಸಬೇಕಿದೆ. ಇಲ್ಲೆಲ್ಲ ಮೂಲಸೌಕರ್ಯ ಕಲ್ಪಿಸಲು ಹೆಚ್ಚು ಗಮನ ನೀಡುತ್ತಿದ್ದೇನೆ.

ADVERTISEMENT

ಗ್ರಾಮೀಣ ಭಾಗದ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸುವ ಕೆಲಸವನ್ನು ಕೈಗೆತ್ತಿಕೊಳ್ಳಬೇಕಿದೆ. ಯಾವ ರಸ್ತೆ ಹೆಚ್ಚು ಹಾಳಾಗಿದೆಯೋ ಅದನ್ನು ಆದ್ಯತೆ ಮೇರೆಗೆ ಸರಿ ಪಡಿಸಬೇಕಿದೆ. ಆ ನಿಟ್ಟಿನಲ್ಲಿ ಕೆಲಸ ಸಾಗಿದೆ.

ಗುಂಡ್ಲುಪೇಟೆ ಶೈಕ್ಷಣಿಕವಾಗಿ ಅಭಿವೃದ್ಧಿ ಆಗಬೇಕಿದೆ. ನನ್ನ ಅವಧಿಯಲ್ಲಿ ಕ್ಷೇತ್ರ ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು ಎಂಬ ಹಂಬಲ ಇದೆ. ಅದಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇನೆ.

* ಕೆರೆಗೆ ನೀರು ತುಂಬಿಸುವ ಕೆಲಸ ಅರ್ಧಕ್ಕೆ ನಿಂತಿದೆಯಲ್ಲಾ?

ಉ: ₹67 ಕೋಟಿ ವೆಚ್ಚದ ಯೋಜನೆಯು ಹಿಂದಿನ ಶಾಸಕರ ಅವಧಿಯಲ್ಲಿ ಆರಂಭವಾಗಿತ್ತು. ಅದು ಅರ್ಧದಲ್ಲೇ ನಿಂತಿದೆ. ವಿದ್ಯುತ್‌ ವ್ಯವಸ್ಥೆ ಆಗಿರಲಿಲ್ಲ. ವಿದ್ಯುತ್‌ ಟವರ್‌ ನಿರ್ಮಾಣ ಆಗಬೇಕಿದೆ. ಕೆಲಸ ಆರಂಭವಾಗಿದೆ. ಅಮಚವಾಡಿ ಕೆರೆಗೆ ನೀರು ಬಂತು. ಆದರೆ, ನಂತರ ಅದು ನಿಂತಿತು. ಸಂಬಂಧಿಸಿದ ಅಧಿಕಾರಿಗಳಿಗೆ ಶೀಘ್ರವಾಗಿ ಕೆಲಸ ಮುಗಿಸುವಂತೆ ಕೇಳಿದ್ದೇವೆ.

ಅಮಚವಾಡಿ, ಕೆಮರಹಳ್ಳಿ ಕೆರೆಗೆ ನೀರು ತುಂಬಿಸುವ ಮೊದಲ ಹಂತದ ಯೋಜನೆಗೆ ಅನುದಾನ ಬಿಡುಗಡೆಯಾಗಿದೆ. ಕೆಮರಹಳ್ಳಿ ಕೆರೆಯಿಂದ ರಾಘವಪುರ ಕೆರೆಗೆ ನೀರು ಬರಬೇಕಾದರೆ ಮತ್ತೆ ಹಣ ಬಿಡುಗಡೆ ಮಾಡಬೇಕು. ಅದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.ಕ್ಷೇತ್ರದ ಇನ್ನೊಂದು ಭಾಗದಲ್ಲಿ ಉತ್ತೂರು ಕೆರೆ ತುಂಬಿಸುವ ಕಾರ್ಯಕ್ಕೆ ಈಗ ವೇಗ ಸಿಕ್ಕಿದೆ. ಈ ಭಾಗದಲ್ಲಿ ಏಳರಿಂದ ಎಂಟು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ನಡೆಯುತ್ತಿದೆ. 2 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ನನ್ನ ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಎಲ್ಲ ಕೆರೆಗಳಿಗೂ ನೀರು ತುಂಬಿಸುವ ಗುರಿ ಹೊಂದಿದ್ದೇನೆ.

