ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮ
ಚಾಮರಾಜನಗರ: ‘ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮದೊಳಗೆ ತಮಿಳುನಾಡಿನ ಜಾನುವಾರು ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ರಾಜ್ಯದ ಗಡಿ ಪ್ರವೇಶಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ’ ಎಂದು ಮಲೆ ಮಹದೇಶ್ವರ (ಎಂ ಎಂ ಹಿಲ್ಸ್) ಅರಣ್ಯ ವಿಭಾಗದ ಡಿಸಿಎಫ್ ಭಾಸ್ಕರ್ ತಿಳಿಸಿದರು.
ಗುರುವಾರ ಇಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ತಮಿಳುನಾಡಿನಿಂದ ಹೆಚ್ಚಿನ ಜಾನುವಾರುಗಳನ್ನು ರಾಜ್ಯದೊಳಗೆ ನುಗ್ಗಿಸಿ ಅರಣ್ಯದಂಚಿನಲ್ಲಿ ದೊಡ್ಡಿಗಳನ್ನು ನಿರ್ಮಿಸಿ ಕಾಡಿನೊಳಗೆ ಮೇಯಲು ಬಿಡಲಾಗುತ್ತಿದೆ. ದೊಡ್ಡಿಗಳನ್ನು ತೆರವುಗೊಳಿಸಿ ಜಾನುವಾರುಗಳನ್ನು ವಾಪಸ್ ಕಳಿಸಲಾಗುತ್ತಿದೆ. ಅನ್ಯ ರಾಜ್ಯದ ದನಗಳನ್ನು ಸಾಕದಂತೆ ಸ್ಥಳೀಯರಿಗೆ ತಿಳಿವಳಿಕೆ ನೀಡಲಾಗುತ್ತಿದೆ. ಹಂತಹಂತವಾಗಿ ಅರಣ್ಯದೊಳಗೆ ಜಾನುವಾರು ಪ್ರವೇಶ ನಿರ್ಬಂಧಿಸಲಾಗುವುದು’ ಎಂದರು.
‘ಎಂ ಎಂ ಹಿಲ್ಸ್ ಅರಣ್ಯಕ್ಕೆ ಹೊಂದಿಕೊಂಡಂತೆ 9,063 ಕುಟುಂಬಗಳು 18 ಸಾವಿರಕ್ಕೂ ಹೆಚ್ಚು ದನಗಳನ್ನು ಸಾಕಿದ್ದು, ಕಾಡಿನೊಳಗೆ ಮೇಯಿಸುವುದನ್ನು ರೂಢಿಸಿಕೊಂಡಿದ್ದಾರೆ. ಅದನ್ನು ತಪ್ಪಿಸಲು ಕಾರ್ಪೊರೆಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್‌ಆರ್) ಬಳಸಿ ಕೊಟ್ಟಿಗೆಯಲ್ಲಿ ಮೇವು ಹಾಕಿ ಸಾಕುವಂತಹ ಎಚ್.ಎಫ್ ನಂತಹ ಮಿಶ್ರತಳಿಯ ಹಸುಗಳನ್ನು ನೀಡಲಾಗುತ್ತಿದೆ. ಈಗಾಗಲೇ ದಿಣ್ಣಳ್ಳಿಯಲ್ಲಿ 10 ರಾಸುಗಳನ್ನು ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.