ADVERTISEMENT

ಕೋವಿಡ್ 19 ಲಾಕ್‌ಡೌನ್‌ ತೆರವಾಗುತ್ತಲೇ ಬಂಡೀಪುರ ಸಫಾರಿಗೆ ಮುಗಿ ಬಿದ್ದ ಜನ

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 16:00 IST
Last Updated 11 ಜುಲೈ 2021, 16:00 IST
ಬಂಡೀಪುರದಲ್ಲಿ ಸಫಾರಿಗಾಗಿ ಟಿಕೆಟ್‌ ಖರೀದಿಸುವುದರಲ್ಲಿ ನಿರತರಾಗಿದ್ದ ಪ್ರವಾಸಿಗರು
ಬಂಡೀಪುರದಲ್ಲಿ ಸಫಾರಿಗಾಗಿ ಟಿಕೆಟ್‌ ಖರೀದಿಸುವುದರಲ್ಲಿ ನಿರತರಾಗಿದ್ದ ಪ್ರವಾಸಿಗರು   

ಗುಂಡ್ಲುಪೇಟೆ: ಕೋವಿಡ್ 19 ಲಾಕ್‌ಡೌನ್‌ ತೆರವಾದ ನಂತರ ಇದೇ ಮೊದಲ ಬಾರಿಗೆ ಶನಿವಾರ ಮತ್ತು ಭಾನುವಾರ ಪ್ರವಾಸಿಗರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ಹಾಗೂ ಹಿಮವದ್‌ಗೋಪಾಲಸ್ವಾಮಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ.

ಎರಡು ದಿನಗಳಲ್ಲಿ 500ಕ್ಕೂ ಹೆಚ್ಚು ಜನರು ಸಫಾರಿಗೆ ಆಗಮಿಸಿದ್ದರು. ಎರಡು ತಿಂಗಳಿನಿಂದ ಶೆಡ್‌ನಲ್ಲಿ ನಿಂತಿದ್ದ ಎಲ್ಲ ಸಫಾರಿ ವಾಹನಗಳು ಶನಿವಾರ ಹಾಗೂ ಭಾನುವಾರ ಭರ್ತಿಯಾದವು.

ಸಫಾರಿಗೆ ತೆರಳಿದ ಪ್ರವಾಸಿಗರಿಗೆ ಕಲ್ಕಟ್ಟ ಹಳ್ಳ ಹಾಗೂ ಟೈಗರ್ ರಸ್ತೆಯಲ್ಲಿ ಹುಲಿ ಹಾಗೂ ಆನೆಗಳ ಹಿಂಡು, ಚಿರತೆ, ಕಾಡಮ್ಮೆಗಳ ದರ್ಶನವಾಗಿದೆ.

ADVERTISEMENT

ಹಲವು ದಿನಗಳಿಂದ ಪ್ರವಾಸಿಗರು ಇಲ್ಲದೆ ಬಿಕೋ ಎನ್ನುತ್ತಿದ್ದ ಜಂಗಲ್ ಲಾಡ್ಜ್ ಮತ್ತು ಖಾಸಗಿ ರೆಸಾರ್ಟ್‌ಗಳು ಕೂಡ ತುಂಬಿದ್ದವು.

‘ಪ್ರವಾಸಿಗರನ್ನು ನಂಬಿ ಜೀವನ ಮಾಡುವ ಎಳನೀರು, ಬೇಕರಿ, ಟೀ ಕಾಫಿ ಅಂಗಡಿಗಳಿಗೂ ಭಾನುವಾರ ಒಳ್ಳೆಯ ವ್ಯಾಪಾರ ಆಗಿದೆ. ಎರಡು ತಿಂಗಳಿನಿಂದ ವ್ಯಾಪಾರ ಇಲ್ಲದೆ ಬೇಸರವಾಗಿತ್ತು. ಲಾಕ್ ಡೌನ್ ಓಪನ್ ಆದ ಬಳಿಕ ವಾಹನಗಳ ಓಡಾಟ ಹೆಚ್ಚಿರುವುದರಿಂದ ಉತ್ತಮ ವ್ಯಾಪಾರ ಆಗುತ್ತಿದೆ’ ಎಂದು ಎಳನೀರು ವ್ಯಾಪಾರಿ ಮಹೇಶ್ ತಿಳಿಸಿದರು.

ಲಾಕ್‌ಡೌನ್‌ ತೆರವಾದ ನಂತರ ಬರುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಸಫಾರಿಯಲ್ಲಿ ಪ್ರಾಣಿಗಳ ದರ್ಶನವೂ ಆಗುತ್ತಿದೆ ಎಂದು ಹುಲಿ ಯೋಜನೆ ನಿರ್ದೇಶಕ ಎಸ್.ಆರ್.‌ನಟೇಶ್ ಅವರು ಹೇಳಿದರು.

ನೆರೆಯ ತಮಿಳುನಾಡಿನಲ್ಲಿ ಲಾಕ್‌ಡೌನ್‌ ಮುಂದುವರೆಸಿರುವುದರಿಂದ ತಮಿಳುನಾಡು ಪ್ರವೇಶ ಪಡೆಯಬೇಕಾದರೆ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಮತ್ತು ಇ– ಪಾಸ್ ಕಡ್ಡಾಯ ಮಾಡಲಾಗಿದೆ.

‘ಆನ್‌ಲೈನ್‌ನಲ್ಲಿ ಇ–ಪಾಸ್ ಪಡೆಯಲು ಮಾಹಿತಿ ನೋಂದಣಿ ಆದ ನೀಡಿರುವ ಮಾಹಿತಿ ಸೂಕ್ತವಾಗಿದೆ ಎಂದು ಪರಿಶೀಲನೆ ಮಾಡಿ ಅನುಮತಿ ನೀಡಲಾಗುತ್ತದೆ. ಇಲ್ಲದಿದ್ದರೆ ಅನುಮತಿ ನಿರಾಕರಿಸಲಾಗುತ್ತದೆ. ಆದ್ದರಿಂದ ತಕ್ಷಣವೇ ಪಾಸ್ ದೊರೆಯುದಿಲ್ಲ’ ಎಂಬದು ಅನೇಕ ಪ್ರವಾಸಿಗರ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.