ADVERTISEMENT

ಹೊಂಡ ಗುಂಡಿಗಳ ಕಚ್ಚಾರಸ್ತೆಯಲ್ಲೇ ಸಾಗಬೇಕಾದ ಸಂಕಟ

ಚಾಮರಾಜನಗರ: ಬಡಾವಣೆ ರಸ್ತೆಗಳಿಗೆ ಸಿಗದ ಡಾಂಬರು ಭಾಗ್ಯ, ವಿಳಂಬವಾಗುತ್ತಿದೆ ಕಾಮಗಾರಿ

ರವಿ ಎನ್‌
Published 23 ಜೂನ್ 2019, 19:30 IST
Last Updated 23 ಜೂನ್ 2019, 19:30 IST
ಭ್ರಮರಾಂಬ ಬಡಾವಣೆಯ ರಸ್ತೆಯೊಂದರ ಗುಂಡಿಯಲ್ಲಿ ಮಳೆ ನೀರು ಸಂಗ್ರಹವಾಗಿರುವುದು
ಭ್ರಮರಾಂಬ ಬಡಾವಣೆಯ ರಸ್ತೆಯೊಂದರ ಗುಂಡಿಯಲ್ಲಿ ಮಳೆ ನೀರು ಸಂಗ್ರಹವಾಗಿರುವುದು   

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಕೇಂದ್ರವಾಗಿ 22 ವರ್ಷಗಳೇ ಸಂದಿವೆ. ಆದರೆ, ನಗರದ ಬಹುತೇಕ ಬಡಾವಣೆಗಳಿಗೆ ಇನ್ನೂ ಸುಸಜ್ಜಿತ ರಸ್ತೆಗಳ ಭಾಗ್ಯ ಸಿಕ್ಕಿಲ್ಲ. ಹಳ್ಳಿಗಾಡಿನ ರೀತಿ ಹೊಂಡ ಗುಂಡಿಗಳ ಕಚ್ಚಾರಸ್ತೆಗಳಲ್ಲಿ ಜನರು ಸಂಚರಿಸಬೇಕಾದ ಪರಿಸ್ಥಿತಿ ಇದೆ.

ಚಾಮರಾಜನಗರ ನಗರಸಭೆಯ ವ್ಯಾಪ್ತಿಯಲ್ಲಿರುವ 31 ವಾರ್ಡ್‌ಗಳಲ್ಲಿ ಸುಸಜ್ಜಿತ ರಸ್ತೆಗಳಿರುವುದು ಬೆರಳೆಣಿಕೆಯಷ್ಟು ಮಾತ್ರ.ಭ್ರಮರಾಂಬ, ಶಂಕರಪುರ ಬಡಾವಣೆ, ಹೌಸಿಂಗ್‌ ಬೋರ್ಡ್‌ ಕಾಲೊನಿ, ಕರಿನಂಜನಪುರ ಬಡಾವಣೆ, ಭುಂಜಗೇಶ್ವರ ಬಡಾವಣೆ, ಸೋಮವಾರ ಪೇಟೆ, ಕುವೆಂಪುನಗರ, ಬುದ್ಧನಗರ, ರಾಮಸಮುದ್ರ, ಗಾಳಿಪುರ ಬಡವಾಣೆ... ಹೀಗೆ ಯಾವುದೇ ಬಡಾವಣೆಗಳನ್ನು ಸುತ್ತಾಡಿದರೂ ಕಚ್ಚಾರಸ್ತೆಗಳೇ ಕಾಣುತ್ತವೆ. ಪ್ರಮುಖ ರಸ್ತೆಗಳಾದ ನ್ಯಾಯಾಲಯ ರಸ್ತೆ (ಕಾರಾಗೃಹದ ನಂತರ), ಖಾಸಗಿ ಬಸ್‌ ನಿಲ್ದಾಣಕ್ಕೆ ಹೋಗುವ ರಸ್ತೆಗಳ ಸ್ಥಿತಿಯೂ ಭಿನ್ನವಾಗಿಲ್ಲ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ವಿಶೇಷ ಅನುದಾನ ಮತ್ತು ನಗರೋತ್ಥಾನ ಯೋಜನೆಯ ಅಡಿಯಲ್ಲಿ ಅನುದಾನ ಬಿಡುಗಡೆ ಮಾಡಿದ ನಂತರ, ಕೆಲವು ರಸ್ತೆಗಳು ಡಾಂಬರು ಕಾಣಲು ಆರಂಭಿಸಿವೆ.ನಗರಸಭೆಯ ಅಧಿಕಾರಿಗಳ ಪ್ರಕಾರ, ನಗರದಲ್ಲಿ ನಗರ ವ್ಯಾಪ್ತಿಯಲ್ಲಿ ಶೇ 60ರಷ್ಟು ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ‘ಕೆಲವು ಕಡೆ ಸಣ್ಣಪುಟ್ಟ ಕೆಲಸಗಳು ಆಗಬೇಕು’ ಎಂದು ಹೇಳುತ್ತಾರೆ.

