ADVERTISEMENT

ಬಿಎಸ್‌ಪಿಗೆ ಸಾಮೂಹಿಕ ರಾಜೀನಾಮೆ

ಪಕ್ಷದಿಂದ ಉಚ್ಚಾಟನೆಗೊಂಡಿರುವ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಬೆಂಬಲಿಗರಿಂದ ಸಭೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 15:04 IST
Last Updated 4 ಸೆಪ್ಟೆಂಬರ್ 2019, 15:04 IST
ಚಾಮರಾಜನಗರದ ವರ್ತಕರ ಭವನದಲ್ಲಿ ನಡೆದ ಸಭೆಯಲ್ಲಿ ಎನ್‌.ಮಹೇಶ್‌ ಬೆಂಬಲಿಗರು ರಾಜೀನಾಮೆ ಪತ್ರವನ್ನು ಪ್ರದರ್ಶಿಸಿದರು
ಚಾಮರಾಜನಗರದ ವರ್ತಕರ ಭವನದಲ್ಲಿ ನಡೆದ ಸಭೆಯಲ್ಲಿ ಎನ್‌.ಮಹೇಶ್‌ ಬೆಂಬಲಿಗರು ರಾಜೀನಾಮೆ ಪತ್ರವನ್ನು ಪ್ರದರ್ಶಿಸಿದರು   

ಚಾಮರಾಜನಗರ: ಬಿಎಸ್‌ಪಿಯಿಂದ ಉಚ್ಚಾಟನೆಗೊಂಡಿರುವ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರ ಬೆಂಬಲಿಗರು ಬುಧವಾರ ನಗರದಲ್ಲಿ ಸಭೆ ಸೇರಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

‘ಮಹೇಶ್‌ ಅವರನ್ನು ಉಚ್ಚಾಟನೆ ಮಾಡುವ ತೀರ್ಮಾನವನ್ನು ಬಿಎಸ್‌ಪಿ ಏಕಪಕ್ಷೀಯವಾಗಿ ಮಾಡಿದೆ. ಆಗಿರುವ ತಪ್ಪನ್ನು ಪಕ್ಷದ ನಾಯಕತ್ವ ಸರಿ ಮಾಡಿಲ್ಲ. ಹಾಗಾಗಿ ಮನನೊಂದು ರಾಜೀನಾಮೆ ನೀಡುತ್ತಿದ್ದೇವೆ. ಮುಂದೆ ಎನ್‌.ಮಹೇಶ್ ಅವರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ’ ಎಂದು ಅವರು ಘೋಷಿಸಿದರು.

ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಾದೇಶ್‌ ಉಪ್ಪಾರ್‌ ಅವರು, ‘ಮಾಯಾವತಿ ಅವರು ಲಖನೌದಲ್ಲಿ ಇತ್ತೀಚೆಗೆ ನಡೆದ ಪಕ್ಷದ ಕಾರ್ಯಕಾರಿಣಿಗೆ ಎನ್‌.ಮಹೇಶ್‌ ಅವರನ್ನು ಕರೆದು ಮಾತುಕತೆ ನಡೆಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಅದು ಆಗಿಲ್ಲ. 20 ವರ್ಷಗಳಿಂದ ನಾವು ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದೇವೆ. ಮಹೇಶ್‌ ಅವರೊಂದಿಗೆ ಪಕ್ಷ ಕಟ್ಟಿದ್ದೇವೆ. ಈಗ ಮನನೊಂದು ರಾಜೀನಾಮೆ ಕೊಡುತ್ತಿದ್ದೇವೆ. ಮಹೇಶ್‌ ಅವರು ಎಲ್ಲ ಬೆಂಬಲಿಗರೊಂದಿಗೆ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದು ಹೇಳಿದರು.

ADVERTISEMENT

ಪಕ್ಷದೊಳಗಿನ ಮಸಲತ್ತು: ಪಕ್ಷದ ಕೊಳ್ಳೇಗಾಲ ಕ್ಷೇತ್ರ ಉಸ್ತುವಾರಿಯಾಗಿದ್ದ ಕೆಂಪನಪಾಳ್ಯ ಸಿದ್ದರಾಜು ಮಾತನಾಡಿ, ‘ಕರ್ನಾಟಕದಲ್ಲಿ 20 ವರ್ಷಗಳಿಂದ ಬಿಎಸ್‌ಪಿಯನ್ನು ಕಟ್ಟಿದವರು ಯಾರಾದರೂ ಇದ್ದರೆ ಅದು ಎನ್‌.ಮಹೇಶ್‌ ಅವರು. ಅಂತಹವರನ್ನು ಏಕಪಕ್ಷೀಯವಾಗಿ ಯಾವುದೇ ವಿವರಣೆ ಕೇಳದೆ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಇದರ ಹಿಂದೆ, ರಾಜ್ಯ ಸಮಿತಿಯಲ್ಲಿ ಇದ್ದವರ ಕೈವಾಡ ಇದೆ’ ಎಂದು ದೂರಿದರು.