* ಕೆಲವು ಗ್ರಾಮಗಳಿಗೆಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ನೀರು ತಲುಪಿಲ್ಲ. ಇದಕ್ಕೆ ಏನು ಮಾಡುತ್ತೀರಿ?

ಉ: ನದಿ ಮೂಲದಿಂದ ಗ್ರಾಮಗಳಿಗೆ ನೀರು ತಲುಪಿಸುವ ಈ ಯೋಜನೆ ಬಹುತೇಕ ಮುಗಿದಿದೆ. ಕೆಲವು ಕಡೆಗಳಲ್ಲಿ ಸಮಸ್ಯೆಗಳು ಇರುವುದು ನಿಜ. ಅವುಗಳನ್ನು ಪತ್ತೆ ಹಚ್ಚಿದ್ದೇವೆ. ಸರಿಪಡಿಸುವ ಕೆಲಸ ನಡೆಯುತ್ತಿದೆ.

* ತಾಲ್ಲೂಕಿನಲ್ಲಿ ಮಾನವ– ಪ್ರಾಣಿ ಸಂಘರ್ಷ ಹೆಚ್ಚುತ್ತಿದೆ. ಇದರ ತಡೆಗೆ ಹಾಕಿಕೊಂಡಿರುವ ಯೋಜನೆ ಏನು?

ಉ: ಕ್ಷೇತ್ರದ ಕಾಡಂಚಿನ ಗ್ರಾಮಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಜನರು ತೊಂದರೆ ಅನುಭವಿಸುತ್ತಿದ್ದಾರೆ. ಪ್ರಾಣಿಗಳಿಗೂ ಕಿರಿಕಿರಿಯಾಗುತ್ತಿದೆ. ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಹಾಗೂ ಸರ್ಕಾರದ ಮಟ್ಟದಲ್ಲೂ ಮಾತನಾಡಿದ್ದೇನೆ. ಸಮಸ್ಯೆ ಇರುವ ಕಡೆಗಳಲ್ಲಿ ಟ್ರೆಂಚ್‌, ಸೋಲಾರ್‌ ಬೇಲಿಯ ನಿರ್ಮಾಣ ಮಾಡುವ ಬಗ್ಗೆ ಮನವಿ ಮಾಡಿದ್ದೇನೆ. ಪ್ರಸ್ತಾವವನ್ನೂ ಸಿದ್ಧಪಡಿಸಲಾಗಿದೆ.

* ಕೆಲವು ಗ್ರಾಮಗಳಲ್ಲಿ ಅಕ್ರಮ ಹೋಂ ಸ್ಟೇಗಳು ಇರುವ ಬಗ್ಗೆ, ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೂರುಗಳಿವೆ. ಶಾಸಕರಾಗಿ ಏನು ಕ್ರಮ ಕೈಗೊಳ್ಳುತ್ತೀರಿ?

ಉ: ನಮ್ಮಲ್ಲಿ ಅಕ್ರಮ ಹೋಂ ಸ್ಟೇಗಳು ಈಗ ಇಲ್ಲ. ಕೆಲವು ಕಡೆ ಇರಬಹುದೇನೋ...ನನಗೆ ತಿಳಿದಂತೆ ಅಕ್ರಮ ಗಣಿಗಾರಿಕೆಯೂ ನಡೆಯುತ್ತಿಲ್ಲ. ಯಾವುದೇ ಕಾರಣಕ್ಕೂ ಇಂತಹದ್ದಕ್ಕೆ ಪ್ರೋತ್ಸಾಹ ನೀಡುವುದಿಲ್ಲ. ಯಾರು ಕೂಡ ನೀಡಬಾರದು. ಒಂದು ವೇಳೆ ಅಕ್ರಮವಾಗಿ ನಡೆಯುತ್ತಿದ್ದರೆ, ಅದನ್ನು ತಡೆಯುವುದು ಅರಣ್ಯ ಇಲಾಖೆಯ ಜವಾಬ್ದಾರಿ. ಸೂಕ್ಷ್ಮ ಅರ‌ಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ನಿರ್ಬಂಧವಿದೆ. ಕಾನೂನಿನಲ್ಲಿ ಅದಕ್ಕೆ ಅವಕಾಶವೂ ಇಲ್ಲ.