ADVERTISEMENT

ಒಂದು ಮಟ್ಟಿಗೆ ವ್ಯವಸ್ಥಿತವಾಗಿದ್ದ ರಸ್ತೆಗಳು ಒಳಚರಂಡಿ ಕಾಮಗಾರಿ ಆರಂಭವಾದ ನಂತರ ಸಂಪೂರ್ಣವಾಗಿ ಹಾಳಾದವು. ವಿಳಂಬವಾಗಿ ಕಾಮಗಾರಿ ಮುಗಿದ ಬಳಿಕವೂ ನಗರಸಭೆ ತ್ವರಿತವಾಗಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗದಿರುವುದರ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ರಸ್ತೆಯನ್ನು ಅಭಿವೃದ್ಧಿ ಪಡಿಸಿರುವ ಕಡೆಗಳಲ್ಲಿ ಚರಂಡಿ ಕೆಲಸಕ್ಕಾಗಿ ಅಗೆಯಲಾಗಿದೆ. ಇನ್ನೂ ಕೆಲವಡೆ ಕಳಪೆ ಕಾಮಗಾರಿಯಿಂದಾಗಿ ಮಳೆಗೆ ಹೊಸ ರಸ್ತೆಗಳೇ ಗುಂಡಿ ಬಿದ್ದಿವೆ.

‘ಹೊಸ ರಸ್ತೆಯನ್ನು ಅಗೆಯುವುದನ್ನು ತಪ್ಪಿಸುವುದಕ್ಕಾಗಿ, ಒಳಚರಂಡಿ, ಚರಂಡಿ ಕಾಮಗಾರಿಗಳು ಪೂರ್ಣಗೊಂಡ ಬಳಿಕವಷ್ಟೇ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದಾಗಿ ಕೊಂಚ ವಿಳಂಬವಾಗುತ್ತಿದೆ’ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.

ಪೂರ್ಣಗೊಳ್ಳದ ಕಾಮಗಾರಿ: ನಗರೋತ್ಥಾನದ ಅಡಿಯಲ್ಲಿ ಎರಡು ವರ್ಷಗಳ ಹಿಂದೆ ಡಿವೈಎಸ್‌ಪಿ ಕಚೇರಿಯಿಂದ ಕರಿನಂಜನಪುರ ರಸ್ತೆಯಾಗಿ ಸತ್ಯಮಂಗಲ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕಾಂಕ್ರೀಟೀಕರಣ ಮಾಡುವ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಡಿವೈಎಸ್‌ಪಿ ಕಚೇರಿಯಿಂದ ಜಿಲ್ಲಾ ಕಾರಾಗೃಹದವರೆಗೆ ಮಾತ್ರ ಹೊಸ ರಸ್ತೆ ನಿರ್ಮಿಸಲಾಗಿದೆ. ಅಲ್ಲಿಂದ ಮುಂದೆ ಕಾಮಗಾರಿ ನಡೆದಿಲ್ಲ. ಭೂಸ್ವಾಧೀನ ವಿವಾದದಿಂದಾಗಿ ಯೋಜನೆ ನನೆಗುದಿಗೆ ಬಿದ್ದಿದೆ.

