ADVERTISEMENT

ನಂಜನಗೂಡು ಸೋಂಕಿತನ ಭೇಟಿಯಾಗಿದ್ದ ಚಾಮರಾಜನಗರ ಜಿಲ್ಲೆ ವ್ಯಕ್ತಿ

ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಿ ಆರೋಗ್ಯದ ಮೇಲೆ ನಿಗಾ, ಮಾದರಿ ರವಾನೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 15:26 IST
Last Updated 30 ಮಾರ್ಚ್ 2020, 15:26 IST
ಚಾಮರಾಜನಗರ ರೈಲು ನಿಲ್ದಾಣದಲ್ಲಿ ನಿಂತಿರುವ ಪಡಿತರ ತುಂಬಿರುವ ಗೂಡ್ಸ್‌ ರೈಲು
ಚಾಮರಾಜನಗರ ರೈಲು ನಿಲ್ದಾಣದಲ್ಲಿ ನಿಂತಿರುವ ಪಡಿತರ ತುಂಬಿರುವ ಗೂಡ್ಸ್‌ ರೈಲು   

ಚಾಮರಾಜನಗರ: ಕೊರೊನಾ ವೈರಸ್‌ ಸೋಂಕು ತಗುಲಿರುವುದು ದೃಢಪಟ್ಟಿರುವಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿರುವ ಔಷಧ ಕಾರ್ಖಾನೆಯ ಮೊದಲ ಸಿಬ್ಬಂದಿಯ ಜೊತೆ ನೇರ ಸಂಪರ್ಕ ಹೊಂದಿರುವ ಜಿಲ್ಲೆಯ ವ್ಯಕ್ತಿಯೊಬ್ಬರ ಆರೋಗ್ಯದ ಮೇಲೆ ಜಿಲ್ಲಾಡಳಿತ ತೀವ್ರ ನಿಗಾ ಇಟ್ಟಿದೆ.

ಅವರನ್ನು ಜಿಲ್ಲಾಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿದ್ದು, ಗಂಟಲಿನ ದ್ರವ ಹಾಗೂ ರಕ್ತದ ಮಾದರಿಗಳನ್ನು ಮೈಸೂರಿನ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಮಂಗಳವಾರ ಬೆಳಿಗ್ಗೆಯ ಒಳಗಾಗಿ ವರದಿ ಬರುವ ನಿರೀಕ್ಷೆ ಇದೆ. ವ್ಯಕ್ತಿಯಲ್ಲಿ ಕೊರೊನಾ ವೈರಸ್‌ ಸೋಂಕಿನ ರೋಗ ಲಕ್ಷಣಗಳು ಕಂಡು ಬಂದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೋಂಕು ದೃಢಪಟ್ಟ ಕಾರ್ಖಾನೆಯ ಮೊದಲ ಸಿಬ್ಬಂದಿ ಆರಂಭದಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಸಂದರ್ಭದಲ್ಲಿ, ಅದೇ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಜಿಲ್ಲೆಯ ವ್ಯಕ್ತಿ ಮಾರ್ಚ್‌ 23ರಂದು ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಆ ಬಳಿಕ ಅವರು ಕೆ.ಆರ್‌.ಆಸ್ಪತ್ರೆಗೆ ದಾಖಲಾಗಿ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿತ್ತು’ ಎಂದು ಮಾಹಿತಿ ನೀಡಿದರು.

ADVERTISEMENT

‘ನಮ್ಮ ಜಿಲ್ಲೆಯವರು ಸೋಂಕು ದೃಢಪಟ್ಟವರೊಂದಿಗೆ ನೇರ ಸಂಪರ್ಕ ಹೊಂದಿರುವ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಅವರನ್ನು ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಿ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದೇವೆ. ಅವರ ಗಂಟಲಿನ ದ್ರವ ಮತ್ತು ರಕ್ತವನ್ನು ಪರೀಕ್ಷೆಗೆ ಕಳುಹಿಸಿದ್ದೇವೆ’ ಎಂದರು.

40 ಜನ: ‘ಔಷಧ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಜಿಲ್ಲೆಯ 40 ಜನರನ್ನು ಗುರುತಿಸಿದ್ದೇವೆ. ಈ ಪೈಕಿ 35 ಜನರನ್ನು ಈಗಾಗಲೇ ಪ್ರತ್ಯೇಕವಾಗಿ ವಿಶೇಷ ನಿಗಾ ಘಟಕದಲ್ಲಿ ಇರಿಸಲಾಗಿದೆ. ಸೋಮವಾರ ಮತ್ತೆ ನಾಲ್ವರನ್ನು ಗುರುತಿಸಿದ್ದೇವೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಇವರೆಲ್ಲ ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ, ಸೋಂಕು ದೃಢಪಟ್ಟವರ ಸಂಪರ್ಕಕ್ಕೆ ಬಂದಿಲ್ಲ. ಯಾರಲ್ಲೂ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯದ ಮೇಲೆ ನಿಗಾ ಇರಿಸಿದ್ದೇವೆ’ ಎಂದರು.