* ಗಡಿ ಭಾಗದಲ್ಲಿ ಅಕ್ರಮ ಜಾನುವಾರು ಸಾಗಣೆ ಮತ್ತು ಹೊರ ರಾಜ್ಯದ ತ್ಯಾಜ್ಯವನ್ನು ತಾಲ್ಲೂಕಿನಲ್ಲಿ ತಂದು ಸುರಿಯಲಾಗುತ್ತಿದೆ ಎಂಬ ದೂರು ಇದೆಯಲ್ಲಾ?

ಉ: ಮೊದಲೆಲ್ಲಾ ಅಕ್ರಮ ಸಾಗಣೆ ನಡೆಯುತ್ತಿದ್ದದ್ದು ನಿಜ. ಬಹಳ ಹಿಂದೆಯೇ ಅದು ನಿಂತು ಹೋಗಿದೆ. ಅವುಗಳಿಗೆ ಮತ್ತೆ ಅವಕಾಶ ನೀಡುವುದಿಲ್ಲ. ಅಕ್ರಮ ಸಾಗಾಟದ ಬಗ್ಗೆ ನಿಗಾ ಇಡಬೇಕಾದದ್ದುಅರಣ್ಯ ಇಲಾಖೆ ಮತ್ತು ಪೊಲೀಸ್‌ ಅಧಿಕಾರಿಗಳ ಕೆಲಸ. ಗಡಿಯಲ್ಲಿರುವ ಚೆಕ್‌ಪೋಸ್ಟ್‌ನಲ್ಲಿ ಅನುಮಾನ ಬಂದಂತಹ ವಾಹನಗಳನ್ನು ತಡೆದು ತಪಾಸಣೆ ಮಾಡಬೇಕು. ಅಧಿಕಾರಿಗಳು ಅದನ್ನು ಕಟ್ಟುನಿಟ್ಟಾಗಿ ಮಾಡುತ್ತಿದ್ದಾರೆ.

* ಹಿಂದಿನ ಶಾಸಕರ ಅವಧಿಯಲ್ಲಿ ಆರಂಭಿಸಲಾದ ಯೋಜನೆಗಳಿಗೆ ನೀವು ಮತ್ತೆ ಗುದ್ದಲಿಪೂಜೆ ನೆರವೇರಿಸುತ್ತಿದ್ದೀರಿ ಎಂಬ ಆರೋಪ ಇದೆ. ಈ ‌ಬಗ್ಗೆ ಏನು ಹೇಳುತ್ತೀರಿ?

ಉ: ಚುನಾವಣೆ ಬರುತ್ತಿದೆ ಎಂಬ ಕಾರಣಕ್ಕೆ ಹಿಂದಿನ ಶಾಸಕರು ತರಾತುರಿಯಲ್ಲಿ ಕೆಲವು ಕಾರ್ಯಕ್ರಮಗಳಿಗೆ ಚಾಲನೆ ಕೊಟ್ಟಿದ್ದರು. ಆಗ ಅವುಗಳಿಗೆ ತಾಂತ್ರಿಕವಾಗಿ ಅನುಮೋದನೆ ಸಿಕ್ಕಿರಲಿಲ್ಲ. ಹಣವೂ ಬಿಡುಗಡೆ ಆಗಿರಲಿಲ್ಲ. ಈಗ ಅನುದಾನ ಬಂದಿದೆ. ಜನರಿಂದ ಆಯ್ಕೆಯಾಗಿರುವ ಶಾಸಕ ಕಾರ್ಯಕ್ರಮ ಅಥವಾ ಯೋಜನೆಗಳಿಗೆ ಚಾಲನೆ ನೀಡುವುದು ಶಿಷ್ಟಾಚಾರ. ಶಾಸಕಾಂಗ ನನಗೆ ನೀಡಿರುವ ಶಾಸನಬದ್ಧ ಹಕ್ಕು. ಅದನ್ನು ನಾನು ಚಲಾಯಿಸುತ್ತಿದ್ದೇನೆ. ನನ್ನ ಕರ್ತವ್ಯವನ್ನು ಮಾಡುತ್ತಿದ್ದೇನೆ.

