ADVERTISEMENT

ಬಿಆರ್‌ಟಿಯಲ್ಲಿ ನೀಲ ಕುರುಂಜಿ ಸೊಬಗು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 13:15 IST
Last Updated 6 ಡಿಸೆಂಬರ್ 2021, 13:15 IST
ಬಿಆರ್‌ಟಿ ಬೈಲೂರು ವಲಯದ ಬೆಟ್ಟದಲ್ಲಿ ಅರಳಿ ನಿಂತ ನೀಲ ಕುರುಂಜಿ
ಬಿಆರ್‌ಟಿ ಬೈಲೂರು ವಲಯದ ಬೆಟ್ಟದಲ್ಲಿ ಅರಳಿ ನಿಂತ ನೀಲ ಕುರುಂಜಿ   

ಹನೂರು: ಅಸಂಖ್ಯಾತ ಸಸ್ಯ ಸಂಪ‌ತ್ತು, ವನ್ಯಜೀವಿಗಳಿಗೆ ಆಶ್ರಯ ನೀಡಿರುವ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ಬೆಟ್ಟಗುಡ್ಡಗಳಲ್ಲಿ ಈಗ ‘ನೀಲ ಕುರಂಜಿ’ ಅರಳಿ ನಿಂತು, ಅರಣ್ಯದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

ಏಳು, 12 ವರ್ಷಗಳಿಗೊಮ್ಮೆ ಅರಳುವ ನೀಲ ಕುರುಂಜಿ (ಕುಂತಿಯಾನಾ) ಹೂ ಈಚೆಗೆ ಕೊಡಗು ಮತ್ತು ಚಿಕ್ಕಮಗಳೂರಿನ ಬೆಟ್ಟದ ಸಾಲುಗಳಲ್ಲಿ ಅರಳಿ ಪ್ರವಾಸಿಗರನ್ನು ತನ್ನತ್ತ ಸೆಳೆದಿತ್ತು.

ಬಿಆರ್‌ಟಿ ಅರಣ್ಯದ ಬೈಲೂರು ಹಾಗೂ ಪುಣಜನೂರು ವನ್ಯಜೀವಿ ವಲಯಗಳ ಬೆಟ್ಟಗಳಲ್ಲಿ ಕುರುಂಜಿ ಹೂ ಅರಳಿವೆ. ಇಡೀ ಬೆಟ್ಟಕ್ಕೆ ನೀಲಿ ಬಣ್ಣ ಹಾಸಿದಂತೆ ಭಾಸವಾಗುತ್ತಿದೆ. ಬೆಟ್ಟ ಪ್ರದೇಶವು ಹುಲಿ ರಕ್ಷಿತಾರಣ್ಯದಲ್ಲಿ ಇರುವುದರಿಂದ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಭೇಟಿ ನೀಡಲು ಅವಕಾಶ ಇಲ್ಲ.

ADVERTISEMENT

ಪಶ್ಷಿಮಘಟ್ಟ, ನೀಲಗಿರಿ ಬೆಟ್ಟಗಳಲ್ಲಿ ಈ ಹೂವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಬಿಆರ್‌ಟಿ ಅರಣ್ಯ ಪ್ರದೇಶವು ಪ‍ಶ್ಚಿಮ ಹಾಗೂ ಪೂರ್ವ ಘಟ್ಟಗಳು ಕೂಡುವ ಸ್ಥಳ.

ಬಿಆರ್‌ಟಿಯ ಬೈಲೂರು ವನ್ಯಜೀವಿ ವಲಯದಲ್ಲಿರುವ ಹೊನ್ನಮೇಟಿ ಎಸ್ಟೇಟ್ ಬಳಿಯಿರುವ ಹುಲ್ಲುಗಾವಲು ಪ್ರದೇಶದಲ್ಲಿ ನೀಲ ಕುರುಂಜಿ ಗಿಡಗಳಿವೆ. ಇದಕ್ಕೆ ಹೊಂದಿಕೊಂಡಂತೆ ಇರುವ ಬೇಡಗುಳಿ ಅರಣ್ಯ ಪ್ರದೇಶದಲ್ಲೂ ಈ ಹೂ ಅರಳಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್‌ ಕುಮಾರ್‌ ಅವರು, ‘ಇಲ್ಲಿಗೆ ಅಧಿಕಾರಿಯಾಗಿ ಬಂದ ಬಳಿಕ ಇದನ್ನು ಮೊದಲು ನೋಡಿದ್ದೇನೆ. ಇದನ್ನು ನಿಯಮದಂತೆ ದಾಖಲು ಮಾಡಲಾಗುವುದು. ಅಲ್ಲದೇ ಹಿಂದೆ ಇದು ಕಾಣಿಸಿಕೊಂಡಿರುವ ಬಗ್ಗೆ ಇಲಾಖೆಯಲ್ಲಿ ದಾಖಲಾಗಿದೆಯೇ ಎಂಬುದರ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.