ADVERTISEMENT

ಸಿಡಿಮದ್ದು ಬಳಕೆ ತಡೆ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದರೇ ಅಧಿಕಾರಿಗಳು?

ಮಲೆ ಮಹದೇಶ್ವರ ವನ್ಯಧಾಮ: ಅಧಿಕಾರಿಗಳು, ಸಿಬ್ಬಂದಿಯಿಂದ ಶೋಧ ಕಾರ್ಯಾಚರಣೆ

ಬಿ.ಬಸವರಾಜು
Published 23 ಡಿಸೆಂಬರ್ 2020, 19:30 IST
Last Updated 23 ಡಿಸೆಂಬರ್ 2020, 19:30 IST
ಅರಣ್ಯ ಇಲಾಖೆಯ ಸಿಬ್ಬಂದಿ ಅರಣ್ಯದ ಅಂಚಿನ ಪ್ರದೇಶದ ಮನೆಗಳಿಗೆ ಭೇಟಿ ನೀಡಿ ಸ್ಫೋಟಕಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವುದು
ಅರಣ್ಯ ಇಲಾಖೆಯ ಸಿಬ್ಬಂದಿ ಅರಣ್ಯದ ಅಂಚಿನ ಪ್ರದೇಶದ ಮನೆಗಳಿಗೆ ಭೇಟಿ ನೀಡಿ ಸ್ಫೋಟಕಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವುದು   

ಹನೂರು: ಮಲೆ ಮಹದೇಶ್ವರ ವನ್ಯಧಾಮದ ಕಾಡಂಚಿನ ಪ್ರದೇಶದ ಕೆಲವು ಕಡೆಗಳಲ್ಲಿ, ಆಹಾರದಲ್ಲಿ ಸ್ಫೋಟಕ ಇಟ್ಟು ಪ್ರಾಣಿಗಳನ್ನು ಕೊಲ್ಲಲು ಯತ್ನಿಸುತ್ತಿರುವ ಪ್ರಕರಣಗಳ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದರೇ?

ವಡಕೆಹಳ್ಳದ ಬಳಿ ಎಮ್ಮೆ ಹಾಗೂ ತೋಕರೆ ಗ್ರಾಮದಲ್ಲಿ ಹಸುವೊಂದು ಸಿಡಿಮದ್ದು ಹುದುಗಿಸಿಟ್ಟದ್ದ ಆಹಾರ ಸೇವಿಸಲು ಯತ್ನಿಸಿ ಮುಖ ಛಿದ್ರಗೊಂಡು ಮೃತಪಟ್ಟ ಪ್ರಕರಣ ತಡವಾಗಿ ಬೆಳಕಿಗೆ ಬರುತ್ತಿದ್ದಂತೆಯೇ, ಪರಿಸರ ಪ್ರೇಮಿಗಳು ಇಂತಹ ಪ್ರಶ್ನೆ ಮುಂದಿಟ್ಟಿದ್ದಾರೆ.

ವನ್ಯಧಾಮದ ಉನ್ನತ ಅಧಿಕಾರಿಗಳು ಈ ಘಟನೆಯ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಹೇಳುತ್ತಿದ್ದಾರೆ. ಇದು ಅರಣ್ಯ ಪ್ರದೇಶದಲ್ಲಿ ನಡೆದ ಮೊದಲ ಪ್ರಕರಣ ಏನಲ್ಲ. ವಡಕೆಹಳ್ಳದ ನಿವಾಸಿಗಳು ಹೇಳುವ ಪ್ರಕಾರ, ಆರು ತಿಂಗಳ ಹಿಂದೆ ನಾಯಿಯೊಂದು ಇದೇ ರೀತಿ ಮೃತಪಟ್ಟಿತ್ತು. ಹಾಗಾಗಿ ಈ ಭಾಗದಲ್ಲಿ ಇಂತಹ ಪ್ರಕರಣಗಳು ಆಗಾಗ ನಡೆಯುತ್ತಿವೆ. ಗಸ್ತು ತಿರುಗುವ ಸಿಬ್ಬಂದಿಗೆ ಇದರ ಬಗ್ಗೆ ಮಾಹಿತಿ ಇರಲಿಲ್ಲವೇ? ಅಥವಾ ಸಿಕ್ಕಿದರೂ ಮೇಲಧಿಕಾರಿಗಳಿಗೆ ತಿಳಿಸಿರಲಿಲ್ಲವೇ ಎಂಬ ಅನುಮಾನವೂ ವ್ಯಕ್ತವಾಗಿದೆ.

ADVERTISEMENT

ಶೋಧ ಕಾರ್ಯಾಚರಣೆ

ಈಗ ಎರಡು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ವನ್ಯಧಾಮದ ಅಧಿಕಾರಿಗಳು, ಕಾಡಂಚಿನಲ್ಲಿ ಸ್ಫೋಟಕ ಅಥವಾ ಸಿಡಿಮದ್ದು ತಯಾರಿಸುವವರನ್ನು ಹಾಗೂ ಬಳಕೆ ಮಾಡುವವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ಆರಂಭಿಸಿದ್ದಾರೆ.

