ADVERTISEMENT

ಬಿಸಿಲ ಬೇಗೆಯಲ್ಲಿ ಬೀಗುವ ತರುಲತೆ!

ಯಳಂದೂರು; ಮನಕ್ಕೆ ಮುದ ನೀಡುವ ತಾಪದ ಹೂಗಳು

ನಾ.ಮಂಜುನಾಥ ಸ್ವಾಮಿ
Published 14 ಮೇ 2022, 16:21 IST
Last Updated 14 ಮೇ 2022, 16:21 IST
ಬಿಸಿಲಿನ ತಾಪದ ನಡುವೆಯೇ ಯಳಂದೂರು ತಾಲ್ಲೂಕಿನ ಸುತ್ತಮುತ್ತ ಕಂಡು ಬಂದ ಆಕರ್ಷಣೀಯ ಹೂವುಗಳು
ಬಿಸಿಲಿನ ತಾಪದ ನಡುವೆಯೇ ಯಳಂದೂರು ತಾಲ್ಲೂಕಿನ ಸುತ್ತಮುತ್ತ ಕಂಡು ಬಂದ ಆಕರ್ಷಣೀಯ ಹೂವುಗಳು   

ಯಳಂದೂರು: ನಾಲ್ಕೈದು ದಿನಗಳಿಂದ ಮಳೆ, ಮೋಡ ಕವಿದ ವಾತಾವರಣ ಇತ್ತು ಎನ್ನುವುದು ಬಿಟ್ಟರೆ ಈ ತಿಂಗಳಾರಂಭದಲ್ಲಿಬಿಸಿಲ ಝಳ ವಿಪರೀತವಾಗಿತ್ತು. ಎರಡು ದಿನಗಳಿಂದ ಮಳೆ ನಿಂತಿದ್ದು, ಮತ್ತೆ ಸೂರ್ಯ ಪ್ರಜ್ವಲಿಸುವ ಲಕ್ಷಣ ಕಾಣಿಸುತ್ತಿದೆ.

ಮಳೆ ಇರಲಿ, ಬಿಸಿಲಿರಲಿ, ಚಳಿ ಇರಲಿ.. ನಮ್ಮ ಪರಿಸರದಲ್ಲಿ ಒಂದಿಲ್ಲೊಂದು ಹೂವುಗಳು ಅರಳಿ ನಿಂತು ಆಕರ್ಷಿಸುವುದು ಭೂಮಿಯ ವೈಶಿಷ್ಟ್ಯ.ಅತಿಯಾದ ತಾಪಕ್ಕೂ ವಿಕಸಿಸುವ ಪುಷ್ಪಲೋಕ ನಮ್ಮ ನಡುವೆ ಇದೆ. ಜನರನ್ನು ಸೆಳೆಯುವ ಬಣ್ಣದ ಲತೆಗಳು ಸೆಖೆ ಕಾಲವನ್ನು ಮರೆಸಿ, ಬಿಸಿಲ ಬೆಳಕಿನಲ್ಲೂ ಬೆಳದಿಂಗಳ ಚೆಲುವನ್ನು ಚೆಲ್ಲುತ್ತವೆ. ಬಹುತೇಕ ಹೂ–ಬಳ್ಳಿಗಳ ಹೆಸರುಗಳು ಗೊತ್ತಿಲ್ಲ. ಹಾಗಿದ್ದರೂ ಅವು ನಮ್ಮ ಕಣ್ಣು ಮತ್ತು ಮನಸ್ಸನ್ನು ತುಂಬುತ್ತಿವೆ. ಬೇಲಿ ಬದಿ, ಮನೆಗಳ ಕುಂಡಗಳಲ್ಲಿ, ಕಚೇರಿ, ಟೇಬಲ್ ಬದಿಗಳಲ್ಲಿಯೂ ಪುಷ್ಪಗಳು ಚಿತ್ತಾರ ಬಿಡಿಸುತ್ತಿವೆ.