‘ಕಾಮಗಾರಿ ಅಪೂರ್ಣವಾಗಿರುವುದರಿಂದ ಕಾರಾಗೃಹದ ಬಳಿಯಿಂದ ಮುಂದಕ್ಕೆ ಸಂಚರಿಸಲು ತೊಂದರೆಯಾಗುತ್ತಿದೆ. ರಸ್ತೆಯಲ್ಲಿ ದೊಡ್ಡ ಗುಂಡಿಗಳು ಬಿದ್ದಿವೆ. ನಗರಸಭೆ ಕನಿಷ್ಠ ಪಕ್ಷ ಹಾಳಾಗಿರುವ ರಸ್ತೆಯನ್ನು ದುರಸ್ತಿ ಮಾಡಲು ಕ್ರಮ ಕೈಗೊಳ್ಳಬೇಕಿತ್ತು. ಈಗಾಗಲೇ ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗಿರುವ ಕಡೆ ಅಳವಡಿಸಲಾಗಿರುವ ಸೋಲಾರ್‌ ದೀಪಗಳು ಕೆಟ್ಟಿವೆ. ಇವೆಲ್ಲವನ್ನೂ ನೋಡುತ್ತಿದ್ದರೆ, ಅಭಿವೃದ್ಧಿಯ ಹೆಸರಿನಲ್ಲಿ ಅನುದಾನ ದುರ್ಬಳಕೆಯಾಗುತ್ತಿದೆಯೇ ಎಂಬ ಅನುಮಾನ ಉಂಟಾಗುತ್ತಿದೆ’ ಎಂದು ಹೌಸಿಂಗ್‌ ಬೋರ್ಡ್‌ ನಿವಾಸಿ ರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕರಿನಂಜನಪುರ ಬಡಾವಣೆಯ ರಸ್ತೆಗಳು ಹಲವು ವರ್ಷಗಳಿಂದ ಹಾಳಾಗಿವೆ. ನಗರಸಭೆ ದುರಸ್ತಿಗೆ ಮುಂದಾಗಿಲ್ಲ. ಪ್ರತಿನಿತ್ಯ ವಾಹನ ಸವಾರರು, ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಇಲ್ಲಿನ ಹೊಸ ಬಡಾವಣೆಗೂ ಮೂಲಸೌಕರ್ಯಗಳಿಲ್ಲ’ ಎಂದು ಕರಿನಂಜನಪುರದ ನಿವಾಸಿ ನಂದೀಶ್‌ ದೂರಿದರು.

ಮ್ಯಾನ್‌ಹೋಲ್‌ ಸಮಸ್ಯೆ: ನಗರದ ಪ್ರಮುಖ ರಸ್ತೆಗಳು ಸೇರಿದಂತೆ ಅಭಿವೃದ್ಧಿ ಪಡಿಸಲಾದ ರಸ್ತೆಗಳಲ್ಲಿರುವ ಮ್ಯಾನ್‌ಹೋಲ್‌ಗಳಿಗೆ ಕಳಪೆಗುಣಮಟ್ಟದ ಮುಚ್ಚಳ ಹಾಕಿರುವುದರಿಂದಲೂ ಸಮಸ್ಯೆ ಉದ್ಭವವಾಗಿದೆ. ಕೆಲವು ಕಡೆಗಳಲ್ಲಿ ಮುಚ್ಚಳವೂ ಹಾನಿಗೀಡಾಗಿದ್ದು, ಮ್ಯಾನ್‌ಹೋಲ್‌ಗಳು ಬಾಯ್ತೆರೆದಿವೆ. ಇದರಿಂದ ಸಾರ್ವಜನಿಕರ ಓಡಾಟ ಕಷ್ಟವಾಗುತ್ತಿದೆ.

ಅವೈಜ್ಞಾನಿಕ ಚರಂಡಿ ಕಾಮಗಾರಿ: ಬಿ.ರಾಚಯ್ಯ ಜೋಡಿ ರಸ್ತೆ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ಚರಂಡಿ ಕೆಲಸವೂ ಸರಿಯಾಗಿ ಆಗಿಲ್ಲ. ಜೋರಾಗಿ ಮಳೆ ಬಂದರೆ ಚರಂಡಿ ನೀರು ರಸ್ತೆಯಲ್ಲೇ ಹರಿಯುವ ಪರಿಸ್ಥಿತಿ ಇದೆ. ನೀರು ಹರಿದ ಕಾರಣದಿಂದ ರಸ್ತೆಗಳೂ ಹಾಳಾಗುತ್ತಿವೆ. ವ್ಯವಸ್ಥಿತ ಚರಂಡಿ ನಿರ್ಮಿಸಲು ಸ್ಥಳೀಯ ಆಡಳಿತ ಕ್ರಮಕೈಗೊಳ್ಳಬೇಕು ಎಂದು ಹೇಳುತ್ತಾರೆ ನಗರವಾಸಿಗಳು.

ಕಾಮಗಾರಿ ಪ್ರಗತಿಯಲ್ಲಿದೆ: ‘ಐದು ವರ್ಷಗಳಿಂದೀಚೆಗೆ ಬಡಾವಣೆಗಳ ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಎಲ್ಲೆಲ್ಲಿ ಕಚ್ಚಾ ರಸ್ತೆಗಳಿವೆ ಎಂಬುದನ್ನು ಗುರುತಿಸಿ, ಅಭಿವೃದ್ಧಿ ಮಾಡಲಾಗುತ್ತಿದೆ. ಕೆಲ ಬಡಾವಣೆ, ವಾರ್ಡ್‌ಗಳಲ್ಲಿ ಕೆಲಸಗಳು ನಡೆಯುತ್ತಿದೆ’ ಎಂದು ನಗರಸಭೆ ಕಾರ್ಯಪಾಲಕ ಎಂಜಿನಿಯರ್‌ ಸತ್ಯಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಶೀಘ್ರ ಟೆಂಡರ್‌:ಎಲ್ಲ ಬಡಾವಣೆಗಳಲ್ಲಿನ ರಸ್ತೆ, ಚರಂಡಿ ಕಾಮಗಾರಿಗಳ ಅಭಿವೃದ್ಧಿಗೆ ಶೀಘ್ರವೇ ಟೆಂಡರ್‌ ಕರೆದು ತ್ವರಿತವಾಗಿ ಕೆಲಸ ಆರಂಭಿಸುತ್ತೇವೆ ಎಂದು ನಗರಸಭೆ ಆಯುಕ್ತ ಎಂ. ರಾಜಣ್ಣ ‌ಅವರು ತಿಳಿಸಿದರು.