ವಡಕೆಹಳ್ಳ, ತೋಕರೆ ಸೇರಿದಂತೆ ಮಲೆಮಹದೇಶ್ವರ ಬೆಟ್ಟ ಹಾಗೂ ರಾಮಾಪುರ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿರುವ ಅರಣ್ಯದಂಚಿನಲ್ಲಿ ವಲಯ ಅರಣ್ಯಾಧಿಕಾರಿ ಹಾಗೂ ತಳಮಟ್ಟದ ಸಿಬ್ಬಂದಿ ಮೂರು ದಿನಗಳಿಂದ ಗಸ್ತು ತಿರುಗುವುದರ ಜೊತೆಗೆ ಬೇರೆ ಎಲ್ಲಿಯಾದರೂ ಸ್ಫೋಟಕಗಳನ್ನು ಇಟ್ಟಿದ್ದಾರೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ.

ಬೆಳೆ ರಕ್ಷಣೆಗಾಗಿ?: ಸಿಡಿಮದ್ದು ಬಳಕೆಯ ಬಗ್ಗೆ ಅರಣ್ಯ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ವನ್ಯಜೀವಿಗಳನ್ನು ಬೇಟೆಯಾಡುವ ಉದ್ದೇಶದಿಂದ ಈ ರೀತಿ ಮಾಡುತ್ತಿಲ್ಲ; ಬದಲಿಗೆ ಕಾಡು ಹಂದಿಗಳ ಉಪಟಳ ತಾಳಲಾರದೆ ಸ್ಥಳೀಯರೇ, ಅವುಗಳನ್ನು ಕೊಲ್ಲುವುದಕ್ಕಾಗಿ ಆಹಾರದಲ್ಲಿ ಸಿಡಿಮದ್ದು ಇಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

‘ಇಂತಹ ಕೃತ್ಯಗಳಿಂದಾಗಿ ಜಾನುವಾರುಗಳು ಸಾಯುತ್ತಿವೆ. ಈ ಬಗ್ಗೆ, ಅರಣ್ಯ ಇಲಾಖೆ ತನಿಖೆ ನಡೆಸಿ ಸ್ಫೋಟಕಗಳನ್ನು ಬಳಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂಬುದು ಕಾಡಂಚಿನ ಗ್ರಾಮಗಳ ಜನರ ಒತ್ತಾಯ.

ಸ್ಥಳೀಯರು ಮಾಹಿತಿ ನೀಡಬೇಕು: ಡಿಸಿಎಫ್‌

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ವಿ.ಏಡುಕುಂಡಲು, ‘ಈಗ ನಡೆದಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಡಿಮದ್ದು ಎಲ್ಲಿಂದ ಬಂದಿದೆ? ಯಾರಿಗೆ ಬಂದಿದೆ? ಅದನ್ನು ಅರಣ್ಯದಂಚಿನಲ್ಲಿ ಇಟ್ಟವರು ಯಾರು? ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ಹೇಳಿದರು.

‘ಎರಡು ವಲಯಗಳಲ್ಲಿ ಮೂರು ದಿನಗಳಿಂದ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ, ಅರಣ್ಯದೊಳಗೆ ಇದುವರೆಗೆ ಸ್ಫೋಟಕ/ಸಿಡಿಮದ್ದು ಪತ್ತೆಯಾಗಿಲ್ಲ. ಈಗ ಸಂಭವಿಸಿರುವ ಘಟನೆಗಳು ಕೂಡ ಜಮೀನಿನಲ್ಲಿ ನಡೆದಿವೆ’ ಎಂದು ಅವರು ಮಾಹಿತಿ ನೀಡಿದರು.

‘ವನ್ಯಪ್ರಾಣಿಗಳು ಜಮೀನಿಗೆ ಬಂದರೆ ಗ್ರಾಮಸ್ಥರು ಕೂಡಲೇ ಇಲಾಖೆಗೆ ಮಾಹಿತಿ ನೀಡಬೇಕು. ಸಿಡಿಮದ್ದು ಇಡುವುದು ಸರಿಯಲ್ಲ. ಅರಣ್ಯದಂಚಿನಲ್ಲಿ ಸಿಡಿಮದ್ದು ಹಾಗೂ ಇನ್ನಿತರ ಸ್ಫೋಟಕ ವಸ್ತುಗಳನ್ನು ಇಡುವವರ ಬಗ್ಗೆ ಸ್ಥಳೀಯ ರೈತರು ನಮಗೆ ಮಾಹಿತಿ ನೀಡುವ ಮೂಲಕ ಕಾರ್ಯಾಚರಣೆಗೆ ಸ್ಪಂದಿಸಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.