ADVERTISEMENT

ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ 24ರಂದು

ಕಬ್ಬಿಗೆ ಏಕರೂಪ ದರ, ಮೆಕ್ಕೆಜೋಳ ಕ್ವಿಂಟಲ್‌ಗೆ ₹ 3,000 ದರ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 4:30 IST
Last Updated 23 ನವೆಂಬರ್ 2025, 4:30 IST

ಚಾಮರಾಜನಗರ: ಕಬ್ಬಿಗೆ ಏಕರೂಪ ದರ ನಿಗದಿಗೊಳಿಸಬೇಕು, ಮೆಕ್ಕೆಜೋಳ ಹಾಗೂ ರಾಗಿ ಖರೀದಿ ಕೇಂದ್ರ ತೆರೆಯಬೇಕು ಸೇರಿದಂತೆ ರೈತರ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನ.24ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘದ ಮುಖಂಡ ಹೊ‌ನ್ನೂರು ಪ್ರಕಾಶ್ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ.ಜಡ್ಡುಗಟ್ಟಿರುವ ಆಡಳಿತ ವ್ಯವಸ್ಥೆಗೆ ಬಿಸಿ ಮುಟ್ಟಿಸಲು ಹೋರಾಟ ಅನಿವಾರ್ಯವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳಿಂದ ರೈತರು ಹೋರಾಟಕ್ಕೆ ಧುಮುಕಲಿದ್ದು 24ರಂದು ಬೈಕ್ ರ‍್ಯಾಲಿ ಮೂಲಕ ಆಗಮಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದರು.

ಪ್ರತಿಭಟನಾ ಮೆರವಣಿಗೆ, ಬೈಕ್ ರ‍್ಯಾಲಿ ಹಾಗೂ ಮುತ್ತಿಗೆಯಲ್ಲಿ ರೈತ ಸಂಘಟನೆಗಳು, ಮುಖಂಡರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಅಂದು ಬೆಳಿಗ್ಗೆ ತಾಲ್ಲೂಕು ಕೇಂದ್ರಗಳಿಂದ ಬೈಕ್ ರ‍್ಯಾಲಿ ಹೊರಟು ಜಿಲ್ಲೆಯ ನಾಲ್ಕು ದಿಕ್ಕುಗಳಿಂದ ಜಿಲ್ಲಾಡಳಿತ ಭವನ ಪ್ರವೇಶಿಸಬೇಕು ಎಂದು ಮುಖಂಡರಿಗೆ ಸೂಚನೆ ನೀಡಿದರು.

ADVERTISEMENT

‘ರಾಜ್ಯ ಸರ್ಕಾರ ಘೊಷಣೆ ಮಾಡಿರುವಂತೆ ಬೆಂಬಲ ಬೆಲೆ ಯೋಜನೆಯಡಿ ಎಪಿಎಂಸಿಗಳಲ್ಲಿ ಮೆಕ್ಕೆಜೋಳ, ರಾಗಿ, ಜೋಳ ಖರೀದಿ ಕೇಂದ್ರಗಳನ್ನು  ತೆರೆಯಬೇಕು, ಕ್ವಿಂಟಲ್‌ ಮೆಕ್ಕೆಜೋಳಕ್ಕೆ ₹ 2,400 ಬೆಂಬಲ ಬೆಲೆಯ ಜೊತೆಗೆ ಹೆಚ್ಚುವರಿಯಾಗಿ ₹ 600 ಸೇರಿಸಿ ₹ 3,000 ನೀಡಬೇಕು. ಗ್ರಾಮೀಣ ಭಾಗಗಳ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕು, ಅಟ್ಟುಗೂಳಿಪುರ ಬಳಿಯ ಟೋಲ್‌ನಲ್ಲಿ ಸ್ಥಳೀಯರಿಗೆ ಟೋಲ್ ಶುಲ್ಕದಲ್ಲಿ ವಿನಾಯಿತಿ ನೀಡಬೇಕು. ಅರಿಶಿನ ಖರೀದಿ ಕೇಂದ್ರ ತೆರೆಯಬೇಕು, ಗ್ರಾಮ ಪಂಚಾಯಿತಿಗಳಲ್ಲಿ ರೈತರಿಗೆ ಇ–ಸ್ವತ್ತು ವಿತರಿಸಬೇಕು’ ಎಂದು ಒತ್ತಾಯಿಸಿದರು.

‘ಹಾಲು ಉತ್ಪಾದಕರ ಸಂಘಗಳು ಹೈನುಗಾರರಿಗೆ 10 ದಿನಗಳಿಗೊಮ್ಮೆ ಸಕಾಲದಲ್ಲಿ ಹಣ ಪಾವತಿಸಬೇಕು. ಎಪಿಎಂಸಿ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿ ತಡೆಯಬೇಕು, ರೈತರಿಂದ ಕಮಿಷನ್ ಪಡೆಯಬಾರದು. ಗ್ರಾಮ ಪಂಚಾಯಿತಿಗಳಲ್ಲಿ ಇ ಸ್ವತ್ತಿಗೆ ಲಂಚ ಪಡೆಯಲಾಗುತ್ತಿದ್ದು ಕ್ರಮ ಜರುಗಿಸಬೇಕು, ಮಾನವ ಪ್ರಾಣಿ ಸಂಘರ್ಷದಿಂದ ಬೆಳೆ ಹಾನಿಯಾದರೆ ವೈಜ್ಞಾನಿಕ ಬೆಳೆನಷ್ಟ ಪರಿಹಾರ ನೀಡಬೇಕು. ಕಬ್ಬಿನ ಕಾರ್ಖಾನೆಗಳು ಉಪ ಉತ್ಪನ್ನಗಳ ಲಾಭವನ್ನು ರೈತರೊಂದಿಗೆ ಹಂಚಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಹನೂರು ಚಂಗಡಿ ಕರಿಯಪ್ಪ , ಮಾದಪ್ಪ, ಕಲ್ಪುರ ಪಾಪು, ವೀರಭದ್ರ ಸ್ವಾಮಿ, ಬೆಟ್ಟದಪುರ ಮಹದೇವಸ್ವಾಮಿ, ಜಗದೀಶ, ಮಹಾದೇವ ಪ್ರಸಾದ್, ಶಶಿ, ಮಾಯಿ, ಪಾಪಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.