‘ಈ ಗಿಡಗಳ ಆರೈಕೆಗೆ ವಿಶೇಷ ಆಸ್ಥೆ ವಹಿಸಬೇಕಾಗಿಲ್ಲ. ಎಂದೋ ನೆಟ್ಟ ಗಿಡ, ಬೇಸಿಗೆಯಲ್ಲಿ ಧುತ್ತೆಂದು ಅರಳುತ್ತದೆ. ಹೊಲ– ಗದ್ದೆಗಳ ಬಳಿ, ಕಾಡು– ಮೇಡುಗಳ ಇಳಿಜಾರಿನಲ್ಲಿ ಅಲ್ಪ ಮಳೆಗೂ ತಮ್ಮ ಇರುವಿಕೆ ಸಾರುತ್ತದೆ. ಈಚಿನ ದಿನಗಳಲ್ಲಿ ಪರಿಸರದಲ್ಲಿ ನಿರೀಕ್ಷೆಗೂ ಮೀರಿ ಕಾವು ಏರುತ್ತಿದೆ. ಪ್ರವಾಸ ಇಲ್ಲವೇ ಒಂದು ದಿನದ ಪಿಕ್‌ನಿಕ್‌ ಹೋಗುವುದು ಕಷ್ಟ ಆಗುತ್ತಿದೆ. ಈ ಸಮಯ ನಮ್ಮ ಹಿತ್ತಲು, ಊರ ಕೆರೆ, ಬೆಟ್ಟದ ಸಾಲು, ಗುಡ್ಡಗಳ ಸಮೀಪ ಅಲೆದಾಡಿದರೂ ಬೇಸಿಗೆ ಪುಷ್ಪಗಳ ದರ್ಶನ ಆಗುತ್ತದೆ’ ಎಂದು ಹೇಳುತ್ತಾರೆ ಏಟ್ರೀ ಕ್ಷೇತ್ರಪಾಲಕ ಜಡೇಸ್ವಾಮಿ.

ADVERTISEMENT

‘ಕಳೆದ ಬೇಸಿಗೆಯಲ್ಲಿ ಊಟಿಯಿಂದ ಬರುವಾಗ ಹುಲ್ಲಿನ ಪ್ರಭೇದದ ಗಿಡ ತಂದು ಕುಂಡಕ್ಕೆ ಹಾಕಿದ್ದೆವು. ಈ ವರ್ಷ ಒಂದೆರಡು ಮಳೆ ಬೀಳುತ್ತಲೇ ಹತ್ತಾರು ಲತೆಗಳು ಮೂಡಿ ಮನೆಯ ಅಂಗಳಕ್ಕೆ ಚಂದ ತುಂಬಿವೆ. ಮಳೆಗಾಲದಲ್ಲಿ ಪ್ರತಿ ದಿನ ಅರಳುವ ಕುಸುಮಗಳನ್ನು ಕಂಡು ಖುಷಿಯಾಯಿತು. ಇಂತಹ ಲಿಲ್ಲಿಗಳ ಹೆಸರು ಮಾತ್ರ ತಿಳಿದಿಲ್ಲ’ ಎಂದು ಪಟ್ಟಣದ ವಿದ್ಯಾರ್ಥಿ ಎಸ್.ಕುಮಾರ್ ಹೇಳಿದರು.

‘ಕುಂಡಗಳಲ್ಲಿ ಬೇಲಿ ಬದಿಯ ಹೂ ಸಸ್ಯಗಳ ಬೀಜ ಉದುರಿಸಿದ್ದೆವು. ಏಪ್ರಿಲ್‌ನಲ್ಲಿ ಕ್ರೀಂ ಬಣ್ಣದ ಹೂ ಬಿಟ್ಟಿದೆ. ಜನರನ್ನೂ ಆಕರ್ಷಿಸುತ್ತಿದೆ. ಇವುಗಳ ಸೌಂದರ್ಯ ಮತ್ತು ಸುವಾಸನೆಗೆ ಜೇನು, ಜೀರುಂಡೆ, ಚಿಟ್ಟೆ ಮತ್ತು ಕೀಟಗಳು ಸುಳಿಯುತ್ತವೆ’ ಎಂಬುದು ಗೃಹಿಣಿ ಗೌರಮ್ಮ ಅವರ ಮಾತು.