ನಗರ ಅಭಿವೃದ್ಧಿಗೆ ₹79 ಕೋಟಿ
2016–17ನೇ ಸಾಲಿನಲ್ಲಿ ಚಾಮರಾಜನಗರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ವಿಶೇಷ ಅನುದಾನದ ಅಡಿಯಲ್ಲಿ ₹50 ಕೋಟಿ ಮತ್ತು ನಗರೋತ್ಥಾನದ ಅಡಿಯಲ್ಲಿ ₹29 ಕೋಟಿ ಸೇರಿದಂತೆ ಒಟ್ಟು ₹79 ಕೋಟಿ ಬಿಡುಗಡೆ ಮಾಡಿತ್ತು.

‘ನಗರೋತ್ಥಾನ ಯೋಜನೆಯ ಅಡಿಯಲ್ಲಿ ರಸ್ತೆ ನಿರ್ಮಾಣಕ್ಕೆ ₹18.25 ಕೋಟಿ, ಚರಂಡಿ ಕಾಮಗಾರಿಗೆ, ಕುಡಿಯುವ ನೀರು ಪೂರೈಕೆಗೆ ₹ 11.40ಕೋಟಿ ವೆಚ್ಚ ಮಾಡಲಾಗಿದೆ.ವಿಶೇಷ ಅನುದಾನ ₹ 50 ಕೋಟಿಯಲ್ಲಿ ₹ 37 ಕೋಟಿ ಲೋಕೋಪಯೋಗಿ ಇಲಾಖೆಗೆ (ಪಿಡಬ್ಲ್ಯೂಡಿ) ಬಿಡುಗಡೆ ಮಾಡಲಾಗಿದೆ’ ಎಂದು ನಗರಸಭೆ ಆಯುಕ್ತ ಎಂ.ರಾಜಣ್ಣ ಮಾಹಿತಿ ನೀಡಿದರು.

‘ಉಳಿದ ₹13 ಕೋಟಿಯನ್ನು ನಗರಸಭೆಗೆ ಬಿಡುಗಡೆ ಮಾಡಲಾಗಿದ್ದು, ₹11 ಕೋಟಿ ವೆಚ್ಚದಲ್ಲಿ 7 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ₹2 ಕೋಟಿಯನ್ನು ಪರಿಹಾರ ನೀಡುವುದಕ್ಕಾಗಿ ತೆಗೆದಿರಿಸಲಾಗಿದೆ’ ಎಂದರು.

‘ಚಿಕ್ಕ ಅಂಗಡಿ ಬೀದಿ, ದೊಡ್ಡ ಅಂಗಡಿ ಬೀದಿ ಸಿಮೆಂಟ್‌ ರಸ್ತೆ ಪೂರ್ಣಗೊಂಡಿದೆ. ದೇವಸ್ಥಾನದ ಸುತ್ತ ಗ್ರಿಲ್‌ ಅಳವಡಿಕೆ ಕಾರ್ಯನಡೆಯುತ್ತಿದೆ. ಚೆನ್ನೀಪುರದ ಮೋಳೆ ರಸ್ತೆ, ಚರಂಡಿ ಕಾಮಗಾರಿ ಪೂರ್ಣಗೊಂಡಿದೆ.ತಿಬ್ಬಳ್ಳಿ ಕಟ್ಟೆ, ನ್ಯಾಯಾಲಯ ರಸ್ತೆ ಕಾಮಗಾರಿಗೆ₹ 3.5 ಕೋಟಿ ಟೆಂಡರ್‌ ಕರೆದಿದ್ದೇವೆ. ಲೋಕೋಪಯೋಗಿ ಇಲಾಖೆ 900 ಮೀಟರ್‌ ಉದ್ದದ ನ್ಯಾಯಾಲಯ ರಸ್ತೆ ಕಾಮಗಾರಿ ಮುಗಿಸಿ ನಮಗೆ ಹಸ್ತಾಂತರಿಸಿದರೆ ಉಳಿದ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.