ADVERTISEMENT

ಮಹದೇಶ್ವರ ಬೆಟ್ಟ: 25 ದಿನಗಳಲ್ಲಿ ದಾಖಲೆಯ ₹ 3.13 ಕೋಟಿ ಕಾಣಿಕೆ ಸಂಗ್ರಹ

ಮಾದಪ್ಪನ ಹುಂಡಿಯಲ್ಲಿ 3.13 ಕೋಟಿ ಸಂಗ್ರಹ; ತಿಂಗಳೊಂದರಲ್ಲಿ ಹುಂಡಿಗಳಿಂದ ಸಂಗ್ರಹವಾದ ಅತಿ ಹೆಚ್ಚಿನ ಮೊತ್ತ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 5:31 IST
Last Updated 27 ಮಾರ್ಚ್ 2024, 5:31 IST
   

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಹುಂಡಿಗಳಲ್ಲಿ, 25 ದಿನಗಳ ಅವಧಿಯಲ್ಲಿ ದಾಖಲೆಯ ₹ 3.13 ಕೋಟಿ ಕಾಣಿಕೆ ಸಂಗ್ರಹವಾಗಿದೆ.

ದೇವಾಲಯದ ಇತಿಹಾಸದಲ್ಲಿ 30 ದಿನಗಳ ಒಳಗಾಗಿ ಸಂಗ್ರಹವಾಗಿರುವ ಗರಿಷ್ಠ ಹುಂಡಿ ಕಾಣಿಕೆ ಮೊತ್ತ ಇದಾಗಿದೆ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ₹ 2.90 ಕೋಟಿ ಸಂಗ್ರಹವಾಗಿದ್ದು ಈವರೆಗಿನ ದಾಖಲೆಯಾಗಿತ್ತು.

ಮಂಗಳವಾರ ಬೆಳಿಗ್ಗೆಯಿಂದ ತಡರಾತ್ರಿವರೆಗೂ 10.30ರವರೆಗೂ ಹುಂಡಿ ಹಣ ಎಣಿಕೆ ಕಾರ್ಯ ನಡೆಯಿತು. ಮಾರ್ಚ್ 1ರಿಂದ 25ರವರೆಗಿನ ಅವಧಿಗೆ ಸಂಗ್ರಹವಾಗಿರುವ ಕಾಣಿಕೆಯ ಹಣವನ್ನು ಎಣಿಸಲಾಯಿತು.

ADVERTISEMENT

ನೋಟುಗಳ ರೂಪದಲ್ಲಿ ₹ 2,98,41,802 ಮತ್ತು ನಾಣ್ಯಗಳ ರೂಪದಲ್ಲಿ ₹ 14,59,129 ಸೇರಿದಂತೆ ಒಟ್ಟು ₹ 3,13,00,931 ಹಣ ಸಂಗ್ರಹವಾಗಿದೆ.

ಇದರೊಂದಿಗೆ 47 ಗ್ರಾಂ ಚಿನ್ನ, 2.300 ಕೆಜಿ ಬೆಳ್ಳಿಯನ್ನು ಭಕ್ತರು ಕಾಣಿಕೆ ರೂಪದಲ್ಲಿ ಹುಂಡಿಗಳಿಗೆ ಹಾಕಿದ್ದಾರೆ.

ಮಾರ್ಚ್ 7ರಿಂದ 11ರವರೆಗೆ ಬೆಟ್ಟದಲ್ಲಿ ಮಹಾಶಿವರಾತ್ರಿ ನಡೆದಿತ್ತು. ವಾರದ ಅವಧಿಯಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದರು. ಹೀಗಾಗಿ ಹೆಚ್ಚು ಆದಾಯ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಪ್ರಾಧಿಕಾರದ ಕಾರ್ಯದರ್ಶಿ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ, ಹಣಕಾಸು ಮತ್ತು ಲೆಕ್ಕಪತ್ರ ಸಲಹೆಗಾರ ನಾಗೇಶ್, ಜಿಲ್ಲಾಧಿಕಾರಿ ಕಚೇರಿಯ ಮುಜರಾಯಿ ಶಾಖೆಯ ಶ್ವೇತಾ, ಪ್ರಾಧಿಕಾರದ ಸಿಬ್ಬಂದಿ ಎಣಿಕೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.