ಕೊಳ್ಳೇಗಾಲ: ‘ಬಡವರ ಹಾಗೂ ರೈತರ ಪರವಾಗಿ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಕೆಲಸ ಮಾಡುತ್ತಿಲ್ಲ’ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಆರೋಪಿಸಿದರು.
ನಗರದ ಖಾಸಗಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಸಮಾನ ಮನಸ್ಕರ ವೇದಿಕೆಯ ಮತದಾರರ ಚಿಂತನ ಸಭೆ ಉದ್ಘಾಟಿಸಿ ಮಾತನಾಡಿದರು.
‘ಕೃಷ್ಣಮೂರ್ತಿ ಅವರು ಸುಮಾರು 20 ವರ್ಷ ಮನೆಯಲ್ಲಿ ಕುಳಿತಿದ್ದರು, ಈಗ ಗೆದ್ದು ಶಾಸಕರಾಗಿದ್ದಾರೆ. ಆದರೆ, ಅವರು ಯಾರ ಪರವಾಗಿಯೂ ಕೆಲಸ ಕಾರ್ಯಗಳನ್ನು ಮಾಡುತ್ತಿಲ್ಲ. ಶ್ರೀಮಂತ ಕುಟುಂಬದಿಂದ ಬಂದ ಅವರಿಗೆ ಕಷ್ಟದ ಅರಿವು ಗೊತ್ತಿಲ್ಲ. ಯಾರಾದರೂ ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಸುದ್ದಿಗಳನ್ನು ಪ್ರಚಾರ ಮಾಡಿದರೆ ಅವರ ವಿರುದ್ಧವೇ ಸುಳ್ಳು ದಾಖಲೆ ಸೃಷ್ಟಿ ಮಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಸುತ್ತಾರೆ’ ಎಂದು ಆರೋಪಿಸಿದರು.
‘ಚಾಮರಾಜನಗರ ಬಹಳ ಹಿಂದುಳಿದ ಜಿಲ್ಲೆಯಾಗಿದೆ. ಆದರೆ, ಇಲ್ಲಿನ ರಾಜಕಾರಣಿಗಳು ಮಾತ್ರ ಬಹಳ ಮುಂದುವರಿದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್, ಸಂಸದ ಸುನೀಲ್ ಬೋಸ್, ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಕ್ಷೇತ್ರದ ಜನರ ಕೈಗೆ ಸಿಗುತ್ತಿಲ್ಲ, ಕ್ಷೇತ್ರದ ಅಭಿವೃದ್ಧಿಯನ್ನು ಸಹ ಮಾಡುವುದಿಲ್ಲ. ಶಾಸಕರಿಂದ ಏನನ್ನೂ ನಿರೀಕ್ಷೆ ಮಾಡಬೇಡಿ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಅವರು ನಮ್ಮ ಪಕ್ಕದ ಕ್ಷೇತ್ರದವರೇ ಆಗಿದ್ದರೂ ಅವರು ಸಹ ಕ್ಷೇತ್ರವನ್ನು ಅಭಿವೃದ್ಧಿ ಮಾಡಿಲ್ಲ’ ಎಂದರು.
ಕುಟುಂಬ ರಾಜಕಾರಣ ಹೆಚ್ಚು: ‘ರಾಜ್ಯದಲ್ಲಿ ಕುಟುಂಬ ರಾಜಕಾರಣ ಮಿತಿಮೀರುತ್ತಿದೆ. ಒಂದು ಮನೆಯಲ್ಲಿ ಐವರು ಶಾಸಕರು, 2 ಸಂಸದರು ಇದ್ದಾರೆ. ಕುಟುಂಬ ರಾಜಕಾರಣ ಬೆಳೆಯುವುದಕ್ಕೆ ಮತದಾರರೇ ಕಾರಣ. ಈ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ, ಹಾಗಾಗಿ ದೇಶ ಬದಲಾವಣೆ ಆಗುವುದು ಕಷ್ಟ. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ, ಪತ್ರಿಕಾರಂಗ ಎಲ್ಲವೂ ಕಾಲು, ಕೈ ಮುರಿದಂತೆ ಆಗಿದೆ. ಆ ಕಾರಣ ಎಲ್ಲರೂ ಎಚ್ಚರದಿಂದ ಮುಂಬರುವ ಚುನಾವಣೆಗಳಲ್ಲಿ ಮತದಾನ ಮಾಡಬೇಕು, ಜೊತೆಗೆ ಮತವನ್ನು ಯಾರು ಮಾರಾಟ ಮಾಡಬೇಡಿರಿ’ ಎಂದರು.
ಪಕ್ಷದ ರಾಷ್ಟ್ರೀಯ ಸಂಯೋಜಕ ಗೋಪಿನಾಥ್ ಮಾತನಾಡಿ, ‘ದೇಶದಲ್ಲಿ ಜಾತಿ ವ್ಯವಸ್ಥೆ ಹೋಗಲಾಡಿಸಬೇಕು, ಇದು ನಿಂತರೆ ದೇಶ ಉನ್ನತ ಸ್ಥಾನಕ್ಕೆ ಹೋಗುವುದರಲ್ಲಿ ಅನುಮಾನವೇ ಇಲ್ಲ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಜಾತಿ ವ್ಯವಸ್ಥೆ, ತಾರತಮ್ಯ ಇನ್ನೂ ಹೋಗಿಲ್ಲ’ ಎಂದರು.
‘ಬದಲಾವಣೆ ಜಗದ ನಿಯಮ, ರಾಜಕೀಯದಲ್ಲಿ ಬದಲಾವಣೆ ಆಗಬೇಕು. ಹಣ, ಮದ್ಯ ಇನ್ನಿತರೆ ಆಮಿಷಗಳಿಗೆ ಯಾರೂ ಬಲಿಯಾಗಬೇಡಿ. ಅಸ್ಪೃಶ್ಯತೆ, ಗುಲಾಮಗಿರಿ, ಜೀತಪದ್ಧತಿಯನ್ನು ಬಿಟ್ಟು ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಬದುಕಬೇಕು. ದೇಶದಲ್ಲಿ ಮೌಢ್ಯಾಚರಣೆಗಳು ಹೆಚ್ಚಾಗುತ್ತಿವೆ, ಇದು ನಿಂತರೆ ದೇಶವನ್ನು ಬದಲಾಯಿಸಬಹುದು’ ಎಂದು ಹೇಳಿದರು.
ಮುಖಂಡ ರಾಜೇಂದ್ರ, ಸೀಗನಾಯಕ, ಶೇಖರ್ ಬುದ್ಧ ಹಾಗೂ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.