‘ಇದೀಗ ನಾವು 100ರಿಂದ 150 ಮಂದಿ ಸಾಂಕೇತಿಕವಾಗಿ ರಾಜೀನಾಮೆ ನೀಡಿದ್ದೇವೆ. ಇದೇ ರೀತಿಯಲ್ಲಿ ಮೈಸೂರು ವಿಭಾಗದಲ್ಲಿ ಬರುವ ಎಲ್ಲ ಜಿಲ್ಲೆಗಳಲ್ಲಿ ಎನ್‌.ಮಹೇಶ್‌ ಬೆಂಬಲಿಗರು ರಾಜೀನಾಮೆ ನೀಡಿದ್ದಾರೆ. ಮುಂದಿನ ಹಂತದಲ್ಲಿ ಇನ್ನಷ್ಟು ಕಾರ್ಯಕರ್ತರು ರಾಜೀನಾಮೆ ಕೊಡುತ್ತಾರೆ. ನಾವು ಮಹೇಶ್‌ ಅವರ ಬೆಂಬಲಕ್ಕೆ ಸದಾ ಇದ್ದೇವೆ’ ಎಂದು ಹೇಳಿದರು.

ಸಭೆಯಲ್ಲಿ ಪಕ್ಷದ ಚಾಮರಾಜನಗರ ತಾಲ್ಲೂಕು ಘಟಕದ ಅಧ್ಯಕ್ಷರಾಗಿದ್ದ ಆಲೂರು ಮಲ್ಲು, ಗುಂಡ್ಲುಪೇಟೆಯ ಸಂಪತ್‌, ಕೊಳ್ಳೇಗಾಲದ ಶಿವನಂಜಪ್ಪ ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಭಾಗಹಿಸಿದ್ದರು.

ಸಾಮೂಹಿಕ ರಾಜೀನಾಮೆ ಪತ್ರದಲ್ಲಿ ಏನಿದೆ?

* ರಾಜ್ಯ ಉಸ್ತುವಾರಿಗಳಾಗಿ ನಿಯೋಜನೆಗೊಂಡವರು ಪಕ್ಷ ನಿಷ್ಠೆಯಿಂದ ಕಾರ್ಯ ನಿರ್ವಹಿಸಿಲ್ಲ. ಗಾಂಧಿ ಆಜಾದ್‌ ಮತ್ತು ಆರ್ಯನ್‌ ಅವರನ್ನು ಬಿಟ್ಟು ಉಳಿದವರು ರಾಜ್ಯದ ಪರಿಸ್ಥಿತಿಯನ್ನು ಅರಿತುಕೊಳ್ಳುವಲ್ಲಿ ವಿಫಲರಾಗಿ ಪಕ್ಷದ ಸಂಘಟನೆಯನ್ನು ಹಾಳು ಮಾಡಿದ್ದಾರೆ.

* ರಾಜ್ಯ ಸಭಾ ಸದಸ್ಯ ಅಶೋಕ್‌ ಸಿದ್ಧಾರ್ಥ ಹಾಗೂ ಉಸ್ತುವಾರಿಯಾಗಿ ನೇಮಕಗೊಂಡಿರುವ ಎಂ.ಎಲ್‌.ತೋಮರ್‌ ಅವರು ಗುಂಪುಗಾರಿಕೆ ಮಾಡಿ ಪಕ್ಷವನ್ನು ಛಿದ್ರ ಮಾಡಿದ್ದಾರೆ.

* 2004ರಿಂದ 2019ರ ವರೆಗೆ ರಾಜ್ಯದಲ್ಲಿ ನಡೆದ ವಿವಿಧ ಚುನಾವಣೆಗಳಲ್ಲಿ ಪಕ್ಷ ಪಡೆದ ಮತಗಳಿಕೆಯ ವಿವರಗಳನ್ನು ವಿಶ್ಲೇಷಣೆ ಮಾಡಿಲ್ಲ. ಉತ್ತಮ ಸಾಧನೆ ಮಾಡಿದ ತಾಲ್ಲೂಕು, ಜಿಲ್ಲೆ, ವಲಯಗಳ ಬಗ್ಗೆ ವಿಶ್ಲೇಷಣೆ ಮತ್ತು ಪ್ರಶಂಸೆಯೂ ಮಾಡಿಲ್ಲ. ಪಕ್ಷವನ್ನು ವಿಸ್ತರಿಸುವ ಕಡೆಗೆ ಗಮನವನ್ನೂ ಕೊಟ್ಟಿಲ್ಲ. ಉತ್ತಮ ಸಂಘಟಕರು ಹಾಗೂ ಸಾಧಕರನ್ನು ನಿರ್ಲಕ್ಷಿಸಲಾಗುತ್ತಿದೆ.

* ಎಂ.ಎಲ್‌.ತೋಮರ್‌ ಅವರು ಮೈಸೂರು ವಲಯದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಮಾಹಿತಿ ನೀಡದೆ ವಲಯದ ಎಲ್ಲ ಸಮಿತಿಗಳನ್ನು ವಿಸರ್ಜಿಸಿದ್ದಾರೆ.

* ಈಗ ಹೊಸದಾಗಿ ರಚನೆ ಮಾಡಿರುವ ರಾಜ್ಯ ಸಮಿತಿ ಸಮಾನ ಮನಸ್ಕರ ಗುಂಪಲ್ಲ. ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿಕಟ್ಟುವ, ಒಡೆದು ಆಳುವ ಮನಸ್ಥಿತಿಯುಳ್ಳ ಗುಂಪು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.