ಏಳು ಮಂದಿ ನೆಗೆಟಿವ್‌: ‘ಜಿಲ್ಲೆಯಲ್ಲಿ ಇದುವರೆಗೆ ಎಂಟು ಜನರ ಗಂಟಲ ದ್ರವ ಹಾಗೂ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ ಏಳು ಜನರ ವರದಿ ನೆಗೆಟಿವ್‌ ಬಂದಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ವ್ಯಕ್ತಿಯೊಬ್ಬರ ಪರೀಕ್ಷಾ ವರದಿಯೂ ನೆಗೆಟಿವ್‌ ಇದೆ’ ಎಂದು ಅವರು ಹೇಳಿದರು.

ಅಕ್ರಮ ಮದ್ಯ ತಡೆಗೆ ಕ್ರಮ: ಜಿಲ್ಲೆಯ ವಿವಿಧ ಕಡೆಗಳಲ್ಲಿ ದಿಗ್ಬಂಧನದ ನಡುವೆಯೂ ಹೆಚ್ಚು ಬೆಲೆಗೆ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಬಕಾರಿ ಉಪ ಆಯುಕ್ತರನ್ನು ಕರೆದು ಮಾತನಾಡಿದ್ದೇನೆ. ದೂರುಗಳು ಬಂದ ಸಂದರ್ಭದಲ್ಲಿ ತಪಾಸಣೆ ನಡೆಸಿದ್ದೇವೆ. ಅಕ್ರಮ ವಹಿವಾಟಿನ ಮೇಲೆ ನಿಗಾ ಇಡಲಾಗುವುದು’ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ ಕುಮಾರ್‌ ಅವರು ಇದ್ದರು.

80 ವಲಸೆ ಕಾರ್ಮಿಕರಿಗೆ ಆಶ್ರಯ

ವಿವಿಧ ಊರುಗಳಿಂದ ಬಂದಿರುವ 80 ವಲಸೆ ಕಾರ್ಮಿಕರನ್ನು ಗುರುತಿಸಲಾಗಿದ್ದು, ಅವರಿಗೆ ಜಿಲ್ಲೆಯಲ್ಲೇ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೇಳಿದ್ದಾರೆ.

ತಮಿಳುನಾಡಿನಿಂದ ಬಂದಿರುವ 13 ಜನರಿಗೆ ಪುಣಜನೂರಿನ ಆಶ್ರಮ ಶಾಲೆಯಲ್ಲಿ, ಕೇರಳದತ್ತ ಹೊರಟಿದ್ದ 11 ಮಂದಿಯನ್ನು ಬೇಗೂರು ಬಳಿಯ ಆಶ್ರಮ ಶಾಲೆಯಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ ಯಳಂದೂರಿನ ಗೌಡಹಳ್ಳಿ 25 ಮಂದಿ, ಕೃಷ್ಣಾಪುರದಲ್ಲಿ 12, ಮಲ್ಲಿಗೆ ಹಳ್ಳಿಯಲ್ಲಿ 13, ಚಾಮರಾಜನಗರದಲ್ಲಿ ನಾಲ್ವರು ವಲಸೆ ಕಾರ್ಮಿಕರಿದ್ದು, ಅವರಿಗೂ ವಸತಿ, ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಪಡಿತರ ದಾಸ್ತಾನು ಲಭ್ಯ

‘ಈಗಾಗಲೇ ಮಾರ್ಚ್‌ ತಿಂಗಳವರೆಗಿನ ಪಡಿತರ ವಿತರಣೆ ಮಾಡಲಾಗಿದೆ. ಮಹಾರಾಷ್ಟ್ರದಿಂದ ರೈಲಿನಲ್ಲಿ 20 ಸಾವಿರ ಕ್ವಿಂಟಲ್‌ಗಳಷ್ಟು ಅಕ್ಕಿ, ಬೇಳೆ ಬಂದಿದೆ. ಹಾಗಾಗಿ, ಎರಡು ತಿಂಗಳಿಗೆ ಅಗತ್ಯವಾದ ಪಡಿತರ ದಾಸ್ತಾನು ಮಾಡಿದ್ದೇವೆ’ ಎಂದರು.

‘ಜಿಲ್ಲೆಯಲ್ಲಿ ತರಕಾರಿ ಹಾಗೂ ಇತರೆ ಅಗತ್ಯ ವಸ್ತುಗಳ ಕೊರತೆ ಇಲ್ಲ. ಮೈಸೂರಿನಲ್ಲಿ ಎಪಿಎಂಸಿ, ಇನ್ನಿತರ ಮಾರುಕಟ್ಟೆಗಳು ತೆರೆದಿವೆ. ಹಾಗಾಗಿ, ಅಲ್ಲಿಗೆ 10 ಲಾರಿಗಳನ್ನು ಕಳುಹಿಸಿ ಜಿಲ್ಲೆಗೆ ಬೇಕಾದ ವಸ್ತುಗಳನ್ನು ತರಲು ಕ್ರಮ ವಹಿಸಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಗ್ರಾಮೀಣ ಪ್ರದೇಶಗಳಿಗೆ ವಾಹನಗಳಲ್ಲಿ ತರಕಾರಿ ಮಾರಾಟ ಮಾಡಲಾಗುತ್ತಿದೆ. ಚಾಮರಾಜನಗರ ಸೇರಿದಂತೆ ಪಟ್ಟಣ ಪ್ರದೇಶಗಳಲ್ಲೂ ವಾಹನಗಳಲ್ಲಿ ತರಕಾರಿ ಮಾರಾಟ ಮಾಡುವುದಕ್ಕೆ ಸೂಚಿಸಲಾಗಿದೆ’ ಎಂದು ರವಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.