ಅಂದ ಮಾತ್ರಕ್ಕೆ, ಹಿಂದೆ ಮಾಡಿರುವ ಎಲ್ಲ ಕಾಮಗಾರಿ ನಾನು ಗುದ್ದಲಿಪೂಜೆ ಮಾಡುವುದಕ್ಕೆ ಹೋಗಿಲ್ಲ. ಹಿಂದೆ ಇದ್ದವರು ಈ ರೀತಿ ತುಂಬಾ ಸಲ ಮಾಡಿದ್ದಾರೆ. ಎರಡು ಮೂರು ಬಾರಿ ಗುದ್ದಲಿ ಪೂಜೆ ಮಾಡಿದ್ದೂ ಉಂಟು. ನನಗೆ ಆ ರೀತಿ ಮಾಡುವ ಅವಶ್ಯಕತೆ ಇಲ್ಲ. ಕೆಲವರು ಅನವಶ್ಯಕವಾಗಿ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದಾರೆ. ಎಲ್ಲಿ ಎಂದು ನಿರ್ದಿಷ್ಟವಾಗಿ ಹೇಳಲಿ. ಉದ್ದೇಶ‍ಪೂರ್ವಕವಾಗಿ ಹೇಳುವ ಮಾತುಗಳಿಗೆ ತಲೆಕೆಡಿಸಿಕೊಳ್ಳವುದಿಲ್ಲ.

ಯೋಜನೆಗಳಿಗೆ ಯಾರೂ ಮನೆಯಿಂದ ಅನುದಾನ ತರುವುದಿಲ್ಲ. ಅದು ಸರ್ಕಾರದ್ದು. ‘ಈ ಯೋಜನೆಗಳಿಗೆ ಹಿಂದೆ ನಾವು ಅನುದಾನ ತಂದಿದ್ದು’ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಅದು ಯಾರ ಮನೆಯಿಂದ ತಂದ ಅನುದಾನ? ನಮ್ಮ ಮನೆಯದ್ದಾ? ಅದು ಸರ್ಕಾರಕ್ಕೆ ಸೇರಿದ ದುಡ್ಡು. ಗುದ್ದಲಿಪೂಜೆ ಮಾಡುವುದು ಶಿಷ್ಟಾಚಾರ. ಅದರಂತೆ ನಡೆಯುತ್ತಿದೆ.

* ನೀವು ತಾರತಮ್ಯ, ಸ್ವಜನಪಕ್ಷಪಾತ ಮಾಡುತ್ತೀರಂತೆ...

ಉ: ಯಾರೋ ಮಾಡುವ ಆರೋಪಗಳಿಗೆ ಪ್ರತಿಕ್ರಿಯೆ ಕೊಡಬೇಕು ಎಂದೇನಿಲ್ಲ. ಅವರು ನೋಡುತ್ತಿರುವ ದೃಷ್ಟಿಯಲ್ಲಿ ಹಾಗೆ ಕಾಣಬಹುದೇನೋ... ನನಗೆ 94 ಸಾವಿರ ಜನರು ಮತ ಹಾಕಿದ್ದಾರೆ. ನಾನು ಆ ರೀತಿ ಇದ್ದಿದ್ದರೆ ಅಷ್ಟು ಸಾವಿರ ಜನ ಯಾಕೆ ಮತ ಹಾಕುತ್ತಿದ್ದರು? ಎಲ್ಲ ಜಾತಿ, ಧರ್ಮದವರನ್ನುವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದ ಅಭಿವೃದ್ಧಿ ಮಾಡಲು ಹೊರಟಿದ್ದೇನೆ.ಗ್ರಾಮಗಳ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ನಾನು ತಲೆ ಕೆಡಿಸಿಕೊಳ್ಳುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.