ಹತ್ತಾರು ಬಗೆ:ಕೆಲವರು ಮನೆ ಮುಂದೆ ಅಲೊವೆರಾ (ಲೋಳೆಸರ), ಮನಿಪ್ಲಾಂಟ್, ಸ್ನೇಕ್ ಪ್ಲಾಂಟ್ ಬೆಳೆಸಿದ್ದಾರೆ. ಕ್ಯಾಕ್ಟಸ್, ಆರ್ಕಿಡ್, ಪೀಸ್ ಲಿಲ್ಲಿ ಮುಂಗಾರು ಪೂರ್ವದಲ್ಲಿ ಮೊಗ್ಗುಗಳನ್ನು ಅರಳಿಸುತ್ತವೆ. ಜೇಡ್, ಸಕ್ಯುಲೆಂಡ್ ಸಸ್ಯಗಳು ಟ್ರೆಂಡಿಯಾಗಿದ್ದು, ಅದೃಷ್ಟದ ಗಿಡವೆಂದು ನಂಬುತ್ತಾರೆ. ಈ ಗಿಡಗಳು ಮಳೆಗಾಲದಲ್ಲಿ ಮಾರಾಟಕ್ಕೆ ಬರುತ್ತವೆ. ಸೂರ್ಯನ ಬೆಳಕು, ಸ್ವಲ್ಪ ನೀರು ಸಿಕ್ಕರೂ ಹೂಗಳು ಅರಳಿ ಸುಗಂಧ ಹರಡುತ್ತವೆ.

ಮನೆಯಲ್ಲಿರಲಿ ಲಿಲ್ಲಿ...

‘ಪ್ರಾಚೀನ ಕಾಲದಲ್ಲಿ ಲಿಲ್ಲಿ ಪುಷ್ಪಗಳನ್ನು ಆಹಾರ, ಅಲಂಕಾರಿಕ ಹಾಗೂ ಔಷಧಿ ಸಸ್ಯಗಳಾಗಿ ಬಳಸುತ್ತಿದ್ದರು. ಬಿಳಿ ಲಿಲ್ಲಿಗಳನ್ನು ಹೆಚ್ಚಾಗಿ ವಿವಾಹ, ಸಮಾರಂಭಗಳಲ್ಲಿ ಕರುಣೆ ಮತ್ತು ಪರಿ ಶುದ್ಧತೆ ಸಂಕೇತವಾಗಿ ಕಂಡಿದ್ದರು. ಹೈಬ್ರೀಡ್ ಮತ್ತು ಕಾಡು ಹೂಗಳನ್ನು ಅವುಗಳ ವರ್ಣ ಮತ್ತು ವೈವಿಧ್ಯದ ಆಧಾರದ ಮೇಲೆ ಗುರುತಿಸುತ್ತಾರೆ. ಎಲ್ಲ ಋತುಮಾನದಲ್ಲೂ ಲತೆಗಳು ಕಂಡು ಬರುತ್ತವೆ. ಬೇಸಿಗೆಯಲ್ಲಿ ನಿಸರ್ಗಕ್ಕೆ ರಂಗೋಲಿ ಚೆಲ್ಲುವ ಒಂದೆರಡು ಹೂ ಸಸ್ಯಗಳನ್ನು ಬೇಸಿಗೆಯಲ್ಲಿ ಮನೆ ತುಂಬಿಸಿಕೊಳ್ಳಿ’ ಎಂಬುದು ಸಸ್ಯ ಶಾಸ್ತ್ರಜ್ಞ ಮಹದೇಶ್ವರ ಅವರು ನೀಡುವ ಸಲಹೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.