ADVERTISEMENT

ಕ್ಷೇತ್ರ ಇಲ್ಲದ ಸಿದ್ದರಾಮಯ್ಯ ಸ್ಥಿತಿ ಶೋಚನೀಯ: ಶ್ರೀನಿವಾಸ ಪ್ರಸಾದ್ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 10:50 IST
Last Updated 20 ಮಾರ್ಚ್ 2023, 10:50 IST
ವಿ.ಶ್ರೀನಿವಾಸ ಪ್ರಸಾದ್ (ಸಂಗ್ರಹ ಚಿತ್ರ)
ವಿ.ಶ್ರೀನಿವಾಸ ಪ್ರಸಾದ್ (ಸಂಗ್ರಹ ಚಿತ್ರ)   

ಚಾಮರಾಜನಗರ: 'ತನ್ನದು ಎಂದು ಹೇಳಿಕೊಳ್ಳಲು ಕ್ಷೇತ್ರ ಇಲ್ಲದೆ ಪರದಾಡುತ್ತಿರುವ ಸಿದ್ದರಾಮಯ್ಯ ಸ್ಥಿತಿ ಶೋಚನೀಯವಾಗಿದೆ. ಅವರಿಗೆ ನಾಚಿಕೆಯಾಗಬೇಕು' ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಸೋಮವಾರ ಟೀಕಿಸಿದರು.

ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಬಗ್ಗೆ ಯಳಂದೂರು ತಾಲ್ಲೂಕಿನ ಮಾಂಬಳ್ಳಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ದೊಡ್ಡ ನಾಯಕ. ಸುದೀರ್ಘ ಕಾಲದಿಂದ ರಾಜಕೀಯ ಮಾಡಿದವರು. ಸಚಿವರಾಗಿ, ಮುಖ್ಯಮಂತ್ರಿಯಾಗಿ, ಈಗ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಒಂದು ಕ್ಷೇತ್ರ ಹೇಳಿಕೊಳ್ಳಲು ಆಗುತ್ತಿಲ್ಲ. ಇಷ್ಟು ವರ್ಷ ರಾಜಕೀಯ ಮಾಡಿ ಈ ಸ್ಥಿತಿ ಬೇಕಾ' ಎಂದು ವ್ಯಂಗ್ಯವಾಡಿದರು.

'ಚಾಮುಂಡೇಶ್ವರಿ ಯಲ್ಲಿ 36 ಸಾವಿರ ಮತಗಳಿಂದ ಸೋತರು. ಬಾದಾಮಿಲಿ ಕೇವಲ 1,500 ಮತಗಳಿಂದ ಗುಟುಕು ನೀರು ರೀತಿ ಗೆದ್ದು ಬಂದರು. ಅವರ ಪರಿಸ್ಥಿತಿ ಎಷ್ಟು ಶೋಚನೀಯವಾಗಿದೆ' ಎಂದರು.

ADVERTISEMENT

'ಅಭ್ಯರ್ಥಿಗಳ ಮೊದಲನೇ ಪಟ್ಟಿಯಲ್ಲಿ ಅವರ ಹೆಸರು ಇರಬೇಕಿತ್ರು. ಇನ್ನು ಎರಡು ದಿನ ಬಿಟ್ಟು ರಾಹುಲ್ ಗಾಂಧಿ ಭೇಟಿ ಮಾಡಲು ಹೋಗುತ್ತಿದ್ದಾರೆ. ಎಲ್ಲಿ ನಿಲ್ಲಲಿ ಸ್ವಾಮಿ ಎಂದು ರಾಹುಲ್ ಗಾಂಧಿ ಕೇಳಿ ಪರದಾಡುತ್ತಿದ್ದಾರೆ. ರಾಹುಲ್ ಕ್ಷೇತ್ರ ಹುಡುಕಿ ಕೊಡಬೇಕಿದೆ' ಎಂದು ಟೀಕಿಸಿದರು.

'ಸೋಲಿನ ಭಯದಿಂದ ಸಿದ್ದರಾಮಯ್ಯ ಕ್ಷೇತ್ರ ಬದಲಾಯಿಸುತ್ತಿದ್ದಾರೆಯೇ ಎಂದು ಕೇಳಿದ್ದಕ್ಕೆ, 'ಅದಕ್ಕೆ ನಮಗೂ ಸಂಬಂಧವಿಲ್ಲ. ಅವರು ಎಲ್ಲಿಯಾದರೂ ನಿಲ್ಲಲಿ. ಅಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಹಾಕುವುದು ನಮ್ಮ ಕೆಲಸ' ಎಂದು ಉತ್ತರಿಸಿದರು.

ಸೋಮಣ್ಣ ಉಸ್ತುವಾರಿಯಲ್ಲಿ ಚುನಾವಣೆ:
ಸಚಿವ ಸೋಮಣ್ಣ ಕಾಂಗ್ರೆಸ್ ಸೇರುತ್ತಾರಾ ಎಂದು ಪ್ರಶ್ನಿಸಿದ್ದಕ್ಕೆ, 'ಅವರು ಎಲ್ಲೂ ಹೋಗುವುದಿಲ್ಲ. ಈಗ ಎಲ್ಲವೂ ಮುಗಿದಿದೆ. ದೆಹಲಿಯಲ್ಲಿ ಅಮಿತ್ ಶಾ ಮನೆಯಲ್ಲೇ ಚರ್ಚೆ ಆಗಿದೆ. ಜಿಲ್ಲೆಯ ಚುನಾವಣಾ ಉಸ್ತುವಾರಿಯನ್ನೂ ಅವರಿಗೆ ಕೊಟ್ಟಿದ್ದಾರೆ. ನಾವೆಲ್ಲ ಚರ್ಚೆ ಮಾಡಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ. ಜಿಲ್ಲೆಯ‌ ನಾಲ್ಕೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ' ಎಂದು ಉತ್ತರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.